Advertisement

ಪಕ್ಷ ಸಂಘಟನೆಗೆ ಟೊಂಕ ಕಟ್ಟಿದ ಅಂಬರೀಶ್‌

04:50 PM Nov 29, 2017 | Team Udayavani |

ಮಂಡ್ಯ: ಚುನಾವಣೆ ಸಮೀಪಿಸುತ್ತಿದ್ದಂತೆ ಜಿಲ್ಲಾ ಕಾಂಗ್ರೆಸ್‌ನಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸು ಪಡೆದುಕೊಂಡಿವೆ. ಇದೀಗ ಪಕ್ಷ ಸಂಘಟನೆಗೆ ಶಾಸಕ ಅಂಬರೀಶ್‌ ಟೊಂಕ ಕಟ್ಟಿ ನಿಂತಿದ್ದಾರೆ. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನ ಮತ್ತು ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಬೆಂಬಲಿಗರನ್ನು ನೇಮಿಸುವಂತೆ ಮಂಗಳವಾರ ಅಂಬರೀಶ್‌ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿದ್ದಾರೆ.

Advertisement

ಮಾಜಿ ಸಚಿವ ಮತ್ತು ಹಾಲಿ ಶಾಸಕ ಅಂಬರೀಶ್‌ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಪಕ್ಷವನ್ನು ಬಲಪಡಿಸುವ ದೃಷ್ಟಿಯಿಂದ ಶೀಘ್ರವೇ ಜಿಲ್ಲಾ ಕಾಂಗ್ರೆಸ್‌ ಮತ್ತು ಡಿಸಿಸಿ ಬ್ಯಾಂಕ್‌ ಅಧ್ಯಕ್ಷರ ಬದಲಾವಣೆ ಮಾಡಬೇಕು. ಇಲ್ಲವಾದಲ್ಲಿ ನಾನೇ ಅವರ ವಿರುದ್ಧ ಅವಿಶ್ವಾಸ ತಂದು ಕೆಳಗಿಳಿಸಬೇಕಾಗುತ್ತದೆ ಎಂದು ತಮ್ಮದೇ ಧಾಟಿಯಲ್ಲಿ ಮಾತನಾಡಿದ್ದಾರೆ.

ಆತುರ ಬೇಡ: ನನ್ನ ಕೆಲಸಗಳನ್ನು ನೀವು ತಡ ಮಾಡದೆ ಮಾಡಿಕೊಡಬೇಕು ಎಂದು ಅಂಬರೀಶ್‌ ಹೇಳಿದಾಗ, ಮುಖ್ಯಮಂತ್ರಿಗಳು ತಮ್ಮದೇ ಆದ ಧಾಟಿಯಲ್ಲಿ “ಶಾಂತನಾಗಿರು ಅಂಬರೀಶ. ನಿನ್ನ ಬೇಡಿಕೆ ಪರಿಶೀಲನೆ ಮಾಡುತ್ತೇನೆ. ತಕ್ಷಣಕ್ಕೆ ಬದಲಾವಣೆ ಮಾಡಲಾಗದು. ಸ್ವಲ್ಪ$ಸಮಯ ಕೊಡು. ಅವರಿಂದ ರಾಜೀನಾಮೆ ಪಡೆದು ನಿನ್ನ ಬೆಂಬಲಿಗರಿಗೆ ಅವಕಾಶ ಮಾಡಿಕೊಡುವೆ. ಆತುರ ಮಾಡಬೇಡ ಎಂದು ತಿಳಿಸಿದರೆಂದು ಅಂಬರೀಶ್‌ ಪರಮಾಪ್ತ ಅಮರಾವತಿ ಚಂದ್ರಶೇಖರ್‌ “ಉದಯವಾಣಿಗೆ ತಿಳಿಸಿದರು.

ಚುನಾವಣೆ ಸಮೀಪಿಸುತ್ತಿದೆ. ಮಂಡ್ಯದಲ್ಲಿ ಪಕ್ಷಕ್ಕೆ ಬಲ ತುಂಬುವ ಅಗತ್ಯವಿದೆ. ಸಾಕಷ್ಟು ದಿನಗಳಿಂದ ಕಾರ್ಯಕರ್ತರು ದುಡಿದಿದ್ದಾರೆ. ಅವರಿಗೂ ಅವಕಾಶ ಕಲ್ಪಿಸಬೇಕಿದೆ. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಂ.ಎಸ್‌.ಆತ್ಮಾನಂದ ಹಾಗೂ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಅಧ್ಯಕ್ಷ ವಿ.ಡಿ.ಹರೀಶ್‌ ಅವರನ್ನು ಚುನಾವಣೆ ದೃಷ್ಟಿಯಿಂದ ಬದಲಾವಣೆ ಮಾಡಬೇಕು ಎಂದು ಮುಖ್ಯಮಂತ್ರಿಗಳಿಗೆ ತಿಳಿಸಿದ್ದಾರೆ ಎಂದು ಹೇಳಿದರು.

ರಾಜೀನಾಮೆ ಕೊಟ್ಟಿಲ್ಲ: ಮಂಡ್ಯ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಹರೀಶ್‌ ಅವರ ಒಪ್ಪಂದ ಅವಧಿ 24 ತಿಂಗಳು ಮುಗಿದಿದೆ. ಆದರೂ ರಾಜೀನಾಮೆ ನೀಡದೆ ಓಡಾಡಿಕೊಂಡಿದ್ದಾರೆ. ಈಗ ಅವರಿಂದ ರಾಜೀನಾಮೆ ಪಡೆದು ಅಶ್ವಥ್‌ ಅವರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎಂಬ ಬೇಡಿಕೆಯನ್ನು ಅಂಬರೀಶ್‌ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದೆ ಇಟ್ಟಿದ್ದಾರೆ ಎಂದು ಆಪ್ತ ಮೂಲಗಳು ಹೇಳಿವೆ.

Advertisement

ಅವಿಶ್ವಾಸ ತರುವೆ: ಈ ರೀತಿ ಅಧಿಕಾರದ ಗದ್ದುಗೆಯನ್ನು ಗಟ್ಟಿಯಾಗಿ ಹಿಡಿದು ಕುಳಿತುಕೊಂಡರೆ ನಮ್ಮ ಮಾತಿಗೆ ಬೆಲೆ ಇಲ್ಲವೇ ಎಂಬ ಪ್ರಶ್ನೆ ಅಂಬರೀಷ್‌ ಅವರದ್ದಾಗಿತ್ತು. ತಕ್ಷಣವೇ ಹರೀಶ್‌ ಅವರಿಂದ ರಾಜೀನಾಮೆ ಪಡೆದು ಒಪ್ಪಂದದಂತೆ ಅಶ್ವಥ್‌ ಅವರಿಗೆ ಅವಕಾಶ ಕೊಡಬೇಕು. ಇಲ್ಲವಾದರೆ ಅವರನ್ನು ಅವಿಶ್ವಾಸ ತಂದು ಕೆಳಗಿಳಿಸುವುದು ನನಗೆ ಗೊತ್ತಿದೆ ಎಂದು ನೇರವಾಗಿಯೇ ಹೇಳಿದ್ದಾರೆ ಎನ್ನಲಾಗಿದೆ.

ಅಂಬರೀಶ್‌ ಅವರು ಮುಂದಿಟ್ಟಿರುವ ಎರಡು ಬೇಡಿಕೆಗೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದು ಗೊತ್ತಾಗಿದ್ದು, ಮುಂದಿನ ವಾರ ಮೈಸೂರಿಗೆ ಬಂದಾಗ ಸಮಸ್ಯೆ ಬಗೆಹರಿಸುವುದಾಗಿ ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಲಾಗಿದೆ.

ಡಿಸಿಸಿ ಅಧ್ಯಕ್ಷರ ಬದಲಾವಣೆ: ಮಂಡ್ಯ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಂ.ಎಸ್‌.ಆತ್ಮಾನಂದ ಅವರನ್ನು ಬದಲಾವಣೆ ಮಾಡಲು ಶಾಸಕ ಅಂಬರೀಷ್‌ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿದ್ದಾರೆ. ಮುಖ್ಯಮಂತ್ರಿಗಳ ಭೇಟಿ ವೇಳೆ ಡಿಸಿಸಿ ಬ್ಯಾಂಕ್‌ ಅಧ್ಯಕ್ಷರನ್ನು ಬದಲಿಸಬೇಕು. ಜಿಪಂ ಮಾಜಿ ಅಧ್ಯಕ್ಷ ವಿವೇಕಾನಂದ ಅಥವಾ ಸಿ.ಡಿ.ಗಂಗಾಧರ್‌ ಅವರನ್ನು ನೇಮಕ ಮಾಡಲು ಅಂಬರೀಷ್‌ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿದ್ದಾರೆ ಎಂದು ಗೊತ್ತಾಗಿದೆ. 

ಈ ಸಂಬಂಧ ತಾವು ಕಾಂಗ್ರೆಸ್‌ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಜೊತೆ ಮಾತನಾಡಿ, ಅಂತಿಮ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆಂದು ಹೇಳಲಾಗಿದೆ. ಒಟ್ಟಿನಲ್ಲಿ ರಮ್ಯಾ ಆಗಮನಕ್ಕೆ ಮುನ್ನ ಕ್ಷೇತ್ರ ರಾಜಕಾರಣದಲ್ಲಿ ಅಂಬರೀಶ್‌ ಸಕ್ರಿಯರಾಗಲು ಮುಂದಾಗಿದ್ದಾರೆ. ಇದರಿಂದ ಅವರ ಬೆಂಬಲಿಗರಿಗೆ ಹೊಸ ಶಕ್ತಿ ಬಂದಂತಾಗಿದ್ದು ಚಟುವಟಿಕೆಗಳನ್ನು ಚುರುಕುಗೊಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next