ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ, ಭಾರತದ ಅತ್ಯಂತ ಶ್ರೀಮಂತರ ಪೈಕಿ ಅಗ್ರಸ್ಥಾನವನ್ನು ಅಲಂಕರಿಸುವ ಮೂಲಕ ಅದಾನಿ ಗ್ರೂಪ್ಸ್ ಮುಖ್ಯಸ್ಥ ಗೌತಮ್ ಅದಾನಿ ಅವರನ್ನು ಹಿಮ್ಮೆಟ್ಟಿಸಿದ್ದಾರೆ. 360 ಒನ್‌ವೆಲ್ತ್ ಹುರೂನ್ ಇಂಡಿಯಾ ರಿಚ್ ಲಿಸ್ಟ್‌ನ 2023ರ ವರದಿಯನ್ನು ಮಂಗಳವಾರ ಬಿಡುಗಡೆಗೊಳಿಸಿದ್ದು, ಅದರಲ್ಲಿ ಅಂಬಾನಿ ಅವರ ಸಂಪತ್ತು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.2ರಷ್ಟು ಅಂದರೆ 8.09 ಲಕ್ಷ ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಅದಾನಿ ಅವರು ಶೇ.57ರಷ್ಟು ನಷ್ಟ ಅನುಭವಿಸಿದ್ದು, ಅವರ ಸಂಪತ್ತಿನ ಮೌಲ್ಯ 4.74 ಲಕ್ಷ ಕೋಟಿ ರೂ.ಗೆ ಇಳಿದಿದೆ. ಇನ್ನು ಅಗ್ರ ಮೂರನೇ ಶ್ರೀಮಂತರಾಗಿ ಸೈರಸ್ ಪೂನಾವಾಲ ಹಾಗೂ 4 ಮತ್ತು 5ನೇ ಸ್ಥಾನದಲ್ಲಿ ಕ್ರಮವಾಗಿ ಎಚ್‌ಸಿಎಲ್ ಮುಖ್ಯಸ್ಥ ಶಿವ ನಾಡರ್, ಹಿಂದುಜಾ ಸಮೂಹದ ಮುಖ್ಯಸ್ಥ ಗೋಪಿಚಂದ್ ಸ್ಥಾನ ಪಡೆದಿದ್ದಾರೆ.
ರತನ್‌ಗೆ ಅತಿಹೆಚ್ಚು ಫಾಲೋವರ್ಸ್ !
ಖ್ಯಾತ ಉದ್ಯಮಿ ರತನ್ ಟಾಟಾ ಅವರಿಗೆ ಬಹುದೊಡ್ಡ ಫಾಲೋವರ್ಸ್ ಬಳಗವಿದ್ದು, ಭಾರತದಲ್ಲಿ ಎಕ್ಸ್(ಟ್ವಿಟರ್)ನಲ್ಲಿ ಅತಿಹೆಚ್ಚಾಗಿ ಫಾಲೋ ಮಾಡುತ್ತಿರುವ ಅಗ್ರ ಉದ್ಯಮಿಯೂ ಅವರೇ ಆಗಿದ್ದಾರೆ. ಹೀಗೆಂದು ಹುರೂನ್ ಇಂಡಿಯಾ ತಿಳಿಸಿದೆ. ಟ್ವಿಟರ್‌ನಲ್ಲಿ ರತನ್‌ಗೆ 126 ಲಕ್ಷ ಫಾಲೋವರ್ಸ್ ಇದ್ದು, ಅಗ್ರಸ್ಥಾನ ಪಡೆದಿದ್ದರೆ, 2ನೇ ಸ್ಥಾನದಲ್ಲಿ 108 ಲಕ್ಷ ಫಾಲೋವರ್ಸ್ ಹೊಂದಿರುವ ಆನಂದ್ ಮಹೀಂದ್ರಾ ಇದ್ದಾರೆ. ಪತಂಜಲಿಯ ಗುರು ಆಚಾರ್ಯ ಬಾಲಕೃಷ್ಣ ಮೂರನೇ ಸ್ಥಾನದಲ್ಲಿದ್ದು, ಅವರಿಗೆ 66 ಲಕ್ಷ ಮಂದಿ ಫಾಲೋವರ್ಸ್ ಇದ್ದಾರೆ.