ಉಡುಪಿ: ಭವಿಷ್ಯತ್ತಿನ ಯೋಜನೆಗಳಿಗೆ ಸ್ಪಷ್ಟ ರೂಪುರೇಷೆ ನೀಡುವಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ವಿದ್ಯಾರ್ಥಿಗಳ ಕಲಿಕಾಸಕ್ತಿ ವೃದ್ಧಿಯಾಗುತ್ತದೆ ಎಂದು ಶ್ರೀ ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ| ನಿ.ಬೀ. ವಿಜಯ ಬಲ್ಲಾಳ್ ಹೇಳಿದರು.
ಅಂಬಲಪಾಡಿಯ ಭವಾನಿ ಮಂಟಪದಲ್ಲಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನ ಅಂಬಲಪಾಡಿ ಇದರ ಸಹಯೋಗದಲ್ಲಿ ವಿದ್ಯಾಪೋಷಕ್ ಯಕ್ಷಗಾನ ಕಲಾರಂಗ ಉಡುಪಿ ಆಯೋಜಿಸಿರುವ “ಅಂಬಲಪಾಡಿ ಸನಿವಾಸ ಶಿಬಿರ’ದ ಸಮಾರೋಪದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಿಬಿರದ ನಿರ್ದೇಶಕ ಪ್ರವೀಣ್ ಗುಡಿ ವಿದ್ಯಾರ್ಥಿಗಳಲ್ಲಿ ಸಾಧನೆಯ ಬೀಜ ಬಿತ್ತುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಮಕ್ಕಳು ಶಿಸ್ತುಬದ್ಧ ಜೀವನಕ್ರಮ ಅಳವಡಿಸಿಕೊಳ್ಳಬೇಕು. ಇಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ಜೀವನದಲ್ಲಿ ಸಂಭವಿಸುವ ಏರುಪೇರು ಗಳನ್ನು ಸಮರ್ಥ ರೀತಿಯಲ್ಲಿ ಎದುರಿಸಿ ಯಶಸ್ಸು ಪಡೆಯಬೇಕು ಎಂದರು. ಉದ್ಯಮಿ ವಸಂತಕುಮಾರ್ ಶೆಟ್ಟಿ ಯಕ್ಷಗಾನ ಕಲಾಸಂಸ್ಕೃತಿಯಂತಹ ಕಾರ್ಯಕ್ರಮಗಳನ್ನು ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿ ಹಮ್ಮಿಕೊಳ್ಳಬೇಕು ಎಂದರು.
ಕಾಂತಾವರ ಕನ್ನಡ ಸಂಘದ ಅಧ್ಯಕ್ಷ ಡಾ| ನಾ. ಮೊಗಸಾಲೆ ಇಂದು ಸಮಾಜದಲ್ಲಿ ಮಾದರಿ ವ್ಯಕ್ತಿಗಳ ಸಂಖ್ಯೆ ಕಡಿಮೆ ಯಾಗುತ್ತಿದೆ. ನೂರಾರು ಮನೆಗಳನ್ನು ಸೇರಿಸಿ ಒಂದು ಮಾಡು ವಂತಹ ಕಾರ್ಯಕ್ರಮ ಸನಿವಾಸ ಶಿಬಿರ ಎಂದರು. ವಿದ್ಯಾರ್ಥಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಬಳಿಕ ತರಬೇತಿದಾರರನ್ನು ಅಭಿನಂದಿಸಲಾಯಿತು.
5 ದಿನಗಳ ಕಾಲ ನಡೆದ ಈ ಶಿಬಿರದಲ್ಲಿ ಜಿಲ್ಲೆಯಲ್ಲಿ ಆರ್ಥಿಕವಾಗಿ ಹಿಂದುಳಿದ 262 ಮಂದಿ ಪ್ರತಿಭಾನ್ವಿತ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಡಾ| ನಾರಾಯಣ ಎಂ.ಹೆಗಡೆ, ಡಾ| ಯು.ಸಿ.ನಿರಂಜನ್, ವಿಶ್ವನಾಥ ಶೆಣೈ, ಕೆ.ಬಾಬಣ್ಣ ಉಪಸ್ಥಿತರಿದ್ದರು. ಕಾರ್ಯದರ್ಶಿ ಮುರಲಿ ಕಡೇಕಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ನಿರೂಪಿಸಿದರು.