ನವದೆಹಲಿ: ಜಗತ್ತಿನ ಇ-ಕಾಮರ್ಸ್ ದೈತ್ಯ ಅಮೆಜಾನ್‌ನಿಂದ ಹತ್ತು ಸಾವಿರ ಮಂದಿಯನ್ನು ಕೆಲಸದಿಂದ ತೆಗೆದು ಹಾಕುವ ಬಗ್ಗೆ ಈಗ ಸ್ಪಷ್ಟ ಚಿತ್ರಣ ಸಿಕ್ಕಿದೆ. ಈ ಬಗ್ಗೆ ಕಂಪನಿಯ ಆಡಳಿತ ಮಂಡಳಿಯಿಂದ ಎಲ್ಲರಿಗೂ ಇಮೇಲ್ ರವಾನೆಯಾಗಿದೆ.
ಬದಲಾಗಿರುವ ಕಾಲಮಾನದಲ್ಲಿ ಕೆಲವೊಂದು ಹುದ್ದೆಗಳು ಅಗತ್ಯಇಲ್ಲವೆಂದು ತೀರ್ಮಾನ ಮಾಡಿದೆ. ಹೀಗಾಗಿ, ಇಂಥ ಕಠಿಣ ತೀರ್ಮಾನ ಕೈಗೊಳ್ಳದೆ ಬೇರೆ ದಾರಿ ಇಲ್ಲವೆಂದು ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಡೇವಿಡ್ ಲಿಂಪ್ ಪ್ರತಿಪಾದಿಸಿದ್ದಾರೆ. ಕಂಪನಿಯ ಡಿವೈಸಸ್ ಆ್ಯಂಡ್ ಸರ್ವಿಸಸ್ ವಿಭಾಗಕ್ಕೆ ಹೆಚ್ಚಿನ ಸಮಸ್ಯೆಯಾಗಲಿದೆ ಎಂದೂ ಅವರು ಹೇಳಿಕೊಂಡಿದ್ದಾರೆ.
ಇದೇ ವೇಳೆ, ದೇಶದಲ್ಲಿನ ಉದ್ಯೋಗಿಗಳಿಗೆ ಪ್ರತ್ಯೇಕವಾಗಿರುವ ಸ್ವಯಂ ಪ್ರೇರಿತವಾಗಿ ಕಂಪನಿಯಿಂದ ನಿರ್ಗಮಿಸುವ ಯೋಜನೆ (ವಿಎಸ್‌ಪಿ) ಜಾರಿಗೊಳಿಸಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. 22 ವಾರಗಳ ಮೂಲ ವೇತನಕ್ಕೆ ಸಮನಾಗಿರುವ ಮೊತ್ತ, ಆರು ತಿಂಗಳ ವರೆಗೆ ವೈದ್ಯಕೀಯ ವಿಮಾ ರಕ್ಷಣೆ ನೀಡಲಿದೆ.
ಆಲ್ಫಾಬೆಟ್‌ನಲ್ಲೂ ಪಿಂಕ್ ಸ್ಲಿಪ್?:
ಇಂಟರ್‌ನೆಟ್ ಸರ್ಚ್ ಎಂಜಿನ್ ದೈತ್ಯ ಗೂಗಲ್‌ನಲ್ಲಿ ಕೂಡ ಅನಗತ್ಯ ಹುದ್ದೆಗಳ ಕಡಿತ ಮಾಡಲು ಸಾಧ್ಯವೇ ಎಂಬ ಬಗ್ಗೆ ಪರಿಶೀಲನೆ ನಡೆಸಲು ಮಾತೃಸಂಸ್ಥೆ ಆಲ್ಫಾಬೆಟ್‌ಗೆ ಸೂಚನೆ ನೀಡಲಾಗಿದೆ. ಕಂಪನಿಯ ಪ್ರಧಾನ ಹೂಡಿಕೆದಾರ ಲಂಡನ್‌ನ ಟಿಸಿಐ ಫಂಡ್ ಮ್ಯಾನೇಜ್‌ಮೆಂಟ್ ಲಿಮಿಟೆಡ್‌ನ ಮುಖ್ಯಸ್ಥ ಕ್ರಿಸ್ಟೋಫರ್ ಹಾನ್ ಗೂಗಲ್ ಸಿಇಒ ಸುಂದರ್ ಪಿಚೈಗೆ ಪತ್ರ ಬರೆದಿದ್ದಾರೆ.
ಮತ್ತೂಂದು ಪ್ರಮುಖ ಬೆಳವಣಿಗೆಯಲ್ಲಿ ಉದ್ಯಮಿ ಎಲಾನ್ ಮಸ್ಕ್ ಅವರ ಮಾಲೀಕತ್ವದ ಸ್ಪೇಸ್ ಎಕ್ಸ್‌ನಿಂದ 40 ಮಂದಿ ಎಂಜಿನಿಯರ್‌ಗಳನ್ನು ವಜಾ ಮಾಡಲಾಗಿದೆ. ಈ ಕ್ರಮ ಪ್ರಶ್ನಿಸಿ ಕೆಲವರು ಅಮೆರಿಕದಲ್ಲಿ ದಾವೆ ಹೂಡಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.