ಮುಂಬಯಿ: ಜಗತ್ತಿನ ಅತ್ಯಂತ ದೊಡ್ಡ ಇ-ಕಾಮರ್ಸ್ ಸಂಸ್ಥೆ ಅಮೆಜಾನ್ ಗ್ರಾಹಕರಿಗೆ ವಸ್ತುಗಳನ್ನು ವಿತರಿಸುವ ನಿಟ್ಟಿನಲ್ಲಿ ವಿದ್ಯುತ್‌ಚಾಲಿತ ವಾಹನಗಳ ಖರೀದಿಗೆ ಮುಂದಾಗಿದೆ. ಈ ನಿಟ್ಟಿನಲ್ಲಿ ಅದು ಮಹೀಂದ್ರಾ ಎಲೆಕ್ಟ್ರಿಕ್, ಕೈನೆಟಿಕ್ ಗ್ರೀನ್ ಸೇರಿದಂತೆ ಹಲವು ವಿದ್ಯುತ್ ಚಾಲಿತ ವಾಹನಗಳ ಉತ್ಪಾದಕರ ಜತೆಗೆ ಮಾತುಕತೆ ನಡೆಸುತ್ತಿದೆ ಎಂದು ಮೂಲಗಳನ್ನು ಉಲ್ಲೇಖೀಸಿ “ದ ಇಕನಾಮಿಕ್ ಟೈಮ್ಸ್’ ವರದಿ ಮಾಡಿದೆ.
ಹಲವು ಸ್ಟಾರ್ಟ್‌ಅಪ್‌ಗಳ ಜತೆಗೆ ಕೂಡ ಅಮೆಜಾನ್ ಈ ಬಗ್ಗೆ ಮಾತುಕತೆ ನಡೆಸುತ್ತಿದೆ. ಅದರಲ್ಲಿ ಬೆಂಗಳೂರಿನ ಆಲ್ಟಿಗ್ರೀನ್, ಹೈದರಾಬಾದ್‌ನ ಇ-ಟ್ರಿಯೋ ಮತ್ತು ಗಯಂ ಮೋಟರ್ ವರ್ಕ್ಸ್, ಹೊಸದಿಲ್ಲಿಯ ಸ್ಮಾರ್ಟ್ ಇ ಕೂಡ ಸೇರಿದೆ.
ಇ-ಕಾಮರ್ಸ್ ಕಂಪೆನಿ ದೇಶದ ಕೆಲವು ಸ್ಟಾರ್ಟಪ್‌ಗ್ಳಲ್ಲಿ ಬಂಡವಾಳ ಹೂಡಿಕೆ ಮಾಡುವ ಇರಾದೆಯನ್ನೂ ಹೊಂದಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಅಮೆಜಾನ್‌ನ ಟ್ರಾನ್ಸ್ ಪೋರ್ಟ್ ಸರ್ವಿಸಸ್‌ನ ನಿರ್ದೇಶಕ ಅಭಿನವ್ ಸಿಂಗ್, “ಭಾರತದಲ್ಲಿರುವ ಹಲವು ಮೂಲ ಉತ್ಪಾದಕ ಸಂಸ್ಥೆಗಳ (ಒಇಎಂ) ಜತೆಗೆ ಮಾತುಕತೆ ನಡೆಸುತ್ತಿದ್ದೇವೆ. ಗ್ರಾಹಕರಿಗೆ ಸುರಕ್ಷಿತವಾಗಿ ವಸ್ತುಗಳನ್ನು ಪೂರೈಸುವಂಥ ವಾಹನ ಗಳನ್ನು ಉತ್ಪಾದಿಸುವುದರ ಬಗ್ಗೆ ಚರ್ಚಿಸುತ್ತಿದ್ದೇವೆ’ ಎಂದಷ್ಟೇ ಹೇಳಿದ್ದಾರೆ.
ಗ್ರಾಹಕರು ಆರ್ಡರ್ ಮಾಡಿದ ವಸ್ತುಗಳ ವಿತರಣೆಗೆಂದು 2025ರ ವೇಳೆಗೆ ದೇಶದಲ್ಲಿ 10 ಸಾವಿರ ವಿದ್ಯುತ್‌ಚಾಲಿತ ವಾಹನಗಳನ್ನು ಬಳಕೆ ಮಾಡಲು ಯೋಜಿಸಿದೆ ಅಮೆಜಾನ್. ಕೈನೆಟಿಕ್ ಗ್ರೀನ್ ಎನರ್ಜಿ ಸಂಸ್ಥೆ ವಿದ್ಯುತ್ ರಿಕ್ಷಾಗಳನ್ನು ಉತ್ಪಾದಿಸುತ್ತಿದ್ದು, ಆರಂಭದ 250-300 ವಾಹನಗಳನ್ನು ಇ-ಕಾಮರ್ಸ್ ಕಂಪೆನಿಗಳಿಗೆ ನೀಡಲಿದೆ. ಜತೆಗೆ 150 ಕಿ.ಮೀ. ದೂರದ ವರೆಗೆ ಪ್ರತೀ ಗಂಟೆಗೆ 50 ಕಿಮೀ ವೇಗದಲ್ಲಿ ಸಾಗಬಲ್ಲ ವಾಹನಗಳ ಉತ್ಪಾದನೆ ಸಾಧ್ಯವೇ ಎಂದು ಯೋಜಿಸುತ್ತಿದೆ. ಅದು 500- 600 ಕೆ.ಜಿ. ತೂಕದ ವಸ್ತುಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಬೇಕು ಎಂದು ಪ್ರತಿಪಾದಿಸುತ್ತಿದೆ.