Advertisement

Sulliaದ ಅರಣ್ಯದೊಳಗೊಂದು ವಿಸ್ಮಯಕಾರಿ ಬಾವಿ

12:58 PM Aug 02, 2024 | Team Udayavani |

ಸುಳ್ಯ: ಪ್ರಕೃತಿಯಲ್ಲಿ ಹಲವಾರು ವಿಸ್ಮಯಗಳನ್ನು ನಾವು ಕಾಣಬಹುದಾಗಿದೆ. ಕೆಲವೊಂದು ನಿತ್ಯ ಕಾಣುವ ವಿಷಯಗಳಾಗಿದ್ದರೂ ಅದರ ವಿಶೇಷತೆ ನಮ್ಮ ಗಮನಕ್ಕೆ ಬಾರದೆಯೇ ಇರುತ್ತವೆ. ಅದರಂತೆ ಸುಳ್ಯದ ಅರಣ್ಯ ಪ್ರದೇಶದೊಳಗೊಂದು ನೂರಾರು ಎಕ್ರೆ ಪ್ರದೇಶಗಳಿಂದ ಹರಿದು ಬರುವ ನೀರು ಒಂದೆಡೆ ಸೇರುತ್ತಿದ್ದು, ನೀರು ಸೇರುವ ಜಾಗ ಮಾತ್ರ ವಿಸ್ಮಯವಾಗಿದೆ.

Advertisement

ನಾರ್ಕೋಡು – ಅಜ್ಜಾವರ ರಸ್ತೆಯ ಅಜ್ಜಾವರ ಗ್ರಾಮದ ಮೇನಾಲದ ಮೆದಿನಡ್ಕ ಅರಣ್ಯ ಪ್ರದೇಶದಲ್ಲಿ ಈ ವಿಸ್ಮಯ ಕಾಣಬಹುದಾಗಿದೆ. ಇದು ಮಳೆಗಾಲದಲ್ಲಿ ಮಾತ್ರ ಕಾಣಬಹುದಾದ ಕುತೂಹಲದ ಸ್ಥಳವಾಗಿದೆ. ಮೇದಿನಡ್ಕ ಅರಣ್ಯ ಪ್ರದೇಶ ಹಾಗೂ ಆಸುಪಾಸಿನ ಸುಮಾರು 150-200 ಎಕ್ರೆ ಪ್ರದೇಶದ ಒರತೆ ನೀರು ಮಳೆಗಾಲದಲ್ಲಿ ಹರಿದು ಬಂದು ಅರಣ್ಯದೊಳಗಿನ ಬಾವಿ ಆಕೃತಿಯ ಗುಂಡಿಗೆ ಸೇರುತ್ತಿದೆ. ಮಳೆಗಾಲದಲ್ಲಿ ನೋಡಲು ಆಕರ್ಷಿತವಾಗಿದೆ.

ಹೇಗಿದೆ ಬಾವಿ?

ಅರಣ್ಯ ಪ್ರದೇಶದ ಒಳಗೆ ಈ ಪುರಾತನ ರೀತಿಯ ಬಾವಿ ಕಾಣಬಹುದಾಗಿದೆ. ಅರಣ್ಯ ಪ್ರದೇಶದ ಎತ್ತರದ ಪ್ರದೇಶದಿಂದ ನೀರು ಹರಿದು ಬಂದು ಈ ಬಾವಿಗೆ ಸೇರುತ್ತಿದೆ. ಈ ಬಾವಿ ವೃತ್ತಾಕಾರದಲ್ಲಿದ್ದು, ಬಂಡೆ ಕಲ್ಲು, ಮುರ ಕಲ್ಲಿನಿಂದ ಕೆತ್ತಿ ನಿರ್ಮಿಸಿದಂತೆ ಕಂಡುಬರುತ್ತಿದೆ. 20-25 ಅಡಿ ಆಳವನ್ನು ಈ ಬಾವಿ ಹೊಂದಿದೆ. ಬಾವಿಯ ಅಡಿ ಭಾಗದಲ್ಲಿ ಸೆಳೆಯಂತಿದ್ದು, ಇದೇ ಸೆಳೆಯಿಂದ ನೀರು ಹರಿದು ಹೊರಕ್ಕೆ ಹೋಗುತ್ತದೆ. ವಿಶೇಷ ಎಂದರೆ ಮಳೆಗಾಗಲದಲ್ಲಿ ನಿರಂತರ ನೀರು ಹರಿದು ಬಂದು ಸೇರುತ್ತಿದ್ದರೂ, ಈ ಬಾವಿ ತುಂಬುತ್ತಿಲ್ಲ, ಬಾವಿಯೊಳಗಿನಿಂದ ನೀರು ಬೇರೆಡೆಗೆ ಹರಿದು ಸಾಗುತ್ತಿದ್ದು, ಎಲ್ಲಿಗೆ ಸೇರುತ್ತದೆ ಎಂಬ ಸ್ಪಷ್ಟ ಮಾಹಿತಿ ಯಾರಲ್ಲೂ ಇಲ್ಲದಿದ್ದರೂ ಬಾವಿಗೆ ಸೇರುವ ನೀರು ತುದಿಯಡ್ಕ ಬೈಲು ಎಂಬಲ್ಲಿಗೆ ಸೇರುತ್ತದೆ ಎಂದು ಕೆಲವರು ತಿಳಿಸಿದರೆ, ಪಯಸ್ವಿನಿ ನದಿಗೆ ಸೇರುತ್ತದೆ ಎಂದು ಇನ್ನು ಕೆಲವರು ತಮ್ಮ ಅಭಿಪ್ರಾಯ ತಿಳಿಸುತ್ತಾರೆ. ಆದರೆ ಸ್ಪಷ್ಟತೆ ಇಲ್ಲ. ಬೇಸಗೆಯಲ್ಲಿ ಈ ಬಾವಿ ಹಾಗೂ ಸುತ್ತ ಮುತ್ತಲ ಪ್ರದೇಶ ನೀರು ಇಲ್ಲದೆ ಬರಡಾಗಿರುತ್ತದೆ.

ಮೆದಿನಡ್ಕದ ಅರಣ್ಯ ಪ್ರದೇಶದಲ್ಲಿ ಮಳೆಗಾಲದಲ್ಲಿ ಕಾಣಬಹುದಾದ ವಿವಿಧ ಭಾಗದ ನೀರು ಒಂದೆಡೆ ಸೇರುವ ಬಾವಿ ಆಕೃತಿ ವಿಶೇಷ ರೀತಿಯಲ್ಲಿ ಕಂಡುಬರುತ್ತಿದೆ. ಈ ಪರಿಸರದಲ್ಲೂ ಹಲವು ವಿಶೇಷತೆಗಳು ಕಂಡುಬಂದಿದ್ದು, ಈ ನಿಟ್ಟಿನಲ್ಲಿ ಇಲ್ಲಿನ ಅಧ್ಯಯನ ನಡೆದಲ್ಲಿ ಸ್ಪಷ್ಟ ಮಾಹಿತಿ ತಿಳಿಯಬಹುದಾಗಿದೆ.
– ರಾಜೇಶ್‌ ಶೆಟ್ಟಿ ಮೇನಾಲ, ಸ್ಥಳೀಯರು

Advertisement

ವಿವಿಧ ಆಕೃತಿಗಳು ಗೋಚರ

ಇದೇ ಪರಿಸರದಲ್ಲಿ ವಿಶಾಲವಾದ ಮೈದಾನದಂತಿರುವ ಜಾಗವಿದ್ದು ನಿಖರವಾಗಿ ತಿಳಿದುಬಾರದಿದ್ದರೂ ಒಂದು ರೀತಿಯ ವಿವಿಧ ಆಕೃತಿಗಳು ಗೋಚರಿಸುತ್ತಿದೆ. ಹಸು-ಕರು, ಆನೆ, ರೇಖೆಗಳು, ಚೆನ್ನೆಮಣೆ ಯಂತೆ ಕಂಡುಬಂದಿದೆ. ಒಟ್ಟಿನಲ್ಲಿ ಮೆದಿನಡ್ಕ ಪ್ರದೇಶದ ವಿಸ್ಮಯ ಬಾವಿ, ವಿಸ್ಮಯ ವಿಶಾಲ ಮೈದಾನ ಕುತೂಹಲವನ್ನು ಸೃಷ್ಟಿಸುತ್ತಿದ್ದು, ಜತೆಗೆ ಈ ಭಾಗದಲ್ಲೇ ಇನ್ನೂ ಎರಡು ಈ ರೀತಿಯ ಬಾವಿಗಳಿವೆ. ಹಚ್ಚ ಹಸುರಿನ ಈ ಪ್ರದೇಶದ ಬಗ್ಗೆ ಹಿರಿಯರ ಅಭಿಪ್ರಾಯ, ಸಂಶೋಧನೆಗಳು ನಡೆದಲ್ಲಿ ಜನರ ಸಂಶಯ, ನಿಗೂಢಗಳಿಗೆ ಉತ್ತರ ಸಿಗಲಿದೆ ಎನ್ನುತ್ತಾರೆ ಸ್ಥಳೀಯರು.

– ದಯಾನಂದ ಕಲ್ನಾರ್‌

Advertisement

Udayavani is now on Telegram. Click here to join our channel and stay updated with the latest news.

Next