Advertisement

ವಿಸ್ಮಯಕಾರಿ ಮರಗಳು!  ಮರಗಳ ವಿಚಿತ್ರಾಕಾರದ ಹಿಂದಿನ ರಹಸ್ಯ

06:40 AM Aug 31, 2017 | |

ಮರಗಳು ಹೇಗೆ ಬೆಳೆಯುತ್ತವೆ? ಇದೆಂಥಾ ಪ್ರಶ್ನೆ ಎಂದುಕೊಳ್ಳದಿರಿ. ಮರಗಳು ಉದ್ದಕ್ಕೆ, ಕೆಲವೊಮ್ಮೆ ಓರೆಕೋರೆಯಾಗಿಯೂ ಬೆಳೆಯುವುದಿದೆ. ಆದರೆ ಹಾಗೆ ಬೆಳೆಯಲೇಬೇಕೆಂಬ ನಿಯಮವೇನೂ ಇಲ್ಲ. ಈಗ ಯಾಕೆ ಈ ಪ್ರಶ್ನೆಯೆಂದರೆ ಪೋಲೆಂಡ್‌ನ‌ಲ್ಲಿ ಗ್ರಿಫೈನೋ ಎಂಬ ಹಳ್ಳಿಯಿದೆ. ಅಲ್ಲಿನ ಕಾಡು ಉಲ್ಟಾಪಲ್ಟಾ ಕಾಡು ಅಂತಲೇ ಹೆಸರುವಾಸಿ. ಏಕೆಂದರೆ ಆ ಕಾಡಿನ ಮರಗಳೆಲ್ಲವೂ ವಿಚಿತ್ರ ಆಕಾರದಲ್ಲಿ ಬೆಳೆಯುತ್ತವೆ. ಯಾವ ಆಕಾರವೆಂದರೆ, ಪ್ರಶ್ನಾರ್ಥಕ ಚಿಹ್ನೆಯನ್ನು ಉಲ್ಟಾ ಮಾಡಿದಾಗ ಸಿಗುವ ಸಿಗುವ ಆಕಾರ. ಇದಕ್ಕೆ ಕಾರಣ, ಇನ್ನೂ ನಿಗೂಢವಾಗಿದೆ!

Advertisement

1. 1930ರ ಆಸುಪಾಸಿನಲ್ಲಿ ಈ ಮರಗಳನ್ನು ನೆಡಲಾಗಿದ್ದು, ಆಗ ಅವುಗಳ ವಯಸ್ಸು 7-8. ನೆಡುವಾಗ ಸಹಜವಾಗಿಯೇ ಇದ್ದ ಸಸಿಗಳು ಕೆಲವೇ ವರ್ಷಗಳಲ್ಲಿ ವಿಚಿತ್ರಾಕಾರವನ್ನು ತಾಳಿದವು.

2. ಈ ಕಾಡಿನಲ್ಲಿ ಒಟ್ಟು 400 ಪೈನ್‌ ಮರಗಳಿದ್ದು, ಅವೆಲ್ಲವೂ ಉಲ್ಟಾ ಪ್ರಶ್ನಾರ್ಥಕ ಚಿಹ್ನೆಯ ಆಕಾರದಲ್ಲಿವೆ.  ಅಚ್ಚರಿಯೆಂದರೆ ಅವುಗಳಲ್ಲಿ ಬಹುತೇಕವು ಉತ್ತರಕ್ಕೆ ಮುಖ ಮಾಡಿವೆ.

3. ಮರಗಳು ಸಸಿಯಾಗಿದ್ದಾಗ ಬಿದ್ದ ಜೋರು ಹಿಮದಿಂದಾಗಿ ಅವು ಆ ರೂಪವನ್ನು ಪಡೆದವು ಎಂಬ ವಾದವನ್ನು ಸ್ಥಳೀಯರು ಮುಂದಿಡುತ್ತಾರಾದರೂ, ವಿಜ್ಞಾನಿಗಳು ಈ ವಾದವನ್ನು ಅಲ್ಲಗಳೆಯುತ್ತಾರೆ. ಏಕೆಂದರೆ ಕಾಡಿನ ಹೊರವಲಯದಲ್ಲಿರುವ ಪೈನ್‌ ಮರಗಳು ಮಾತ್ರ ನೇರವಾಗಿಯೇ ಇದ್ದು, ಕಾಡಿನ ಒಳಭಾಗದ ಪೈನ್‌ ಮರಗಳು ಮಾತ್ರವೆ ಡೊಂಕಾಗಿದೆ. ಹಿಮಧಾರೆಯಿಂದಾಗಿ ಡೊಂಕಾಗಿದ್ದರೆ ಎಲ್ಲಾ ಮರಗಳು ಡೊಂಕಾಗಿರಬೇಕಿತ್ತಲ್ಲ ಎಂದು ಪ್ರಶ್ನಿಸುತ್ತಾರೆ ವಿಜ್ಞಾನಿಗಳು.

4. ಇನ್ನೊಂದು ವಾದವೆಂದರೆ ಎರಡನೇ ಮಹಾಯುದ್ಧದ ಸಮಯದಲ್ಲಿ ಪೋಲೆಂಡ್‌ ಸೈನಿಕರು ಇಲ್ಲಿ ಟ್ಯಾಂಕರ್‌ಗಳ ಸಮೇತ ಬೀಡುಬಿಟ್ಟಿದ್ದಾಗ ಈ ಸಸಿಗಳ ಮೇಲೆ ಟ್ಯಾಂಕರ್‌ಗಳು ಓಡಾಡಿ, ಅಷ್ಟು ಭಾಗ ಮಾತ್ರ ಡೊಂಕಾಗಿದೆ ಬೆಳೆದಿದೆ ಎನ್ನುವುದು. ವಿಜ್ಞಾನಿಗಳು ಈ ವಾದವನ್ನು ತಳ್ಳಿಹಾಕುತ್ತಾರೆ.

Advertisement

5. ತರ್ಕಕ್ಕೆ ನಿಲುಕುವ ಒಂದು ವಾದ ಹೀಗಿದೆ. 1930ರ ಆಸುಪಾಸಿನಲ್ಲಿ ಹಡಗುಗಳ ನಿರ್ಮಾಣ ಕಾರ್ಯ ಆ ಹಳ್ಳಿಯಲ್ಲಿ ನಡೆದಿತ್ತು. ಹಡಗಿನ ನಿರ್ದಿಷ್ಟ ಭಾಗವನ್ನು ಸಿದ್ಧಪಡಿಸಲು ನಿರ್ದಿಷ್ಟ ಆಕಾರದ ಕಟ್ಟಿಗೆಯ ಅಗತ್ಯ ಬಿತ್ತು. ನಿರ್ದಿಷ್ಟ ಆಕಾರದಲ್ಲಿಯೇ ಮರಗಳನ್ನು ಬೆಳೆಸಿದರೆ ಸಮಯ ಮತ್ತು ವೆಚ್ಚ ಉಳಿಯುತ್ತದೆ ಎನ್ನುವ ಉಪಾಯ ಹಳ್ಳಿಗರಿಗೆ ಹೊಳೆಯಿತು. ಈ ಕಾರಣಕ್ಕಾಗಿ ಸಸಿಗಳನ್ನು ಒಂದಷ್ಟು ವರ್ಷಗಳ ಕಾಲ ನಿರ್ದಿಷ್ಟ ಆಕಾರದ ಕೊಳವೆಗಳೊಳಗೆ ಬೆಳೆಸಿದ್ದಾರೆ. ಬೆಲೆದ ನಂತರ ಕೊಳವೆಗಳನ್ನು ತೆಗೆದಿದ್ದಾರೆ. ಈ ವಾದವನ್ನು ವಿಜ್ಞಾನಿಗಳು ಸಮರ್ಥಿಸಿಕೊಳ್ಳುತ್ತಾರಾದರೂ ಸ್ಥಳೀಯರಿಗೆ ಈ ಕುರಿತು ಯಾವುದೇ ಮಾಹಿತಿಯಿಲ್ಲ. 

– ಹವನ

Advertisement

Udayavani is now on Telegram. Click here to join our channel and stay updated with the latest news.

Next