Advertisement

ಭಾರತದ ಮೊದಲ ರಾಕೆಟ್ ಉಡಾವಣೆಯ ಅದ್ಭುತ ಕಥನ

09:21 AM Jul 24, 2019 | mahesh |

ನವೆಂಬರ್‌ 21, 1963ರಲ್ಲಿ ಕೇರಳದ ತಿರುವನಂತಪುರದ ಸನಿಹದ ಒಂದು ಕುಗ್ರಾಮದಿಂದ ನಭಕ್ಕೆ ಯಶಸ್ವಿಯಾಗಿ ಚಿಮ್ಮಿದ ಒಂದು ಚಿಕ್ಕ ರಾಕೆಟ್, ಭಾರತದ ಬಾಹ್ಯಾಕಾಶ ಯುಗಾರಂಭವನ್ನು ಜಗತ್ತಿಗೆ ಸಾರಿತು. ತೆಂಗಿನ ಮರಗಳಿಂದ ಆವೃತವಾಗಿದ್ದ ಈ ಪುಟ್ಟ ಗ್ರಾಮವನ್ನು ಅದೇಕೆ ಡಾ. ವಿಕ್ರಂ ಸಾರಾಭಾಯ್‌, ಉಡಾವಣಾ ಪ್ರದೇಶವಾಗಿ ಆರಿಸಿಕೊಂಡರು? ಈ ಕಾರ್ಯಕ್ರಮದ ಯಶಸ್ಸಿಗಾಗಿ ಹೇಗೆ ಒಂದಿಡೀ ಹಳ್ಳಿಯೇ ಸ್ಥಳಾಂತರಗೊಂಡಿತು? ಕ್ಯಾಂಟೀನ್‌ ಇಲ್ಲದೇ ವಿಜ್ಞಾನಿಗಳು ಪಟ್ಟ ಪಡಿಪಾಟಲೇನು? ಇಂಥವೇ ಸ್ವಾರಸ್ಯಕರ ಚಿತ್ರಣಗಳು ಇಲ್ಲಿವೆ…

Advertisement

1963ರವರೆಗೂ ತಿರುವನಂತಪುರದ ಥುಂಬಾ ಎಂಬ ಮೀನುಗಾರಿಕಾ ಗ್ರಾಮದ ಹೆಸರನ್ನು ಯಾರೂ ಕೇಳಿರಲೇ ಇಲ್ಲ. ಕಚ್ಚಾ ಗುಡಿಸಲುಗಳು, ಶಾಂತ ಸಾಗರ ಮತ್ತು ತೆಂಗಿನ ತೋಪುಗಳಿಂದ ಸುತ್ತುವರಿದಿದ್ದ ಈ ಊರು, ರಾಕೆಟ್ ಉಡಾವಣಾ ಕೇಂದ್ರವಾಗುತ್ತದೆ ಎಂದು ಊಹಿಸಿಕೊಳ್ಳುವುದಕ್ಕೂ ಸಾಧ್ಯವಿರಲಿಲ್ಲ. ಆದರೆ, ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ ಡಾ. ವಿಕ್ರಂ ಸಾರಾಭಾಯ್‌ರಿಗೆ ಈ ಕುಗ್ರಾಮದತ್ತ ಚಿತ್ತ ಹರಿಯಿತು. ಮುಖ್ಯವಾಗಿ ಅವರ ಗಮನ ಸೆಳೆದದ್ದು ಥುಂಬಾ ಗ್ರಾಮದಲ್ಲಿದ್ದ ಸೇಂಟ್ ಮೇರಿ ಮ್ಯಾಗ್ಡಲೀನ್‌ ಚರ್ಚು. ಈ ಚರ್ಚು ಭೂಮಿಯ ಆಯಸ್ಕಾಂತೀಯ ಸಮಭಾಜಕ ಪ್ರದೇಶದಲ್ಲಿತ್ತು. ಹೀಗಾಗಿ ಭಾರತದ ಮೊದಲ ರಾಕೆಟ್ ಉಡಾವಣೆಗೆ ಈ ಪ್ರದೇಶ ಸೂಕ್ತ ಎಂದು ಸಾರಾಭಾಯಿಯವರಿಗೆ ಅನ್ನಿಸಿತು. ಸತ್ಯವೇನೆಂದರೆ, ಥುಂಬಾ ಗ್ರಾಮ ಅಯಾನುಗೋಳ ಮತ್ತು ವಾತಾವರಣದ ಅಧ್ಯಯನಕ್ಕೆ ಸೂಕ್ತವಾಗುವಂಥ (8°32’34” N and 76°51’32” E) ಪ್ರದೇಶವಾಗಿತ್ತು.

ಚರ್ಚ್‌ಗೆ ಬಂದ ಕಲಾಂ, ಸಾರಾಭಾಯ್‌
ಒಂದು ಸುದಿನ ಡಾ. ಸಾರಾಭಾಯ್‌ ತಮ್ಮ ಸಹೋದ್ಯೋಗಿಗಳೊಂದಿಗೆ (ಡಾ. ಅಬ್ದುಲ್ ಕಲಾಂ ಮತ್ತು ಆರ್‌. ಅರವಮುದನ್‌ ಕೂಡ ಇದ್ದರು) ಥುಂಬಾ ಗ್ರಾಮಕ್ಕೆ ಬಂದು, ನೇರವಾಗಿ ಬಿಷಪ್‌ರ ಮನೆಗೆ ಹೋದರು. ಆಗ ಬಿಷಪ್‌, ಚರ್ಚ್‌ನ ಎದುರಿನ ಮನೆಯಲ್ಲೇ ವಾಸಿಸುತ್ತಿದ್ದರು. ಚರ್ಚ್‌ ಮತ್ತು ಅದರ ಸನಿಹದ ಜಾಗವನ್ನು ಉಡಾವಣಾ ಕಾರ್ಯಕ್ಕೆ ಬಿಟ್ಟುಕೊಡಬೇಕು ಎಂದು ಈ ತಂಡ ಬಿಷಪ್‌ರನ್ನು ವಿನಂತಿಸಿತು. ಆದರೆ, ಬಿಷಪ್‌ ಪೀಟರ್‌ ಬರ್ನಾರ್ಡ್‌ ಪೆರೆರಾ ನೇರವಾಗಿ ಉತ್ತರ ಕೊಡಲಿಲ್ಲ. ‘ನೀವೆಲ್ಲ ಭಾನುವಾರದ ಪ್ರಾರ್ಥನೆಗೆ ಚರ್ಚ್‌ಗೆ ಬನ್ನಿ, ನಾನು ಈ ವಿಚಾರವನ್ನು ಜನರೊಂದಿಗೆ ಚರ್ಚಿಸುತ್ತೇನೆ’ ಎಂದರು.

ಭಾನುವಾರದ ಪ್ರಾರ್ಥನೆ ಮುಗಿದ ಮೇಲೆ ಬಿಷಪ್‌ ಅವರು, ನೆರೆದ ಜನರಿಗೆಲ್ಲ ಈ ವೈಜ್ಞಾನಿಕ ಯೋಜನೆಯ ಮಹತ್ವವನ್ನು ವಿವರಿಸಿ, ‘ಈ ಚರ್ಚ್‌ ಅನ್ನು ವಿಜ್ಞಾನಿಗಳ ಬಳಕೆಗೆ ಬಿಟ್ಟುಕೊಡೋಣವೇ?’ ಎಂದು ಕೇಳಿದರಂತೆ.

ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ತಮ್ಮ Ignited Minds ಪುಸ್ತಕದಲ್ಲಿ ಈ ಘಟನೆಯನ್ನು ಸುಂದರವಾಗಿ ವಿವರಿಸಿರುವುದು ಹೀಗೆ: ”ಬಿಷಪ್‌ರ ಪ್ರಯತ್ನದ ಫ‌ಲವಾಗಿ ನಮಗೆ ಅನುಮತಿ ಸಿಕ್ಕಿತು. ಮುಂದಿನ 100 ದಿನಗಳ ಅವಧಿಯಲ್ಲಿ ಗ್ರಾಮಸ್ಥರೆಲ್ಲ ಹೊಸ ಹಳ್ಳಿಗೆ ಸ್ಥಳಾಂತರಗೊಂಡರು; ಅಲ್ಲಿ ಅವರಿಗಾಗಿ ಹೊಚ್ಚ ಹೊಸ ಚರ್ಚ್‌ ಸಿದ್ಧವಾಗಿತ್ತು. ಇತ್ತ, ಥುಂಬಾದಲ್ಲಿನ ಬಿಷಪ್‌ರ ಮನೆಯೇ ನಮ್ಮ ಆಫೀಸ್‌ ಆಯಿತು. ಚರ್ಚ್‌ ಅನ್ನು ವರ್ಕ್‌ಶಾಪ್‌ ಆಗಿ ಬದಲಿಸಿದೆವು. ದನದ ಕೊಟ್ಟಿಗೆಗಳನ್ನೇ ಪ್ರಯೋಗಾಲಯ ಮತ್ತು ಶೇಖರಣಾ ಘಟಕಗಳಾಗಿ ಬಳಸಿಕೊಂಡೆವು. ನಮಗೆ ಸಿಕ್ಕ ಅನುದಾನ ಮತ್ತು ಸೌಲಭ್ಯಗಳ ಪ್ರಮಾಣ ಚಿಕ್ಕದಾಗಿದ್ದರೂ, ಉತ್ಸಾಹಿ ಯುವ ವಿಜ್ಞಾನಿಗಳ ಪಡೆ ಎದೆಗುಂದಲಿಲ್ಲ. ಎಲ್ಲರೂ ಸೇರಿ ಮೊದಲ ರಾಕೆಟ್ ಅನ್ನು ಜೋಡಿಸಲಾರಂಭಿಸಿದರು.”

Advertisement

ಈ ಯುವ ವಿಜ್ಞಾನಿಗಳು ಮತ್ತು ಇಂಜಿನಿಯರ್‌ಗಳ ತಂಡವನ್ನು ಡಾ. ಸಾರಾಭಾಯ್‌ ಅವರೇ ಬಹಳ ಜಾಗರೂಕತೆಯಿಂದ ಆಯ್ಕೆ ಮಾಡಿದ್ದರು. ತರಬೇತಿಗಾಗಿ ಇವರನ್ನೆಲ್ಲ ಅಮೆರಿಕದ ವರ್ಜೀನಿಯಾದಲ್ಲಿನ ನಾಸಾಸಂಸ್ಥೆಯ ಉಡಾವಣಾ ಪ್ರದೇಶ ವ್ಯಾಲಪ್ಸ್‌ ದ್ವೀಪಕ್ಕೆ ಕಳುಹಿಸಿಕೊಡಲಾಗಿತ್ತು. ಅಲ್ಲಿ ಈ ತಂಡ ‘ರಾಕೆಟ್ ಜೋಡಣೆ ಮತ್ತು ಉಡಾವಣೆ’ಯ ತರಬೇತಿ ಪಡೆದಿತ್ತು.

ಕ್ಯಾಂಟೀನ್‌ ಇರಲಿಲ್ಲ, ಊಟಕ್ಕೇನು ಗತಿ?
ಆರಂಭಿಕ ದಿನಗಳಲ್ಲಿ ಥುಂಬಾದಲ್ಲಿ ಕ್ಯಾಂಟೀನ್‌ ಅಥವಾ ಇನ್ಯಾವುದೇ ವ್ಯವಸ್ಥೆಯೂ ಇರಲಿಲ್ಲ. ಈ ಕಾರಣಕ್ಕಾಗಿ, ವಿಜ್ಞಾನಿಗಳೆಲ್ಲ ಬೆಳಗ್ಗಿನ ಉಪಾಹಾರಕ್ಕೆ ಮತ್ತು ರಾತ್ರಿ ಊಟಕ್ಕೆ ತ್ರಿವೇಂದ್ರಂನಲ್ಲಿನ ರೈಲ್ವೆ ಸ್ಟೇಷನ್‌ಗೆ ಸೈಕಲ್ ಮೇಲೆ ಹೋಗಿಬರುತ್ತಿದ್ದರು(ಮಧ್ಯಾಹ್ನದ ಊಟವನ್ನು ಪ್ಯಾಕ್‌ ಮಾಡಿಸಿಕೊಳ್ಳುತ್ತಿದ್ದರು). ಆಗ ಈ ತಂಡದ ಬಳಿ ಒಂದು ಜೀಪ್‌ ಇತ್ತಾದರೂ, ಅದೂ ಕೂಡ ಅನ್ಯ ಕೆಲಸಗಳಲ್ಲಿ ಬ್ಯುಸಿ ಇರುತ್ತಿತ್ತು. ಹೀಗಾಗಿ ವಿಜ್ಞಾನಿಗಳು ತಮ್ಮ ಓಡಾಟಕ್ಕೆ ಸೈಕಲ್ ಬಳಸಬೇಕಿತ್ತು, ಇಲ್ಲವೇ ನಡೆದೇ ಹೋಗಬೇಕಿತ್ತು. ಮಿಕ್ಕ ದಿನಗಳಲ್ಲಿ ವಿಜ್ಞಾನಿಗಳು ತುಂಬಾ ಬ್ಯುಸಿ ಇರುತ್ತಿದ್ದರಾದರೂ ವಾರಾಂತ್ಯ ಅಥವಾ ರಜಾ ದಿನಗಳಂದು ಅವರಿಗೆ ಅಷ್ಟೇನೂ ಕೆಲಸವಿರುತ್ತಿರಲಿಲ್ಲ. ಹೀಗಾಗಿ, ಒಂದೋ ಕೋವಲಂ ಅಥವಾ ಷಣ್ಮುಖಂ ಬೀಚ್ಗೆ ಹೋಗುತ್ತಿದ್ದರು ಅಥವಾ ಶ್ರೀಕುಮಾರ ಥಿಯೇಟರಿನಲ್ಲಿ ಹಳೆಯ ಹಾಲಿವುಡ್‌ ಸಿನೆಮಾ ನೋಡಿಬರುತ್ತಿದ್ದರು.

ಆಗೆಲ್ಲ, ರಾಕೆಟ್‌ನ ಬಿಡಿಭಾಗಗಳು ಮತ್ತು ಪೇಲೋಡ್‌ಗಳನ್ನು ಎತ್ತಿನ ಗಾಡಿ ಅಥವಾ ಸೈಕಲ್ ಮೇಲೆಯೇ ಉಡಾವಣಾ ತಾಣದವರಗೆ ಕೊಂಡೊಯ್ಯಲಾಗುತ್ತಿತ್ತು. ಈ ರೀತಿಯ ವಿನೀತ ವಾತಾವರಣದಲ್ಲೇ ಭಾರತ ಮೊದಲ ರಾಕೆಟ್ ಉಡಾವಣೆಗೆ ವೇದಿಕೆ ಸಿದ್ಧಪಡಿಸಿತು. ಅಮೆರಿಕದ ನಾಸಾ ಸಂಸ್ಥೆಯು ಅಪಾಚೆ ರಾಕೆಟ್ ಅನ್ನು ಪೂರೈಸಿತ್ತು…

ಆರು ತಿಂಗಳ ನಿರಂತರ ಪರಿಶ್ರಮದ ನಂತರ, ಕೊನೆಗೆ ನವೆಂಬರ್‌ 21, 1963ರಂದು ಭಾರತ ಮೊದಲ ಉಡಾವಣೆಗೆ ಸಜ್ಜಾಯಿತು. ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಹೆಸರಾಂತ ವ್ಯಕ್ತಿಗಳೆಲ್ಲ ಅಂದು ಹಾಜರಿದ್ದರು. ದೇಶದ ಪರಮಾಣು ಕಾರ್ಯಕ್ರಮದ ಪಿತಾಮಹ ಡಾ. ಹೋಮಿ ಜಹಾಂಗೀರ್‌ ಭಾಭಾ ಮತ್ತು ಇಂಡಿಯನ್‌ ಇನ್ಸ್‌ಟಿಟ್ಯೂಟ್ ಆಫ್ ಟ್ರಾಪಿಕಲ್ ಮೀಟಿಯರಾಲಜಿಯ ಸ್ಥಾಪಕ ಡಾ. ಪಿಶಾರೋಥ್‌ ರಾಮಾರಂಥ ದಿಗ್ಗಜರೂ ಇದ್ದರು. ಅಲ್ಲದೇ ಕೇರಳದ ಗವರ್ನರ್‌, ಜಿಲ್ಲಾಧಿಕಾರಿ ಮತ್ತು ಮುಖ್ಯವಾಗಿ ಬಿಷಪ್‌ ಕೂಡ ಆ ಐತಿಹಾಸಿಕ ಸಂದರ್ಭಕ್ಕೆ ಸಾಕ್ಷಿಯಾಗಲು ಬಂದಿದ್ದರು.


ಎದುರಾಯಿತು ವಿಘ್ನ

ಉಡಾವಣಾ ಸ್ಥಳಕ್ಕೆ ರಾಕೆಟ್ ಅನ್ನು ತಂದಾಗ, ವಿಪರೀತ ಎದುರುಗಾಳಿ ಬೀಸಲಾರಂಭಿಸಿತು. ಒಂದಾದ ನಂತರ ಒಂದರಂತೆ ಅಡ್ಡಿಗಳು ಎದುರಾಗಲಾರಂಭಿಸಿದವು. ಲಾಂಚರ್‌ ಮೇಲೆ ರಾಕೆಟ್ ಅನ್ನು ಏರಿಸಿ ನಿಲ್ಲಿಸುವ ಹೊತ್ತಲ್ಲೇ ಹೈಡ್ರಾಲಿಕ್‌ ಕ್ರೇನ್‌ನಲ್ಲಿ ಸೋರಿಕೆ ಆರಂಭವಾಯಿತು. ಅದ್ಹೇಗೋ, ರಾಕೆಟ್ ಅನ್ನು ವಿಜ್ಞಾನಿಗಳೇ ಸರಿಯಾದ ಸ್ಥಿತಿಯಲ್ಲಿ ನಿಲ್ಲಿಸಿದರು. ಇನ್ನೇನು ಉಡಾವಣೆ ಆರಂಭಿಸಬೇಕು ಎನ್ನುವಷ್ಟರಲ್ಲಿ ರಿಮೋಟ್ ವ್ಯವಸ್ಥೆ ಕೈಕೊಟ್ಟಿತು. ಕೊನೆಗೆ ಇವೆಲ್ಲವನ್ನೂ ಸರಿಪಡಿಸಲಾಯಿತು. ಜೋರಾಗಿ ಸೈರನ್‌ ಸದ್ದಾಯಿತು, ಉಡಾವಣಾ ಸ್ಥಳದಿಂದ ಎಲ್ಲರನ್ನೂ ದೂರ ಕಳುಹಿಸಲಾಯಿತು. ನಮ್ಮ ವಿಜ್ಞಾನಿಗಳೆಲ್ಲ ಉಸಿರು ಬಿಗಿ ಹಿಡಿದುಕೊಂಡು ನಿಂತರು.

ಸಂಜೆ 6.25. ಜಗತ್ತಿನ ಕುತೂಹಲದ ಕಣ್ಣುಗಳನ್ನು ಮತ್ತಷ್ಟು ಅಗಲಿಸುತ್ತಾ ರಾಕೆಟ್ ನಭಕ್ಕೆ ಚಿಮ್ಮಿತು. ನಿಮಿಷಗಳ ನಂತರ, ಬಾನಲ್ಲಿ ಸೋಡಿಯಂ ಆವಿಯ ಮೋಡ ಕಾಣಿಸಿಕೊಂಡಿತು. ಭಾರತ, ಬಾಹ್ಯಾಕಾಶದಲ್ಲಿ ತನ್ನ ಮೊದಲ ಹಸ್ತಾಕ್ಷರ ಹಾಕಿದ್ದು ಹೀಗೆ!

ಡಾ. ಸಾರಾಭಾಯ್‌ ಅಂತೂ ಉಲ್ಲಾಸದಿಂದ ‘ವಾಹ್‌, ಅದ್ಭುತ ರಾಕೆಟ್ ಶೋ’ ಎಂದು ಮನೆಗೆ ಟೆಲಿಗ್ರಾಂ ಕಳುಹಿಸಿದರು! ‘ಮರುದಿನ ಡಾ. ಸಾರಾಭಾಯ್‌ ಅವರು ಉಡಾವಣೆಯ ಯಶಸ್ಸಿನ ಖುಷಿಯಲ್ಲಿದ್ದ ವಿಜ್ಞಾನಿಗಳು-ಇಂಜಿನಿಯರ್‌ಗಳಿಗೆ ಅಭಿನಂದನೆ ಸಲ್ಲಿಸಿ, ಮುಂದಿನ ದಿನಗಳಲ್ಲಿ ಸ್ವದೇಶಿ ನಿರ್ಮಿತ ಉಪಗ್ರಹ ಉಡಾವಣಾ ವಾಹನನಿರ್ಮಿಸುವ ತಮ್ಮ ಕನಸನ್ನು ನಮ್ಮೊಂದಿಗೆ ಹಂಚಿಕೊಂಡರು’ ಎಂದು ಡಾ. ಕಲಾಂ ಬರೆಯುತ್ತಾರೆ.

ಕಳೆದ ಕೆಲವು ವರ್ಷಗಳಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಸಾರಾಭಾಯ್‌ರ ಕನಸನ್ನು ಈಡೇರಿಸಿರುವುದಷ್ಟೇ ಅಲ್ಲ, ಅತ್ಯಂತ ಕಡಿಮೆ ವೆಚ್ಚದಲ್ಲಿ ಬಾಹ್ಯಾಕಾಶ ಕಾರ್ಯಕ್ರಮಗಳನ್ನು ಯಶಸ್ವಿಯಾಗಿಸುತ್ತಾ ಜಗತ್ತಿನ ಹೊಟ್ಟೆಯನ್ನೂ ಉರಿಸುತ್ತಿದೆ!

ಈಗಲೂ ಥುಂಬಾ, ಇಸ್ರೋದ ಬಾಹ್ಯಾಕಾಶ ಕಾರ್ಯಕ್ರಮಗಳ ಕೇಂದ್ರ ಪ್ರದೇಶವಾಗಿದೆ. ಥುಂಬಾದಲ್ಲಿರುವ ವಿಕ್ರಂ ಸಾರಾಭಾಯ್‌ ಬಾಹ್ಯಾಕಾಶ ಕೇಂದ್ರವು ಭಾರತಕ್ಕೆ ಉಡಾವಣಾ ವಾಹನಗಳನ್ನು, ಭೂಸ್ಥಾಯಿ ಉಪಗ್ರಹಗಳನ್ನು(ದೂರಸಂಪರ್ಕ, ಟಿ.ವಿ. ಮತ್ತು ಹವಾಮಾನ ಮುನ್ಸೂಚನೆಗಳಿಗಾಗಿ ಬಳಸಲಾಗುತ್ತದೆ) ಕೊಟ್ಟಿದೆ. ಅಲ್ಲದೇ ಈ ಕೇಂದ್ರವು ಅತ್ಯಂತ ಅದ್ಭುತ ರಿಮೋಟ್ ಸೆನ್ಸಿಂಗ್‌ ಉಪಗ್ರಹಗಳನ್ನೂ ದೇಶಕ್ಕೆ ನೀಡಿದೆ.

ಇನ್ನು, ಭಾರತವನ್ನು ನಕ್ಷತ್ರ ಲೋಕದೆಡೆಗೆ ಕರೆದೊಯ್ಯಲು ಸಹಾಯ ಮಾಡಿದ ಆ ಪುಟ್ಟ ಮೇರಿ ಮ್ಯಾಗ್‌ಡಲೀನ್‌ ಚರ್ಚ್‌ನ ವಿಷಯಕ್ಕೆ ಬಂದರೆ, ಅದೀಗ ಬಾಹ್ಯಾಕಾಶ ಸಂಗ್ರಹಾಲಯವಾಗಿ ಬದಲಾಗಿದೆ. ವಿವಿಧ ರೀತಿಯ ಆಕರ್ಷಕ ರಾಕೆಟ್ಗಳು, ಉಪಗ್ರಹಗಳು ಮತ್ತು ಇತರೆ ಖಗೋಳಶಾಸ್ತ್ರ ಸಂಬಂಧಿ ಪರಿಕರಗಳು ಅದರಲ್ಲಿ ರಾರಾಜಿಸುತ್ತಾ ನಿಂತಿವೆ…

(ಲೇಖನ ಮೂಲ: www.thebetterindia.com)

 ಸಂಚಾರಿ ಪಾಲ್

Advertisement

Udayavani is now on Telegram. Click here to join our channel and stay updated with the latest news.

Next