Advertisement

ಹವ್ಯಾಸಿ ರಂಗಭೂಮಿ ಗಟ್ಟಿಗೊಳಿಸಿ

02:29 PM Feb 22, 2017 | |

ಧಾರವಾಡ: ಕರ್ನಾಟಕ ನಾಟಕ ಅಕಾಡೆಮಿ ಹಮ್ಮಿಕೊಂಡಿರುವ ರಾಜ್ಯಮಟ್ಟದ ಪ್ರಥಮ ಹವ್ಯಾಸಿ ರಂಗಭೂಮಿ ಸಮಾವೇಶದ 3ನೇ ದಿನವಾದ ಮಂಗಳವಾರ ನಗರದ ಆಲೂರು ವೆಂಕಟರಾವ್‌ ಭವನದಲ್ಲಿ ನಡೆದ ಹವ್ಯಾಸಿ ರಂಗಭೂಮಿ: ಹೆಜ್ಜೆ ಗುರುತು ಗೋಷ್ಠಿಯಲ್ಲಿ ರಂಗಭೂಮಿಯ ವಿವಿಧ ಆಯಾಮಗಳ ಕುರಿತಂತೆ ಚರ್ಚೆಗಳು ನಡೆದವು. 

Advertisement

ಹವ್ಯಾಸಿ ರಂಗಭೂಮಿ ಗ್ರಾಮೀಣ ಮತ್ತು ನಗರದ ನಡೆಗಳು ಎಂಬ ವಿಷಯ ಕುರಿತಂತೆ ಮೈಸೂರು ರಂಗಾಯಣ ನಿರ್ದೇಶಕ ಎಚ್‌. ಜನಾರ್ದನ (ಜನ್ನಿ) ಮಾತನಾಡಿ, ಟಿವಿ, ಮೊಬೈಲ್‌, ಸಿನೆಮಾನಂತಹ ಮಾಯಾ ಸಂಸ್ಕೃತಿಯಿಂದ ನಾಟಕ ಸಂಸ್ಕೃತಿ ಅಪಾಯಕ್ಕೆ ಸಿಲುಕುವಂತಾಗಿದೆ. ನಗರ ಪ್ರದೇಶಗಳಲ್ಲಿ ಮಾತ್ರ ಕಾಣುತ್ತಿದ್ದ ಈ ಸಂಸ್ಕೃತಿ ಕ್ರಮೇಣ ಹಳ್ಳಿಗಳಿಗೂ ಲಗ್ಗೆ ಇಟ್ಟಿದೆ.

ಕಾರಣ ಈಗ ಹಳ್ಳಿಗಳಲ್ಲಿ ಹವ್ಯಾಸಿ ರಂಗಭೂಮಿ ಗಟ್ಟಿಗೊಳಿಸುವ ಕಾರ್ಯ ಆಗಬೇಕಿದೆ. ಈ ನಿಟ್ಟಿನಲ್ಲಿ ಯುವ ಪ್ರತಿಭೆಗಳನ್ನು ಗುರುತಿಸಿ ಸೂಕ್ತ ವೇದಿಕೆ ನೀಡುವ ಕೆಲಸ ಆಗಬೇಕಿದೆ ಎಂದರು. ಸಮಾಜದ ಅಂಕುಡೊಂಕು ತಿದ್ದುವಲ್ಲಿ ಹಾಗೂ ಜಾಗೃತಿ ಮೂಡಿಸುವಲ್ಲಿ ನಾಟಕಗಳ ಪಾತ್ರ ಮುಖ್ಯವಾಗಿದೆ.

ಈ ಮೂಲಕ ಹವ್ಯಾಸಿ ರಂಗಭೂಮಿಯನ್ನು ಗ್ರಾಮೀಣ ಮಟ್ಟದಲ್ಲಿ ಪ್ರಾಮಾಣಿಕವಾಗಿ ಕಟ್ಟುವ ಮೂಲಕ ಹಳ್ಳಿ-ಹಳ್ಳಿಗಳಿಗೆ ತೆರಳಿ ಜನಜಾಗೃತಿ ಮೂಡಿಸಿದ್ದರೆ, ಕಳೆದ ವರ್ಷದಲ್ಲಿ ಸಾಲ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಜೀವ ರಕ್ಷಿಸಲು ಸಾಧ್ಯವಾಗಬಹುದಿತ್ತು ಎಂದು ಅಭಿಪ್ರಾಯಪಟ್ಟರು. 

ಹೂಲಿ ಶೇಖರ್‌ ಅಧ್ಯಕ್ಷತೆಯ ಈ ಗೋಷ್ಠಿಯಲ್ಲಿ ಹವ್ಯಾಸ ಮತ್ತು ಚಳವಳಿ ಇಂದಿನ ಸ್ಥಿತಿ ಕುರಿತಂತೆ ಎಚ್‌.ಎಸ್‌. ಉಮೇಶ ಹಾಗೂ ರೆಪರ್ಟರಿಗಳು ಕುರಿತಂತೆ ಪ್ರಕಾಶ ಬೆಳವಾಡಿ ಅವರು ತಮ್ಮ ವಿಚಾರ ಮಂಡಿಸಿದರು. ರಂಗಾಯಣದ ರೆಪರ್ಟರಿ ಕುರಿತು ರಂಗನಿರ್ದೇಶಕಿ ಎಸ್‌. ಮಾಲತಿ ಮಾತನಾಡಿ, ರಾಷ್ಟ್ರೀಯ ರಂಗ ಶಾಲೆ ಭಾರತದಲ್ಲೇ ಮೊದಲ ರೆಪರ್ಟರಿ ಎಂಬ ಹೆಗ್ಗಳಿಕೆ ಪಡೆದಿದೆ. 

Advertisement

ಈ ರೆಪರ್ಟರಿ ತಂಡದ ಕಲಾವಿದರು ಉತ್ತರ ಕರ್ನಾಟಕದಿಂದ ಹಿಡಿದು ದಕ್ಷಿಣ ಕರ್ನಾಟಕದ ಹಳ್ಳಿ-ಹಳ್ಳಿಗಳಿಗೂ ಸಂಚರಿಸಿ ಉತ್ತಮ ನಾಟಕಗಳನ್ನು ಪ್ರದರ್ಶಿಸಿದ್ದಾರೆ. ಈ ಕೆಲಸ ನಿರ್ವಹಿಸಿದ ಬಹುತೇಕ ಕಲಾವಿದರು ಸಾಧನೆಯ ಶಿಖರ ಏರಿದ್ದಾರೆ. ಆದರೆ ರೆಪರ್ಟರಿ ಮುಚ್ಚಿದರೆ ಆ ಕಲಾವಿದರು ಬದುಕು ಕಷ್ಟಕರವಾಗಲಿದೆ ಎಂದರು. ರಂಗನಿರ್ದೇಶಕ ಗಣೇಶ ಅಮಿನಗಡ, ನಾಟಕ ಅಕಾಡೆಮಿ ಸದಸ್ಯ ಜಗುಚಂದ್ರ ಕೂಡ್ಲ ಸೇರಿದಂತೆ ಇತರರು ಇದ್ದರು.

ಮಧ್ಯಾಹ್ನ ಸಮುದಾಯದಿಂದ ರಂಗಗೀತೆಗಳು ಪ್ರಸ್ತುತಗೊಂಡರೇ ಬೆಂಗಳೂರಿನ ರಂಗಾಭರಣ ತಂಡದಿಂದ ಗಂಡುಗಲಿ ಎಚ್ಚಮ ನಾಟಕ ಪ್ರದರ್ಶನಗೊಂಡಿತು. ಆ ಬಳಿಕ ಬೆಂಗಳೂರು ವಿಭಾಗದ ಹಿರಿಯ ಕಲಾವಿದರಾದ ಸಿ.ಕೆ. ಗುಂಡಣ್ಣ, ಟಿ.ಎಂ. ಬಾಲಕೃಷ್ಣ, ಕೆ.ಪಿ. ಪ್ರಕಾಶ್‌, ಅಚ್ಯುತ್‌, ಎಚ್‌.ಎಂ. ರಂಗಯ್ಯ ಅವರಿಗೆ ರಂಗ ಗೌರವ ನೀಡಿ ಸನ್ಮಾನಿಸಲಾಯಿತು. ಆ ಬಳಿಕ ಶಿವಮೊಗ್ಗದ ಸಹ್ಯಾದ್ರಿ ರಂಗ ತರಂಗ ತಂಡದಿಂದ ಸಿಂಗಾರೆವ್ವ ಮತ್ತು ಅರಮನೆ ನಾಟಕ ಪ್ರದರ್ಶನಗೊಂಡಿತು.   

Advertisement

Udayavani is now on Telegram. Click here to join our channel and stay updated with the latest news.

Next