ಪುರಭವನದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನವರು ಆಯೋಜಿಸಿದ ಹವ್ಯಾಸಿ ಕಲಾವಿದರ ಸಮಾವೇಶದಲ್ಲಿ ಯಕ್ಷಗಾಯನ ಕಾರ್ಯಕ್ರಮ ಸುಶ್ರಾವ್ಯವಾಗಿತ್ತು.ಪಂಚವಟಿ, ಅತಿಕಾಯ ಮೋಕ್ಷ, ಸೌಗಂಧಿಕಾ ಪುಷ್ಪ, ಇಂದ್ರಜಿತು ಕಾಳಗ, ಗದಾಯುದ್ಧ, ವಾಲಿವಧೆ, ಕುಮಾರ ವಿಜಯ, ಕೃಷ್ಣ ಸಂಧಾನ, ಸುಭದ್ರಾ ಕಲ್ಯಾಣ, ಶರಸೇತು ಬಂಧನ ಮೊದಲಾದ ಪ್ರಸಂಗಗಳಿಂದ ಆಯ್ದುಕೊಂಡ ಪದ್ಯಗಳನ್ನು ಪರಂಪರೆಯ ಶೈಲಿಯಲ್ಲಿ ಹಾಡುವ ಕ್ರಮವನ್ನು ಹವ್ಯಾಸಿ ಭಾಗವತರಾದ ಸುಬ್ರಾಯ ಸಂಪಾಜೆ ಮತ್ತು ಮಹೇಶ ಕನ್ಯಾಡಿ ಪ್ರಸ್ತುತಪಡಿಸಿದರು. ಅರ್ಥಧಾರಿ ಹರೀಶ ಬೊಳಂತಿಮೊಗರು ಪದ್ಯಗಳ ಸಂದರ್ಭವನ್ನು ಉಲ್ಲೇಖೀಸಿ ಯಕ್ಷಗಾಯನವನ್ನು ನಿರೂಪಿಸಿದರು.”ಕಾಮಿನೀ ಮಣಿ ಕೇಳ್’, “ನೋಡಿ ನಿರ್ಮಲ ಜಲ ಸಮೀಪದಿ’ ಪೀಠಿಕೆಯ ಹಾಡುಗಳನ್ನು ಸಂಪಾಜೆ ಮತ್ತು ಕನ್ಯಾಡಿ ಹಾಡಿದರು. “ಚಿಂತಿಸದಿರು ಜಾಣೆ’ “ಕೇಳು ಧರ್ಮಜ ಮಾತಾ’ ಪದ್ಯಗಳು ಸನ್ನಿವೇಶವನ್ನು ಬಿಂಬಿಸಿದ್ದು ಔಚಿತ್ಯಪ್ರದವಾಗಿತ್ತು. ಗೋಪಾಲ ಭುಜಬಲೋದ್ಧರನೆ, ಎಲವೋ ಸೂತನ ಮಗನೇ ಏರು ಪದ್ಯವನ್ನು ಮಹೇಶರುಹಾಡಿದರು. “ಚಂದದಿಂದ ಬಂದಳಬ್ದಲೋಚನೆ’, “ಯಾರಿವಳು ಅಮಮ ಬಲು ವೈಯಾರಿ’ ಸ್ತ್ರೀಪಾತ್ರದ ಹಾಡುಗಳನ್ನು ಸಂಪಾಜೆ ಮತ್ತು ಕನ್ಯಾಡಿ ಹಾಡಿದ್ದು ವಂದನಾರ್ಹ. ಸುರುಟಿ ರಾಗ ಏಕತಾಳ, ನವರೋಜಿ ರಾಗ ಏಕತಾಳ, ಬೇಹಾನ್ ರಾಗ ಏಕತಾಳ ಮುಂತಾದ ರಾಗಗಳನ್ನು ಇಬ್ಬರೂ ಹಾಡಿದ್ದು ಉಲ್ಲೇಖಾರ್ಹವಾಗಿದೆ. “ಆವ ನಾರಿಯ ಮೇಲೆ ಮನವಾಯ್ತು’ ಹಾಡನ್ನು ಅಷ್ಟತಾಳ, ಏಕತಾಳ, ಝಂಪೆ ತಾಳಗಳಲ್ಲಿ ಸಂಪಾಜೆ, ಮಹೇಶರು ಶೈಲಿಯನ್ನು ಕಾಯ್ದುಕೊಂಡು ಹಾಡಿದ್ದು ಗಮನಾರ್ಹ. ಶಿತಿಕಂಠ ಭಟ್ ಮತ್ತು ಜಗನ್ನಿವಾಸ ರಾವ್ ಅವರ ಮದ್ದಳೆ-ಚೆಂಡೆ ವಾದನದಲ್ಲಿ ಸಹಕರಿಸಿದರು.ಹವ್ಯಾಸಿ ಕಲಾವಿದರನ್ನು ಬೆಂಬಲಿಸುವ ಪಟ್ಲ ಸತೀಶ ಶೆಟ್ಟರ ಪ್ರೋತ್ಸಾಹ ಅಭಿನಂದನಾರ್ಹ.
ಅನೂಷಾ ಹೊನ್ನೇಕೂಲು