ಕುಂದಾಪುರ: ಅಮಾಸೆಬೈಲು ಸಮೀಪದ ಗ್ರಾಮೀಣ ಪ್ರದೇಶವಾದ ಕೆಲವು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಿಲ್ಲದೆ, ಶಾಲೆ ಮುಚ್ಚುವ ಆತಂಕದಲ್ಲಿದ್ದು, ಕೂಡಲೇ ಈ ಶಾಲೆಗೆ ಖಾಯಂ ಶಿಕ್ಷಕರನ್ನು ನಿಯೋಜಿಸಬೇಕು ಎಂದು ಆಗ್ರ ಹಿಸಿ ಪ್ರೌಢ ಮತ್ತು ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಇಲ್ಲಿನ ನೆರಳು ತಂಡದಿಂದ ಮನವಿ ಸಲ್ಲಿಸಲಾಯಿತು.
ಖಾಯಂ ಶಿಕ್ಷಕರಿಲ್ಲದೆ ಸಮಸ್ಯೆ
ಮೂಡುಬಿದಿರೆಗೆ ಕಾರ್ಯಕ್ರಮ ನಿಮಿತ್ತ ಬಂದಿದ್ದ ಸಚಿವರಿಗೆ ನೆರಳು ತಂಡದ ಆದರ್ಶ್ ಎನ್ನುವವರು ಶಾಸಕ ಉಮಾನಾಥ್ ಕೋಟ್ಯಾನ್ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಮುಖಾಂತರ ಕೆಲವು ಶಾಲೆಯಲ್ಲಿ ಕೆಲವು ದಿನಗಳಿಂದ ಖಾಯಂ ಶಿಕ್ಷಕರಿಲ್ಲದೆ ಸಮಸ್ಯೆಯಾಗುತ್ತಿದೆ. ಹೀಗೆ ಆದರೆ ಭವಿಷ್ಯದಲ್ಲಿ ಈ ಶಾಲೆಯನ್ನೇ ಮುಚ್ಚಬೇಕಾದ ಪರಿಸ್ಥಿತಿ ಎದುರಾಗಬಹುದು ಎಂದವರು ಮನವಿ ಸಲ್ಲಿಸಿದರು.
ಇದಕ್ಕೆ ಸ್ಪಂದಿಸಿದ ಸಚಿವರು, ಈ ಬಗ್ಗೆ ಗಮನಕ್ಕೆ ಬಂದಿದ್ದು, ಆದರೆ ಇದು ನಕ್ಸಲ್ ಪೀಡಿತ ಪ್ರದೇಶವಾಗಿರುವುದರಿಂದ ಇಲ್ಲಿಗೆ ಶಿಕ್ಷಕರು ಬರಲು ಒಪ್ಪುತ್ತಿಲ್ಲ. ಇದಕ್ಕೆ ಪರ್ಯಾಯವಾಗಿ ಇಲ್ಲಿನ ಮಕ್ಕಳಿಗೆ ವಾಹನದ ವ್ಯವಸ್ಥೆ ಮಾಡಿಕೊಟ್ಟು, ಸಮೀಪದ ಶಾಲೆಯಲ್ಲಿ ವ್ಯವಸ್ಥೆ ಮಾಡಿಕೊಡುವ ಪ್ರಯತ್ನ ಮಾಡಿಕೊಡಲಾಗುವುದು ಎಂದರು. ಆದರೆ ಈ ಶಾಲೆಯನ್ನು ಮುಚ್ಚದೇ, ಸೂಕ್ತ ಪರಿಹಾರ ಕೈಗೊಳ್ಳಿ ಎಂದು ನೆರಳು ತಂಡ ಮನವಿ ಮಾಡಿಕೊಂಡಿದೆ.
ಸುಮಾರು 45 ವರ್ಷಗಳ ಇತಿಹಾಸವಿರುವ ಈ ಕೆಲವು ಸರಕಾರಿ ಕಿ.ಪ್ರಾ. ಶಾಲೆಯಲ್ಲಿ ಈಗ 18 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಕಳೆದ ಕೆಲವು ತಿಂಗಳ ಹಿಂದೆ ಇಲ್ಲಿ ಇದ್ದ ಶಿಕ್ಷಕರಿಗೆ ನಿವೃತ್ತಿಯಾಗಿದ್ದು, ಈಗ ಮತ್ತೆ ಬೇರೆ ದಾರಿಯಿಲ್ಲದೆ ಅವರೇ ಬರುತ್ತಿದ್ದು, ಮತ್ತೂಬ್ಬರು ಅತಿಥಿ ಶಿಕ್ಷಕರಿದ್ದಾರೆ.