Advertisement

ಅಮಾಸೆಬೈಲು -ಹೆಬ್ರಿ ಸಂಪರ್ಕಿಸುವ ಕಿರು ಸೇತುವೆ ಕುಸಿತ

09:01 PM Jun 23, 2021 | Team Udayavani |

ಕುಂದಾಪುರ: ಅಮಾಸೆ ಬೈಲಿನಿಂದ ಹೆಬ್ರಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಸಾರದತೋಡು ಎಂಬಲ್ಲಿ ನಿರ್ಮಿಸಲಾದ ಕಿರು ಸೇತುವೆ (ಸ್ಲ್ವಾಬ್‌ ಮೋರಿ)ಯ ಒಂದು ಬದಿಯ ತಳಭಾಗದಲ್ಲಿ ಕುಸಿದಿದೆ. ಇದರಿಂದ ಸದ್ಯಕ್ಕೇನು ಅಪಾಯ ವಿಲ್ಲದಿದ್ದರೂ, ಮಳೆಗಾಲವಾದ್ದರಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಕುಸಿಯುವ ಭೀತಿ ಇದೆ.

Advertisement

ಅಮಾಸೆಬೈಲಿನಿಂದ ಶೇಡಿಮನೆ, ಮಾಯ ಬಜಾರ್‌ ಮೂಲಕವಾಗಿ ಹೆಬ್ರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದ್ದು, ನಿತ್ಯ 200ರಿಂದ 300 ವಾಹನಗಳು ಈ ಮಾರ್ಗವಾಗಿ ಸಂಚರಿಸುತ್ತವೆ. ಈಗ ಬಸ್‌ ಸಂಚಾರ ಇಲ್ಲದಿದ್ದರೂ, ಹಿಂದೆ ಈ ಮಾರ್ಗದಲ್ಲಿ ಶೇಡಿಮನೆ, ಜಡ್ಡಿನಗದ್ದೆ, ಕೆಲಾ, ನಡಂಬೂರು ಭಾಗಕ್ಕೆ ಅನೇಕ ಬಸ್‌ಗಳು ಈ ಮಾರ್ಗವಾಗಿ ಸಂಚರಿಸುತ್ತಿದ್ದವು.

ಪ್ರಮುಖ ರಸ್ತೆ:

ಅಮಾಸೆಬೈಲುವಿನಿಂದ ಹೆಬ್ರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದ್ದು, ಈ ಮಾರ್ಗವಾಗಿ 24 ಕಿ.ಮೀ. ಅಂತರವಿದ್ದರೆ, ಹಾಲಾಡಿ ಮೂಲಕವಾಗಿ ಅಮಾಸೆಬೈಲಿನಿಂದ ಹೆಬ್ರಿಗೆ 35-40 ಕಿ.ಮೀ. ದೂರವಿದೆ. ಇದಲ್ಲದೆ ಜಡ್ಡಿನಗದ್ದೆ, ಕೆಳಸುಂಕ, ಕೆಲಾ, ಶೇಡಿಮನೆ, ಮಾಯಾಬಜಾರ್‌, ನಡಂಬೂರು ಮತ್ತಿತರ ಊರುಗಳಿಗೆ ಸಂಪರ್ಕಿಸುವ ಮುಖ್ಯ ರಸ್ತೆ ಇದಾಗಿದೆ.

45  ವರ್ಷ  ಹಳೆಯ ಸೇತುವೆ :

Advertisement

ಇದು ಸುಮಾರು 45 ವರ್ಷಗಳ ಹಳೆಯ ಸೇತುವೆಯಾಗಿದ್ದು, ಆಗ ಕಲ್ಲುಗಳನ್ನೇ ಪಿಲ್ಲರ್‌ಗಳಾಗಿ ನಿರ್ಮಿಸಿ, ಅದರ ಆಧಾರದಲ್ಲಿ ಈ ಕಿರು ಸೇತುವೆಯನ್ನು ನಿರ್ಮಿಸಲಾಗಿದೆ. ಸೇತುವೆಯು 3.6 ಮೀ. ಅಗಲವಿದ್ದು, ಸದ್ಯ 1 ಮೀ.ವರೆಗೆ ಟೇಪ್‌ ಕಟ್ಟಿ, ಆ ಭಾಗದಲ್ಲಿ ವಾಹನ ಸಂಚರಿಸದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಸೇತುವೆಯ ತಳಭಾಗದಲ್ಲಿ ಕಟ್ಟಿರುವ ಕಲ್ಲಿನ ಪಿಲ್ಲರ್‌ ಸುಮಾರು 2 ಮೀ.ವರೆಗೆ ಕುಸಿದಿದ್ದು, ಸದ್ಯಕ್ಕೇನು ಅಪಾಯವಿಲ್ಲ. ಕಲ್ಲಿನಿಂದಲೇ ನಿರ್ಮಿಸಿರುವ ಕಿರು ಸೇತುವೆಯಾಗಿದ್ದರಿಂದ ಭದ್ರವಾಗಿದ್ದು, ವಾಹನ ಸಂಚರಿಸಲು ತೊಂದರೆಯಿಲ್ಲ ಎನ್ನುವುದಾಗಿ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗಳು ಸ್ಪಷ್ಟಪಡಿಸಿದ್ದಾರೆ.

ಅಮಾಸೆಬೈಲಿನಿಂದ ಅನೇಕ ಊರುಗಳಿಗೆ, ಪ್ರಮುಖವಾಗಿ ಹೆಬ್ರಿಗೆ ಸಂಚರಿಸಬೇಕಾದರೆ ಇದೇ ಪ್ರಮುಖ ರಸ್ತೆಯಾಗಿದೆ. ಈ ಮಾರ್ಗದಲ್ಲಿ ಸಂಪರ್ಕ ಕಡಿತಗೊಂಡರೆ ನಿತ್ಯ ಸಂಚರಿಸುವ ನೂರಾರು ಮಂದಿಗೆ ತೊಂದರೆಯಾಗಲಿದೆ. ಇದು ಹಳೆಯ ಸೇತುವೆಯಾಗಿದ್ದರಿಂದ, ಶಿಥಿಲಾವಸ್ಥೆಯಲ್ಲಿದ್ದು, ಆದಷ್ಟು ಬೇಗ ಹೊಸ ಸೇತುವೆ ಆಗಬೇಕಿದೆ. ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಲಿ. ಕೃಷ್ಣ ಪೂಜಾರಿ, ಗ್ರಾ.ಪಂ. ಸದಸ್ಯರು, ಅಮಾಸೆಬೈಲು

ಈ  ಕುಸಿದಿರುವ ಸ್ಲ್ಯಾಬ್‌ ಮೋರಿಯನ್ನು ಈಗಾಗಲೇ ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಮೋರಿಯ ಒಂದು ಭಾಗದ ತಳಭಾಗದಲ್ಲಿ ಸ್ವಲ್ಪ ಕುಸಿದಿದೆ. ಒಂದು ಬದಿಯಲ್ಲಿ ಕುಸಿದಿರುವುದರಿಂದ ಅಪಾಯವೇನಿಲ್ಲ. ವಾಹನ ಸಂಚರಿಸುವ ಭಾಗ ಭದ್ರ ವಾಗಿದೆ. ಮುನ್ನೆಚ್ಚರಿಕೆಯಾಗಿ ಕುಸಿದಿರುವ ಪ್ರದೇಶದ ಮೇಲ್ಭಾಗದಲ್ಲಿ ಟೇಪ್‌ ಕಟ್ಟಲಾಗಿದೆ. ಮಳೆ ಸ್ವಲ್ಪ ಕಡಿಮೆಯಾದ ಕೂಡಲೇ ದುರಸ್ತಿ ಮಾಡಲಾಗುವುದು.  – ಹರ್ಷವರ್ಧನ್‌, ಸಹಾಯಕ ಎಂಜಿನಿಯರ್‌, ಲೋಕೋಪಯೋಗಿ ಇಲಾಖೆ ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next