ಸಿದ್ದಾಪುರ: ಅಮಾಸೆಬೈಲು ಗ್ರಾಮ ಪಂಚಾಯತ್, ಅಮಾಸೆಬೈಲು ಚಾರಿಟೆಬಲ್ ಟ್ರಸ್ಟ್ (ರಿ.), ಕರ್ಣಾಟಕ ಬ್ಯಾಂಕ್ (ಲಿ.) ಮಂಗಳೂರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ, ಜಿಲ್ಲಾಧಿಕಾರಿಗಳು ಉಡುಪಿ ಜಿಲ್ಲೆ, ಜಿಲ್ಲಾ ಪಂಚಾಯತ್ ಉಡುಪಿ, ತಾಲೂಕು ಪಂಚಾಯತ್ ಕುಂದಾಪುರ ಇವರ ಆಶ್ರಯದಲ್ಲಿ ಅಮಾಸೆಬೈಲು ಗ್ರಾಮ ಪಂಚಾಯತ್‌ನಲ್ಲಿ ಅನುಷ್ಠಾನಗೊಂಡಿರುವ ಸೋಲಾರ್ ಗ್ರಾಮ ಘೋಷಣೆಯು ಗಣ್ಯರ ಉಪಸ್ಥಿತಿಯಲ್ಲಿ ಎ. 27ರಂದು ಅಮಾಸೆಬೈಲು ಸರಕಾರಿ ಪ್ರೌಢಶಾಲಾ ವಠಾರದಲ್ಲಿ ಜರಗಿತು.
ಮೀನುಗಾರಿಕಾ ಹಾಗೂ ಯುವಜನಸೇವೆ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಅಮಾಸೆಬೈಲು ಗ್ರಾ. ಪಂ.ನ್ನು ಸೋಲಾರ್ ಗ್ರಾಮವನ್ನು ಉದ್ಘಾಟಿಸಿ, ಶುಭಹಾರೈಸಿದರು.
ದೇವಸ್ಥಾನಗಳಿಗೆ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ಕೊಡಮಾಡಿದ ಸೋಲಾರ್ ದೀಪವನ್ನು ಕರ್ಣಾಟಕ ಬ್ಯಾಂಕ್ ಜನರಲ್ ಮೆನೇಜರ್ ಚಂದ್ರಶೇಖರ ರಾವ್ ಅವರು ಉದ್ಘಾಟಿಸಿದರು. ಮನೆಗಳಿಗೆ ಸೋಲಾರ್ ದೀಪಗಳನ್ನು ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಚಂದ್ರ ಶೆಟ್ಟಿ ಅವರು ಉದ್ಘಾಟಿಸಿದರು. ಅಮಾಸೆಬೈಲು ಗ್ರಾಮದ ಸೋಲಾರ್ ಬೀದಿ ದೀಪವನ್ನು ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ ಅವರು ಉದ್ಘಾಟಿಸಿದರು. ಸೆಲ್ಕೊ ಇಂಡಿಯಾ ಇದರ ಅಧ್ಯಕ್ಷ ಡಾ| ಎಚ್. ಹರೀಶ್ ಹಂದೆ ಅವರು ದಿಕ್ಸೂಚಿ ಭಾಷಣ ಮಾಡಿದರು. ಕುಂದಾಪುರ ಸಹಾಯಕ ಉಪವಿಭಾಗಾಧಿಕಾರಿ ಶಿಲ್ಪಾನಾಗ್ ಅವರು ಸೋಲಾರ್ ಯೋಜನೆ ಅನುಷ್ಠಾನಗೊಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್.ಎಚ್. ಮಂಜುನಾಥ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕುಂದಾಪುರ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕರ್ಣಾಟಕ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಅನಂತಕೃಷ್ಣ ಭಟ್, ತಾ. ಪಂ. ಸದಸ್ಯೆ ಜ್ಯೋತಿ ಪೂಜಾರಿ, ಗ್ರಾ.ಪಂ. ಜಯಲಕ್ಷ್ಮೀ ಶೆಟ್ಟಿ, ಅಮಾಸೆಬೈಲು ವ್ಯ.ಸೇ.ಸ. ಸಂಘದ ಅಧ್ಯಕ್ಷ ಆರ್. ನವೀನಚಂದ್ರ ಶೆಟ್ಟಿ, ಉಳ್ಳೂರು- ಮಚ್ಚಟ್ಟು ವ್ಯ.ಸೇ.ಸ. ಸಂಘದ ಟಿ. ಚಂದ್ರಶೇಖರ ಶೆಟ್ಟಿ, ಅಮಾಸೆಬೈಲು ಸರಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ತಿಮ್ಮಪ್ಪ, ಸೆಲ್ಕೋ ಸಂಸ್ಥೆಯ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರುಈ ಸಂದರ್ಭದಲ್ಲಿ ಅಮಾಸೆಬೈಲು ಚಾರಿಟೆಬಲ್ ಟ್ರಸ್ಟ್‌ನ ಮೂಲಕ ಅಮಾಸೆಬೈಲು ಗ್ರಾಮ ಅಭಿವೃದ್ಧಿಗೆ ಕಾರಣರಾದ ಕರ್ಣಾಟಕ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಅನಂತಕೃಷ್ಣ ಅವರನ್ನು ಸಮ್ಮಾನಿಸಲಾಯಿತು. ಅಮಾಸೆಬೈಲು ಗ್ರಾ. ಪಂ.ನ್ನು ಸೋಲಾರ್ ಗ್ರಾಮ ಎಂದು ಘೋಷಿಸಲು ಆಗಮಿಸುತ್ತಿರುವ ಗಣ್ಯರನ್ನು ಅಮಾಸೆಬೈಲು ಪೇಟೆಯಿಂದ ಸರಕಾರಿ ಪ್ರೌಢಶಾಲೆಯ ತನಕ ಪೂರ್ಣಕುಂಭದ ಮೂಲಕ ಸ್ವಾಗತಿಸಲಾಯಿತು.
ಅಮಾಸೆಬೈಲು ಚಾರಿಟೆಬಲ್ ಟ್ರಸ್ಟ್‌ನ ಅಧ್ಯಕ್ಷ ಎ.ಜಿ. ಕೊಡ್ಗಿ ಅವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸತ್ಯನಾರಾಯಣ ರಾವ್ ಕಾರ್ಯಕ್ರಮ ನಿರೂಪಿಸಿದರು. ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ಭಾಸ್ಕರ್ ಶೆಟ್ಟಿ ವಂದಿಸಿದರು.