ಕುಷ್ಟಗಿ : ಈ ಮೊದಲೇ ಸಿಎಂ ಬಸವರಾಜ ಬೊಮ್ಮಾಯಿ ಅವರು, ಈ ವಿವಾದದ ಹಿನ್ನೆಲೆಯಲ್ಲಿ ಸಚಿವ ಈಶ್ವರಪ್ಪ ಹಾಗೂ ಬಿಜೆಪಿ ಕಾರ್ಯಕರ್ತ ಸಂತೋಷ ಪಾಟೀಲ ಅವರುಗಳನ್ನು ಕರೆಯಿಸಿಕೊಂಡು ವಿವಾದ ಬಗೆಹರಿಸಿದ್ದರೆ ಸಂತೋಷ ಪಾಟೀಲ ಅವರ ಪ್ರಾಣ ಉಳಿಯುತ್ತಿತ್ತು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಅಭಿಪ್ರಾಯಪಟ್ಟರು.
ಉದಯವಾಣಿಯೊಂದಿಗೆ ಮಾತನಾಡಿದ ಅವರು, ಆತ್ಮಹತ್ಯೆ ಮಾಡಿಕೊಂಡಿರುವ ಸಂತೋಷ ಪಾಟೀಲ, ಸಚಿವ ಈಶ್ವರಪ್ಪ ವಿರುದ್ದ ಪ್ರಧಾನಮಂತ್ರಿಯವರೆಗೂ ದೂರು ನೀಡಿದ್ದರಿಂದಲೇ ಈಶ್ವರಪ್ಪ ಅವರು ತಮ್ಮ ಕಾರ್ಯಕರ್ತನ ಮೇಲೆ ಒತ್ತಡ ಹಾಕಿರುವ ಬಗ್ಗೆ ಗುಮಾನಿ ವ್ಯಕ್ತವಾಗುತ್ತಿದೆ. ಪ್ರಥಮ ದರ್ಜೆ ಗುತ್ತಿಗೆದಾರ, ಸಚಿವ ಈಶ್ವರಪ್ಪ ಅವರ ಒಡನಾಡಿಯೂ ಆಗಿದ್ದರು. ಅಂತವರ ಪರಿಸ್ಥಿತಿ ಹೀಗಾದರೆ ಬೇರೆಯವರ ಯಾವ ರೀತಿಯಾಗಬಹುದು ಎನ್ನುವುದು ಸಮಾಜ ಅರ್ಥ ಮಾಡಿಕೊಳ್ಳಬೇಕಿದೆ.
ಬಿಜೆಪಿ ಕಾರ್ಯಕರ್ತ ಸಂತೋಷ ಪಾಟೀಲ, ಕಿರುಕುಳದಿಂದಲೇ ಆತ್ಮಹತ್ಯೆ ಮಾಡಿಕೊಂಡಿರುವುದು ಬಹಿರಂಗ ಸತ್ಯ. ಸರ್ಕಾರ ಪರಿಶೀಲಿಸಿ ಸೂಕ್ತವಾದ ಏಜೆನ್ಸಿಯ ಮೂಲಕ ಈ ದುರಂತ ಸಾವು ಯಾವ ರೀತಿಯಾಗಿದೆ. ಆಗಲು ಕಾರಣವೇನೆಂಬುದನ್ನು ತನಿಖೆ ನಡೆಸಬೇಕಿರುವುದು ಸರ್ಕಾರ ಜವಾಬ್ದಾರಿ ಆಗಿದೆ.
ಇದನ್ನೂ ಓದಿ : ಈಶ್ವರಪ್ಪ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಸಂಪುಟದಿಂದ ವಜಾ ಮಾಡಿ: ಈಶ್ವರ್ ಖಂಡ್ರೆ
ಸಚಿವ ಈಶ್ವರಪ್ಪ ವಿರುದ್ದ 40 ಪರ್ಸೇಂಟೇಜ್ ಆರೋಪಿಸಿದ್ದ ಸಂಧರ್ಭದಲ್ಲಿ ಸಚಿವ ಈಶ್ವರಪ್ಪ ಅವರು, ಸಂತೋಷ ಪಾಟೀಲ ವಿರುದ್ದ ಮಾನನಷ್ಟ ಮೊಕದ್ದಮೆ ಬಗ್ಗೆ ಪ್ರಸ್ತಾಪಿಸಿದ್ದರು. ಅದು ಎಷ್ಟರ ಮಟ್ಟಿಗೆ ನಿಜ ಎನ್ನುವುದು ಗೊತ್ತಿಲ್ಲ. ಸಂತೋಷ ಪಾಟೀಲ ಪ್ರಾಣ ಕಳೆದುಕೊಳ್ಳುವ ಮಟ್ಟಿಗೆ ಹೋಗಬಾರದಿತ್ತು. ಆತ್ಮಹತ್ಯೆ ಮಾಡಿಕೊಂಡಿರುವುದು ದುರದೃಷ್ಟಕರವಾಗಿದೆ. ಸರ್ಕಾರ ಯಾರೇ ಮಾಡಿರಲಿ ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೊಳ್ಳಬೇಕಿದೆ.