Advertisement

ಕೃಷಿಯಲ್ಲಿ ಖುಷಿ ಕಂಡ ಅಮರ್‌

09:31 AM Jan 25, 2019 | |

ಬೆಂಗಳೂರು: ‘ನಮ್ಮ ಸಮುದಾಯದಲ್ಲಿ ಮತ್ತು ಕುಟುಂಬದಲ್ಲಿ ಎಲ್ಲರೂ ಪದವೀಧರರು. ನಾನು ಕೃಷಿ ಮಾಡುವಾಗ ಜತೆಗಿದ್ದವರೆಲ್ಲಾ ಕಲಿತು ಗಲ್ಫ್ ದೇಶಗಳಿಗೆ ಹೋಗುವ ಟ್ರೆಂಡ್‌ ಇತ್ತು. ನಾನೂ ಯಾಕೆ ಓದಲಿಲ್ಲ ಎಂಬ ಕೊರಗು ಮನಸ್ಸಿನೊಳಗೆ ಕೊರೆಯುತ್ತಿತ್ತು. ಪ್ರತಿಷ್ಠಿತರ ಕಾರ್ಯಕ್ರಮಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದೆ. ಆದರೆ, ಇವತ್ತು ನಾನು ಆಯ್ಕೆ ಮಾಡಿಕೊಂಡ ದಾರಿ ಸರಿ ಎನಿಸುತ್ತಿದೆ. ಅದರ ಬಗ್ಗೆ ಹೆಮ್ಮೆಯೂ ಇದೆ…’

Advertisement

ಚಿಕ್ಕಮಗಳೂರಿನ ಮಡೇನೆರಲು ಗ್ರಾಮದ ರೈತ ಅಮರ್‌ ಡಿಸೋಜ ಅವರ ಬಿಚ್ಚು ನುಡಿಗಳಿವು. ಅವರ ಈ ಸಾಧನೆಗೆ ಹೆಬ್ಟಾಳದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಅಲುಮ್ನಿ ಅಸೋಸಿಯೇಷನ್‌ ಡಾ| ಜಿ.ಕೆ. ವೀರೇಶ್‌ ಅವರ ದತ್ತಿ ನಿಧಿ ಅಡಿ ‘ರಾಜ್ಯಮಟ್ಟದ ಅತ್ಯುತ್ತಮ ಸಮಗ್ರ ಕೃಷಿ ಪದ್ಧತಿ ರೈತ ಪ್ರಶಸ್ತಿ’ ನೀಡಿ ಗೌರವಿಸಿತು.

ಬಿಎ ಪದವಿ ಅರ್ಧಕ್ಕೆ ಕೈಬಿಟ್ಟು ಕೃಷಿಯತ್ತ ಮುಖಮಾಡಿದ ಅಮರ್‌, ಇಂದು ರಾಜ್ಯಮಟ್ಟದ ಅತ್ಯುತ್ತಮ ರೈತರಾಗಿ ಹೊರಹೊಮ್ಮಿದ್ದಾರೆ. ಕೃಷಿ ಕ್ಷೇತ್ರಕ್ಕೆ ಕಾಲಿಟ್ಟಾಗ ಅಳುಕು, ಹಿಂಜರಿಕೆ ಅವರಿಗಿತ್ತು. ಆದರೆ ಅದರಲ್ಲಿ ಯಶಸ್ಸು ಕಂಡು ಈಗ ತಿಂಗಳಿಗೆ ಕನಿಷ್ಠ 1.25 ಲಕ್ಷ ರೂ. ನಿವ್ವಳ ಲಾಭ ಗಳಿಸುತ್ತಿದ್ದಾರೆ. ಶಾಶ್ವತವಾಗಿ 20 ಜನರಿಗೆ ಕೆಲಸ ಕೊಟ್ಟಿದ್ದಾರೆ.

ಕೃಷಿಗಿಂತ ಉಪಕಸುಬಿನಲ್ಲೇ ಹೆಚ್ಚು ಆದಾಯ: ಪ್ರಶಸ್ತಿ ಸ್ವೀಕರಿಸಿದ ನಂತರ ‘ಉದಯವಾಣಿ’ಯೊಂದಿಗೆ ತಮ್ಮ ಅನುಭವ ಹಂಚಿಕೊಂಡ ಅಮರ್‌,ಒಟ್ಟಾರೆ 25 ಎಕರೆ ಜಮೀನಿನಲ್ಲಿ 20 ಎಕರೆಯಲ್ಲಿ ಕಾಫಿ, ಕಾಳಮೆಣಸು, ಅಡಿಕೆ, ಅಂಟುವಾಳ, ಭತ್ತ, ಸಿಲ್ವರ್‌, ಸಾಗವಾನಿ ಮರಗಳನ್ನು ಬೆಳೆದಿದ್ದೇನೆ. ಎರಡು ಎಕರೆಯಲ್ಲಿ ಮೀನು ಸಾಕಾಣಿಕೆ ಮಾಡುತ್ತಿದ್ದೇನೆ. ಉಳಿದಿದ್ದರಲ್ಲಿ ಹಂದಿ ತಳಿ ಸಂವರ್ಧನೆ, ಹಸು, ಕುರಿ, ಕೋಳಿ ಸಾಕಾಣಿಕೆ ಮಾಡುತ್ತಿದ್ದು, ಕೃಷಿ ಉಪಕರಣಗಳನ್ನು ಬಾಡಿಗೆ ಕೂಡ ನೀಡುತ್ತಿದ್ದೇನೆ. ಇದೆಲ್ಲದರ ಪೈಕಿ ಕೃಷಿಗಿಂತ ನನ್ನ ಕೈಹಿಡಿದಿದ್ದು ಉಪಕಸುಬು. ಒಟ್ಟಾರೆ 25 ಲಕ್ಷ ರೂ. ಆದಾಯದಲ್ಲಿ ಬರೀ ಹಂದಿ ತಳಿ ಸಂವರ್ಧನೆಯಿಂದಲೇ 15 ಲಕ್ಷ ರೂ. ಬರುತ್ತಿದೆ. ತುಂಬಾ ಅಪರೂಪದ ಡುರಾಕ್‌ (Duroc) ಹಂದಿ ತಳಿ ಸಾಕುತ್ತಿದ್ದೇನೆ. ಸಾಮಾನ್ಯ ಹಂದಿಮರಿ (5 ತಿಂಗಳದ್ದು) ಹೆಚ್ಚೆಂದರೆ 5ರಿಂದ 6 ಸಾವಿರ ರೂ. ಆದರೆ, ಡುರಾಕ್‌ ಹಂದಿಮರಿ 20ರಿಂದ 22 ಸಾವಿರ ರೂ.ಗೆ ಮಾರಾಟ ಆಗುತ್ತದೆ ಎಂದರು.

ಆಂಧ್ರಪ್ರದೇಶ, ತಮಿಳುನಾಡು, ಬೆಂಗಳೂರು, ಮಂಗಳೂರು ಮತ್ತಿತರ ಕಡೆಗಳಿಂದ ಹಂದಿಗಳಿಗೆ ಬೇಡಿಕೆ ಬರುತ್ತಿದೆ. ಇನ್ನು ಕೃಷಿ ಉಪಕರಣಗಳನ್ನು ಬಾಡಿಗೆ ಕೊಡುವುದರಿಂದಲೇ ಚವಾರ್ಷಿಕ ಒಂದು ಲಕ್ಷ ಲಾಭ ಬರುತ್ತದೆ. ದೂರದ ಗ್ರಾಮದಲ್ಲಿ ನಾವು ಇರುವುದರಿಂದ ಸುರಕ್ಷತೆಗಾಗಿ ಹತ್ತು ನಾಯಿಗಳನ್ನು ಸಾಕಿದ್ದು, ತಳಿ ಸಂವರ್ಧನೆ ಕೂಡ ಮಾಡುತ್ತಿದ್ದೇನೆ. ಇದರಿಂದ ವಾರ್ಷಿಕ ಒಂದು ಲಕ್ಷ ರೂ. ಆದಾಯ ಬರುತ್ತದೆ ಎಂದು ತಿಳಿಸಿದರು. ಇದೇ ರೀತಿ, ಡಿ ಫಾರ್ಮ್ ಡಿಪ್ಲೊಮಾ ಪೂರೈಸಿರುವ ರಾಣೆಬೆನ್ನೂರಿನ ಕುಪ್ಪೆಲೂರು ಗ್ರಾಮದ ಮಾಲತೇಶ ಮಣಕೂರು ಔಷಧಿ ವ್ಯಾಪಾರ ಬಿಟ್ಟು ಕೃಷಿಯತ್ತ ಮುಖಮಾಡಿದ್ದಾರೆ. ಮಿಶ್ರ ಬೇಸಾಯ ಪದ್ಧತಿಯಿಂದ ವಾರ್ಷಿಕ 23 ರಿಂದ 25 ಲಕ್ಷ ರೂ. ನಿವ್ವಳ ಲಾಭ ಗಳಿಸುತ್ತಿರುವುದಾಗಿ ಹೇಳಿದರು. ಇನ್ನು ಮಾಗಡಿ ತಾಲೂಕಿನ ಎಚ್.ಕೆ. ಕುಮಾರಸ್ವಾಮಿ ತಮ್ಮ ಹತ್ತು ಎಕರೆ ಪ್ರದೇಶದಲ್ಲಿ ಭತ್ತ, ರಾಗಿ, ತೆಂಗು, ಮೆಕ್ಕೆಜೋಳ, ಬೇಲಿ ಮೆಂತೆ, ಗಿನಿ, ಓಕ್‌, ಹೆಬ್ಬೇವು ಜತೆಗೆ ನಾಟಿ ಕುರಿ, ಕೋಳಿ ಸಾಕಾಣಿಕೆ ಮಾಡುತ್ತಿದ್ದಾರೆ. ಇದರಿಂದ ಬಂದ ಆದಾಯದಲ್ಲೇ 20 ಲಕ್ಷ ಮೌಲ್ಯದ ನಿವೇಶನ ಖರೀದಿಸಿದ್ದಾರೆ. ಹೊಸ ಟ್ರ್ಯಾಕ್ಟರ್‌ ಖರೀದಿಸಿದ್ದಾರೆ. ಇವರಿಬ್ಬರಿಗೂ ‘ರಾಜ್ಯಮಟ್ಟದ ಅತ್ಯುತ್ತಮ ಸಮಗ್ರ ಕೃಷಿ ಪದ್ಧತಿ ರೈತ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

Advertisement

‘ಕೃಷಿ ನನಗೆ ರಕ್ತಗತವಾಗಿ ಬಂದಿದೆ. ನನ್ನ ತಂದೆ ಕುರಿ ಕಾಯುತ್ತಿದ್ದರು. ನಾನೂ ಕುರಿ ಮೇಯಿಸಿದ್ದೇನೆ. ಈಗ ನನ್ನ ಮಗಳು ಕೂಡ ಚಿಕ್ಕ ಜಮೀನಿನಲ್ಲಿ 150 ಕುರಿ ಸಾಕುತ್ತಿದ್ದಾಳೆ’ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ತಿಳಿಸಿದರು. ಮೂವರೂ ರೈತರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ‘ಬೆಳಗಿನಜಾವ 3ರ ಸುಮಾರಿಗೆ ಎದ್ದು ಮೈಕೊರೆಯುವ ಚಳಿಯಲ್ಲಿ ಗಿಡಗಳಿಗೆ ನೀರು ಹಾಯಿಸುತ್ತಿದ್ದೆ. ಚಳಿಯ ಹೊಡೆತಕ್ಕೆ ಕೈಗಳು ಮಡಚಲಿಕ್ಕೂ ಬರುತ್ತಿರಲಿಲ್ಲ. ಪ್ರತಿಪಕ್ಷದ ನಾಯಕನಾಗಿದ್ದಾಗಲೂ ಶನಿವಾರ ಮತ್ತು ಭಾನುವಾರ ನಾನು ತೋಟದಲ್ಲೇ ಕಳೆಯುತ್ತಿದ್ದೆ. ಅಲ್ಪಾವಧಿಯ ಪ್ರಧಾನಿಯಾದ ಈ ದೇವೇಗೌಡ ಮೂಲತಃ ವ್ಯವಸಾಯ ಮತ್ತು ಸಣ್ಣ ಗುತ್ತಿಗೆದಾರನಾಗಿ ಜೀವನ ಆರಂಭಿಸಿದವನು’ ಎಂದು ಮೆಲುಕುಹಾಕಿದರು. ನನ್ನ ಅವಧಿಯಲ್ಲಿ ಅಂದರೆ 1997ರಲ್ಲಿ ಕೃಷಿ ಆಂತರಿಕ ವೃದ್ಧಿ ದರ (ಜಿಡಿಪಿ) ಶೇ. 7.8ರಷ್ಟು ಆಗಿತ್ತು. ಹಿಂದಿನ ಒಂದು ದಶಕದಲ್ಲಿ ಇಷ್ಟು ಜಿಡಿಪಿ ಯಾವತ್ತೂ ತಲುಪಿದ ಉದಾಹರಣೆಗಳಿಲ್ಲ. ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರು ಖರೀದಿಸುವ ಯಂತ್ರೋಪಕರಣಗಳಿಗೆ ಶೇ. 90ರಷ್ಟು ಸಬ್ಸಿಡಿ, ಟ್ರ್ಯಾಕ್ಟರ್‌ಗೆ ಶೇ. 50ರಷ್ಟು ಸಬ್ಸಿಡಿ ಕಲ್ಪಿಸಿದ್ದೆ ಎಂದು ನೆನಪಿಸಿದರು. ಸಚಿವರಾದ ಎನ್‌.ಎಚ್. ಶಿವಶಂಕರ ರೆಡ್ಡಿ, ಬಿ. ವೆಂಕಟರಾವ್‌ ನಾಡಗೌಡ, ಬೆಂಗಳೂರು ಕೃಷಿ ವಿವಿ ಕುಲಪತಿ ಡಾ.ಎಸ್‌. ರಾಜೇಂದ್ರ ಪ್ರಸಾದ್‌, ವಿಶ್ರಾಂತ ಕುಲಪತಿ ಡಾ.ಕೆ. ನಾರಾಯಣಗೌಡ, ಅಲುಮ್ನಿ ಅಸೋಸಿಯೇಷನ್‌ ಅಧ್ಯಕ್ಷ ಡಾ.ಕೆ. ನಾರಾಯಣಗೌಡ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next