Advertisement

ಸಾರ್ವಜನಿಕ ಸೇವೆಗೆ ಸದಾ ಸಿದ್ಧ: ಡಿಸಿಎಂ ಕಾರಜೋಳ

12:47 PM Jan 26, 2020 | Team Udayavani |

ಮುಧೋಳ: ಬಿಜೆಪಿ ಸರ್ಕಾರದ ಮೇಲೆ ರಾಜ್ಯದ ಜನರ ನಿರೀಕ್ಷೆ ಹೆಚ್ಚಿದ್ದು, ಸಾರ್ವಜನಿಕರ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸಲು ಬದ್ಧರಾಗಿದ್ದೇವೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

Advertisement

ನಗರದ ದಾನಮ್ಮದೇವಿ ದೇವಸ್ಥಾನ ಹತ್ತಿರದ ವೀರಶೈವ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಜನ್ಮದಿನದ ಸಂಭ್ರಮ ಹಾಗೂ ಮುಧೋಳ ಬೈಪಾಸ್‌ ರಸ್ತೆಗೆ ಅಡಿಗಲ್ಲು ಸಮಾರಂಭದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರು ಅ ಧಿಕಾರ ಸ್ವೀಕಾರ ಮಾಡಿದ ಕೂಡಲೇ ರಾಜ್ಯದಲ್ಲಿ ಪ್ರವಾಹ ಬಂದು ಜನರು ಸಂಕಷ್ಟಕ್ಕೆ ಸಿಲುಕಿದರು.

ಪ್ರವಾಹಪೀಡಿತರ ಕಷ್ಟ ನಿವಾರಣೆಗಾಗಿ ನಮ್ಮ ಸರ್ಕಾರ ಹಗಲಿರುಳು ಶ್ರಮಿಸಿದೆ ಎಂದರು. ನಗರದ ಅಭಿವೃದ್ಧಿ ಹಾಗೂ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ 71 ಕೋಟಿ ರೂ. ವೆಚ್ಚದಲ್ಲಿ ಬೈಪಾಸ್‌ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ರಸ್ತೆ ಕಾಮಗಾರಿಗೆ 11 ತಿಂಗಳು ಕಾಲಾವಧಿಯಿದ್ದರೂ ಆರು ತಿಂಗಳೊಳಗೆ ಗುಣಮಟ್ಟದ ಕಾಮಗಾರಿ ನಿರ್ಮಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.

ಅಗ್ನಿಶಾಮಕ ದಳ ಕಚೇರಿ ನಿರ್ಮಾಣಕ್ಕಾಗಿ 2 ಎಕರೆ ಜಮೀನಿನಲ್ಲಿ ವಿಶಾಲ ಕಚೇರಿ ಹಾಗೂ ಸಿಬ್ಬಂದಿ ವಸತಿ ನಿರ್ಮಾಣಕ್ಕೆ ನಮ್ಮ ಸರ್ಕಾರ ಮುಂದಾಗಿದೆ. ಸದ್ಯದ ಬಸ್‌ ನಿಲ್ದಾಣದಿಂದ ಸಾರ್ವಜನಿಕರಿಗೆ ಯಾವುದೇ ಅನುಕೂಲವಾಗುತ್ತಿಲ್ಲ. ಆದ್ದರಿಂದ ಹೈಟೆಕ್‌ ಬಸ್‌ ನಿಲ್ದಾಣ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

165 ಕೋಟಿ ರೂ. ವೆಚ್ಚದಲ್ಲಿ ಪ್ರವಾಹ ಸೇರಿ ತಾಲೂಕಿನಾದ್ಯಂತ ಹಾಳಾಗಿರುವ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರದ ಗ್ರೀನ್‌ ಎವರ್‌ ಯೋಜನೆಯಡಿ ಲೋಕಾಪುರದ ಬಳಿ 400 ಕೆ.ವಿ ವಿದ್ಯುತ್‌ ಕೇಂದ್ರ ನಿರ್ಮಾಣ ಮಾಡಲಾಗುವುದು. ಈ ಕೇಂದ್ರ ನಿರ್ಮಾಣದಿಂದ ನಮ್ಮ ಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ.

Advertisement

ಹಿಂದಿನ ಸರ್ಕಾರದ ಅವಧಿಯಲ್ಲಿ ನಮ್ಮ ಕ್ಷೇತ್ರಕ್ಕೆ ಆಗಿರುವ ತಾರತಮ್ಯ ಸರಿಪಡಿಸುವ ಕಾರ್ಯ ಮಾಡುತ್ತಿರುವುದಾಗಿ ಹೇಳಿದರು. ಬಿಜೆಪಿ ನಗರ ಘಟಕ ಅಧ್ಯಕ್ಷ ಗುರುರಾಜ ಕಟ್ಟಿ ಮಾತನಾಡಿ, ಎರಡು ದಶಕಕ್ಕಿಂತ ಹೆಚ್ಚಿನ ಅವಧಿ ಜನನಾಯಕರಾಗಿ ಆಯ್ಕೆಯಾಗಿರುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಪ್ರತಿಯೊಂದು ಸಮಾಜಕ್ಕೂ ಸಮಾನ ಆದ್ಯತೆ ನೀಡಿ ಅಭಿವೃದ್ಧಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಿ.ಎಚ್‌. ಪಂಚಗಾವಿ ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ಬೆಳಗ್ಗೆ ಜೀರಗಾಳ ಗ್ರಾಮದ ಹತ್ತಿರ ಬೈಪಾಸ್‌ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಬಳಿಕ ಗೋಶಾಲೆಗೆ ತೆರಳಿ ಗೋಮಾತೆಗೆ ಪೂಜೆ ಸಲ್ಲಿಸಿದರು.

ಶಾಸಕ ಬಸವರಾಜ ಮತ್ತಿಮಡು, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ, ಬಿಜೆಪಿ ಗ್ರಾಮೀಣ ಘಟಕ ಅಧ್ಯಕ್ಷ ಕೆ.ಆರ್‌. ಮಾಚಪ್ಪನವರ, ಜಿ.ಎಸ್‌. ನ್ಯಾಮಗೌಡ, ಜಿಪಂ ಸದಸ್ಯರಾದ ಭೀಮನಗೌಡ ಪಾಟೀಲ, ರತ್ನಕ್ಕ ತಳೇವಾಡ, ರನ್ನ ಶುಗರ್ ಅಧ್ಯಕ್ಷ ರಾಮಣ್ಣ ತಳೇವಾಡ, ಭಾರತೀಯ ಸೇನೆಯ ನಿವೃತ್ತ ಮಹಾಉಪದಂಡನಾಯಕ ರಮೇಶ ಹಲಗಲಿ, ಆರ್‌.ಟಿ. ಪಾಟೀಲ, ಹನಮಂತ ಕೊಟಬಾಗಿ, ಅಶೋಕ ಸಾಗರ, ವೆಂಕಣ್ಣ ಗಿಡ್ಡಪ್ಪನ್ನವರ ಇತರರಿದ್ದರು.

70 ಕೆ.ಜಿ. ಕೇಕ್‌: ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ 70ನೇ ಜನ್ಮದಿನ ನಿಮಿತ್ತ ತಯಾರಿಸಲಾಗಿದ್ದ 70 ಕೆ.ಜಿ. ಕೇಕ್‌ನ್ನು ಕತ್ತರಿಸುವ ಮೂಲಕ ಕಾರಜೋಳ ತಮ್ಮ ಜನ್ಮದಿನ ಅಚರಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next