Advertisement
ಬೆಂಗಳೂರಿನ ಹಾದಿ ಹಿಡಿದು…1982ರಲ್ಲಿ ನಾನು ಬೆಂಗಳೂರಿಗೆ ಬಂದೆ. ನನ್ನ ಅಣ್ಣನ ಮನೆಯಲ್ಲಿದ್ದುಕೊಂಡು ಶೇಷಾದ್ರಿಪುರಂ ಬಾಲಕರ ಹೈಸ್ಕೂಲಿಗೆ ಸೇರಿದೆ. ಅಲ್ಲಿ ಜಿ. ಎಸ್. ಹೆಗಡೆಯವರು ಕನ್ನಡ ಮೇಷ್ಟ್ರು. ತುಂಬ ಸ್ವಾರಸ್ಯಕರವಾಗಿ ಪಾಠ ಹೇಳುತ್ತಿದ್ದರು. ಸಾಹಿತ್ಯದ ಓದಿನ ಕಡೆಗೆ ಗಮನ ಹರಿಸಲು ಕಾರಣರಾದವರೇ ಜಿ. ಎಸ್. ಹೆಗಡೆ. ಸಾರ್ವಜನಿಕ ಗ್ರಂಥಾಲಯಗಳಿಂದ ವಾರಕ್ಕೊಮ್ಮೆ ತಂದ ಬಾಣ ಭಟ್ಟ, ಕುವೆಂಪು, ಮಾಸ್ತಿ, ಕೆ. ಟಿ. ಗಟ್ಟಿ. ಶಿವರಾಮ ಕಾರಂತ ಮುಂತಾದವರ ಕೃತಿಗಳು ಆಸಕ್ತಿಯನ್ನು ಹೆಚ್ಚಿಸಿದವು. ಮನೆಯಲ್ಲಿ ತೀರಾ ಬಡತನವಿದ್ದುದರಿಂದ ಕಾಲೇಜಿಗೆ ಅರ್ಜಿ ತರಲೂ ಹೋಗಲಿಲ್ಲ. ಅಪ್ರಂಟಿಸ್‌ಷಿಪ್ ತರಬೇತಿಗೆಂದು ಜಿ. ಕೆ. ಡಬ್ಲೂ ಕಾರ್ಖಾನೆಗೆ ಸೇರಿದೆ. ಅಲ್ಲಿ ರಾಜೀವಲೋಚನಂ ಅವರ ಪರಿಚಯವಾಯಿತು. ಆ ಕಾರ್ಖಾನೆಯಲ್ಲಿ ವಿದ್ಯಾರ್ಥಿ ಕಾರ್ಮಿಕ ಸಂಘ (ವಿಕಾಸ)ಸ್ಥಾಪಿಸಿ ಹಲವಾರು ನಾಟಕಗಳನ್ನು ಬರೆದು, ಪ್ರದರ್ಶಿಸಿ ಬಹುಮಾನಗಳಿಸಿದ್ದರು ರಾಜೀವಲೋಚನಂ. ಅವರ ಮನೆಯಲ್ಲಿ ಎಲ್ಲ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳಿದ್ದವು. ಅವರ ಜೊತೆಗೆ ವೆಂಕಟೇಶ ಶಾಸ್ತ್ರೀ, ಎ. ವಿ. ನಾಗೇಶ್, ಕೆಂಡೋಳೆ ಸುಬ್ರಹ್ಮಣ್ಯಂ ಅವರ ಪರಿಚಯವೂ ಆಯಿತು. ಸಾಹಿತ್ಯ ಕುರಿತ ಮಾತುಕತೆಗಳು ನನ್ನನ್ನು ಕ್ರಿಯಾಶೀಲಗೊಳಿಸಿದವು. ಇವರೆಲ್ಲರ ಒಡನಾಟ ನನ್ನ ಓರಗೆಯ ಕೆಲಗೆಳೆಯರನ್ನೆಲ್ಲ ಸೇರಿಸಿ “ಪ್ರತಿಭಾ ಯುವ ವೇದಿಕೆ’ಯನ್ನು ಆರಂಭಿಸುವಂತೆ ಮಾಡಿತು. ಕನ್ನಡದ ಕೆಲಸ ಮಾಡಬೇಕೆಂಬ ಉತ್ಸಾಹವಷ್ಟೇ ನಮ್ಮದು. ನಾಡು ನುಡಿಯ ಕುರಿತು ವಿಚಾರ ಸಂಕಿರಣ, ತ್ರೆçಮಾಸಿಕ ಪುಸ್ತಕ ಯೋಜನೆ, ಆರೋಗ್ಯ, ವ್ಯಕ್ತಿತ್ವ ವಿಕಸನ ಕಾರ್ಯಶಿಬಿರ, ಚಿತ್ರಕಲಾಗ್ರಹಣ ಕಾರ್ಯಾಗಾರ ಮುಂತಾದವುಗಳನ್ನು ನಡೆಸತೊಡಗಿದೆವು.
Related Articles
Advertisement
ಮಹಾಪುರುಷನ ಸತ್ಸಂಗಅಭಿನವದ ಐವತ್ತನೆಯ ಪುಸ್ತಕ ಬೆಳಗೆರೆ ಕೃಷ್ಣಶಾಸ್ತ್ರಿಗಳ ಮರೆಯಲಾದೀತೆ?. ಚಿತ್ರದುರ್ಗ ಸಮೀಪದ ಬೆಳೆಗೆರೆ ಗ್ರಾಮದಲ್ಲಿ ತಮ್ಮ ತಂದೆಯವರ ಕೊನೆಯ ಮಾತೊಂದನ್ನು ಸಾಕಾರಗೊಳಿಸಲು ಬಡ ಮಕ್ಕಳಿಗಾಗಿ ಶಾಲೆ ತೆರೆದು ತಮ್ಮ ಪಾಡಿಗೆ ತಾವು ಸಮಾಜ ಸೇವೆ ಮಾಡಿಕೊಂಡಿದ್ದರು. ಮುಕುಂದೂರುಸ್ವಾಮಿಗಳ ಜೊತೆಗಿನ ಒಡನಾಟ ಅವರನ್ನು ಬೇರೆಯೇ ಅನುಭವಕ್ಕೆ ಕರೆದೊಯ್ದಿತು. ಆ ಅನುಭವಗಳ ಕಂತೆಯೇ ಯೇಗ್ಧಾಗೆಲ್ಲ ಐತೆ. ಈ ಪುಸ್ತಕವನ್ನು ಧಾರ್ಮಿಕ ಆಚರಣೆಯ ಸಂದರ್ಭದಲ್ಲಿ ಬಿಡುಗಡೆಗೊಳಿಸಲು ಚಳ್ಳಕೆರೆಯ ಮಾಕಂ ಶ್ರೀನಿವಾಸಲು ಬರೆಸಿದರು. ಶಾಸ್ತ್ರಿಗಳು ಹಸ್ತಪ್ರತಿಯೊಡನೆ ಮನೆಗೆ ಬಂದರು. ಅದನ್ನೆಲ್ಲ ಒಪ್ಪ ಓರಣಗೊಳಿಸಿದ್ದು ಚಂದ್ರಿಕಾ. ಆನಂತರ ರವಿಬೆಳಗೆರೆ ಅವರ ಸೂಚನೆಯ ಮೇರೆಗೆ ಶಾಸ್ತ್ರಿಗಳ ಎಲ್ಲ ನೆನಪುಗಳನ್ನು ಸಂಗ್ರಹಿಸಲು ಹೊರಟೆ. ಎಷ್ಟೋ ಸಲ ತಮ್ಮ ನೆನಪುಗಳನ್ನು ಹೇಳಿ, “ನಾಳೆ ರೆಕಾರ್ಡ್ ಮಾಡೋಣ ಮಲಗಿ ಸರ್’ ಎಂದುಬಿಡುತ್ತಿದ್ದರು. ಮಾರನೆಯ ದಿನ ನಾನು ಏಳುವುದಕ್ಕೆ ಮುನ್ನವೇ ತೋಟದ ಕೆಲಸದಲ್ಲಿ ಶಾಸ್ತ್ರಿಗಳು ತಲ್ಲೀರಾಗಿಬಿಡುತ್ತಿದ್ದರು. ಬಂದ ದಾರಿಗೆ ಸುಂಕವಿಲ್ಲ ಎಂದು ಬರಿಗೈಯಲ್ಲಿ ಹಿಂದಿರುಗುತ್ತಿದ್ದೆ. ಎಷ್ಟೋ ದಿನಗಳ ನಂತರ ಚಂದ್ರಿಕಾ, ನಾನು ಅವರನ್ನು ಭೇಟಿಯಾಗಲು ಬೆಳಗೆರೆಗೆ ಹೋದೆವು. ಇದ್ದಕ್ಕಿದ್ದಂತೆ ಶಾಸ್ತ್ರಿಗಳು “ರೆಕಾರ್ಡ್ ಮಾಡೋಣ’ ಎಂದರು. ಮೂರು ದಿನಗಳಲ್ಲಿ 13 ಕ್ಯಾಸೆಟ್‌ಗಳನ್ನು ರೆಕಾರ್ಡ್ ಮಾಡಿದೆವು. ಬೆಂಗಳೂರಿಗೆ ಬಂದಾಗ, ಹಿರಿಯೂರು, ತುಮಕೂರುಗಳಲ್ಲಿ ಸಿಕ್ಕಾಗ 42 ಕ್ಯಾಸೆಟ್ ಆದವು. ಅವೆಲ್ಲವನ್ನು ಬರಹರೂಪಕ್ಕಿಳಿಸಿ, ಅವರ ಮುಂದೆ ಓದಿ, ತಿದ್ದಿ ಮುದ್ರಣಕ್ಕೆ ಸಿದ್ದಪಡಿಸಿದೆವು. ಈ ಮಧ್ಯೆ ಅವರಿಗೆ ಹಾರ್ಟ್ ಅಟ್ಯಾಕ್ ಆಗಿ ಆಸ್ಪತ್ರೆ ಸೇರಿದರು. ಆಪರೇಷನ್ ಮಾಡಿದ ಡಾಕ್ಟರ್ ಹೇಳಿದರಂತೆ, “ಯಾರು ಅವರಿಗೆ 60 ವರ್ಷ ಎಂದು? ಇನ್ನೂ 6 ವರ್ಷ ಕೂಡ ಆಗಿಲ್ಲ’ಎಂದು. ಶಾಸ್ತ್ರಿಗಳು ಕೂಡ ಆಗಾಗ ತಮ್ಮ ಬೊಚ್ಚು ಬಾಯಿಯನ್ನು ತೋರಿಸಿ, “ಎಲ್ಲರೂ ನಿನಗೆ ವಯಸ್ಸಾಯ್ತು ಎನ್ನುತ್ತಾರೆ. ನೋಡಿ ನನಗೆ ಇನ್ನೂ ಹಲ್ಲು ಹುಟ್ಟಿಲ್ಲ ‘ ಎಂದು ನಗುತ್ತಿದ್ದರು -ತಮ್ಮ 22ನೆಯ ವಯಸ್ಸಿನಲ್ಲಿ-ಒಂದೇ ದಿನ ತನ್ನ ಎರಡು ಮಕ್ಕಳು, ಮಡದಿಯನ್ನು ಕಳೆದುಕೊಂಡ ಶಾಸ್ತ್ರಿಗಳು, ಆಸ್ತಿ ವಿಷಯಕ್ಕೆ ಬಂಧುಗಳು ಮರುಮದುವೆಗೆ ಒತ್ತಾಯಿಸಿದಾಗ ತಲೆ ಬೋಳಿಸಿಕೊಂಡು, ತಮ್ಮ ಎಲ್ಲ ಹಲ್ಲುಗಳನ್ನು ಕಿತ್ತಿಸಿಕೊಂಡಿದ್ದರು. ಶಾಸ್ತ್ರಿಗಳ ಒಡನಾಟಕ್ಕೆ ಬಂದ ಗಾಂಧಿ, ರಮಣಮಹರ್ಷಿ, ಸಿದ್ದಯ್ಯ, ಹುಸೇನ್ ಸಾಬಿ, ಎಸ್. ಎಲ್. ಭೈರಪ್ಪ ಮುಂತಾದವರೆಲ್ಲರ ಜೊತೆಗಿನ ಅನುಭವವನ್ನು ಕಟ್ಟಿಕೊಟ್ಟ ಪುಸ್ತಕ ಮರೆಯಲಾದೀತೆ? ಪುಸ್ತಕ ಬಿಡುಗಡೆಯ ಹಿಂದಿನ ದಿನ ಅಧ್ಯಕ್ಷತೆ ವಹಿಸಬೇಕಿದ್ದ ನಿಟ್ಟೂರ ಶ್ರೀನಿವಾಸರಾಯರು ತೀರಿಕೊಂಡರು. ನಮ್ಮ ಕಷ್ಟವನ್ನು ಅರಿತ ಜಿ. ವೆಂಕಟಸುಬ್ಬಯ್ಯನವರು ಒಪ್ಪಿ ಕಾರ್ಯಕ್ರಮಕ್ಕೆ ಬಂದರು. ಚಂದ್ರಶೇಖರ ಕಂಬಾರರಂತೂ ಪುಸ್ತಕದಲ್ಲಿದ್ದ ಎಲ್ಲ ವಿಷಯವನ್ನೂ ಕಥಾ ಶೈಲಿಯಲ್ಲಿ ಪರಿಚಯಿಸಿದರು. ಪ್ರಪಂಚದ ಬೇರೆ ಬೇರೆ ಕಡೆಗಳಲ್ಲಿ ಕೆಲಸ ಮಾಡಿ ಬೆಂಗಳೂರಿಗೆ ಬಂದು ನೆಲಸಿರುವ ಗೋಪಾಲಕೃಷ್ಣ ರಾಮನ್ ದಂಪತಿ “ಈ ಪುಸ್ತಕ ಓದಿದೆ. ತುಂಬಾ ಚೆನ್ನಾಗಿದೆ. ನೀವು ಶಾಸ್ತ್ರಿಗಳನ್ನು ಕಂಡವರು. ನಮಗೆ ಅಂಥ ಯೋಗ ಕೂಡಿ ಬರಲಿಲ್ಲ. ನಿಮ್ಮನ್ನಾದರೂ ನೋಡಿ ಹೋಗುತ್ತೇವೆ’ ಎಂದು ಮನೆ ಹುಡುಕಿಕೊಂಡು ಬಂದಾಗ ಏನು ಹೇಳುವುದು ಗೊತ್ತಾಗಲಿಲ್ಲ. ನಮ್ಮ ಬದುಕಿನ ಸಾರ್ಥಕ್ಯವಷ್ಟೆ. (ಕನ್ನಡ ಸಾಹಿತ್ಯ ಪರಿಷತ್ತು ಅತ್ಯುತ್ತಮ ಪ್ರಕಾಶನ ಸಂಸ್ಥೆಗೆ ನೀಡುವ “ಅಂಕಿತ ಪುಸ್ತಕ ಪುರಸ್ಕಾರ’ ಸ್ವೀಕಾರ ಭಾಷಣದ ಆಯ್ದ ಭಾಗ) ನ. ರವಿಕುಮಾರ