ಜೈಪುರ್:ಗೋ ಸಾಗಾಣೆ ಮಾಡುತ್ತಿದ್ದ ಪೆಹ್ಲೂ ಖಾನ್ ಹತ್ಯಾ ಪ್ರಕರಣದಲ್ಲಿ ಆರು ಮಂದಿಗೂ ರಾಜಸ್ಥಾನ್ ಪೊಲೀಸರು ಕ್ಲೀನ್ ಚಿಟ್ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ನಲ್ಲಿ ಆರು ಮಂದಿಯ ಹೆಸರನ್ನೂ ತೆಗೆಯಲಾಗಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ಏನಿದು ಪೆಹ್ಲೂ ಖಾನ್ ಹತ್ಯಾ ಪ್ರಕರಣ?
ಏಪ್ರಿಲ್ 1ರಂದು ಪೆಹ್ಲೂ ಖಾನ್ ಮತ್ತು ಮಗ ಇರ್ಷಾದ್ ಜೈಪುರದ ದನದ ಜಾತ್ರೆಗೆ ತೆರಳಿದ್ದರು, ಅಲ್ಲಿಂದ 2 ಹಸುಗಳೊಂದಿಗೆ ಹರ್ಯಾಣಕ್ಕೆ(ಮನೆಗೆ) ವಾಪಸ್ ಆಗುತ್ತಿದ್ದ ವೇಳೆಯಲ್ಲಿ ಗೋ ರಕ್ಷಕರ ಗುಂಪು ರಾಜಸ್ಥಾನದ ಅಲ್ವಾರ್ ನಲ್ಲಿ ಅವರನ್ನು ತಡೆದು ದಾಳಿ ನಡೆಸಿದ್ದರು. ರೈತ ಪೆಹ್ಲೂ ಖಾನ್ (55ವರ್ಷ) ಸಾಯುವ ಮುನ್ನ ಆರು ಮಂದಿಯ ಹೆಸರನ್ನು ಹೇಳಿದ್ದರು.
ಪೆಹ್ಲೂ ಖಾನ್ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ, ಹುಕುಂ ಚಾಂದ್, ನವೀನ್ ಶರ್ಮಾ, ಜಗ್ಮಲ್ ಯಾದವ್, ಓಂ ಪ್ರಕಾಶ್, ಸುಧೀರ್ ಮತ್ತು ರಾಹುಲ್ ಸೈನಿ ಸೇರಿದಂತೆ ಕೆಲವರು ತನ್ನ ಮೇಲೆ ದಾಳಿ ನಡೆಸಿರುವುದಾಗಿ ತಿಳಿಸಿದ್ದರು.
ಏತನ್ಮಧ್ಯೆ ಅಲ್ವಾರ್ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಪ್ರಕಾಶ್ ಗುರುವಾರ, ತನಿಖೆಯಲ್ಲಿ ಆರು ಮಂದಿ ದೋಷಿಗಳಲ್ಲ ಎಂಬುದು ಪತ್ತೆಯಾಗಿದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬ ಆರೋಪಿಗಾಗಿ ಘೋಷಿಸಿದ್ದ ತಲಾ 5 ಸಾವಿರ ನಗದು ಬಹುಮಾನದ ಘೋಷಣೆಯನ್ನು ವಾಪಸ್ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
ಸಿಬಿ, ಸಿಐಡಿ ತನಿಖೆಯಲ್ಲಿ ಆರು ಮಂದಿ ಆರೋಪಿಗಳಲ್ಲ ಎಂಬುದು ತಿಳಿದು ಬಂದಿದೆ ಎಂದು ಪ್ರಕಾಶ್ ತಿಳಿಸಿದ್ದಾರೆ. ಅವರು ನಿರ್ದೋಷಿಗಳು ಎಂದು ತನಿಖೆಯಲ್ಲಿ ಕಂಡು ಬಂದ ಹಿನ್ನೆಲೆಯಲ್ಲಿ ಎಫ್ಐಆರ್ ನಿಂದ ಆರು ಮಂದಿ ಆರೋಪಿಗಳ ಹೆಸರನ್ನು ತೆಗೆಯುವಂತೆ ಸಿಬಿ, ಸಿಐಡಿ ವರದಿಯಲ್ಲಿ ಅಲ್ವಾರ್ ಪೊಲೀಸರಿಗೆ ಶಿಫಾರಸ್ಸು ಮಾಡಿತ್ತು ಎಂದು ವಿವರಿಸಿದ್ದಾರೆ.