ಭಟ್ಕಳ: ತಾಲೂಕಿನ ಅಳ್ವೆಕೋಡಿ ದುರ್ಗಾಪರಮೇಶ್ವರಿ ದೇವಸ್ಥಾನದ ಮಾರಿಜಾತ್ರೆ ಜ.15 ಮತ್ತು 16ರಂದು ನಡೆಯಲಿದೆ ಎಂದು ಮಾರಿಜಾತ್ರೆ ಕಮೀಟಿ ಅಧ್ಯಕ್ಷ ರಾಮಾ ಮೊಗೇರ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಳ್ವೆಕೋಡಿ ದುರ್ಗಾಪರಮೇಶ್ವರಿ ದೇವಸ್ಥಾನವು ಅತ್ಯಂತ ಪುರಾತನವಾದದ್ದು ತನ್ನದೇ ಆದ ಇತಿಹಾಸ ಹೊಂದಿದೆ. ಹಿಂದೆ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿದ್ದ ಮಾರಿ ಜಾತ್ರೆ ಕಾರಣಾಂತರದಿಂದ ನಿಂತು ಹೋಗಿತ್ತು. ಕಳೆದ ಮೂರು ವರ್ಷಗಳಿಂದ ಪುನರಾರಂಭಿಸಿ ಎರಡು ವರ್ಷಕ್ಕೊಮ್ಮೆ ನಡೆಸಲಾಗುತ್ತಿದೆ.
ಈ ವರ್ಷ ಜ.15 ರಂದು ಬೆಳಗ್ಗೆ ಮಾರಿಕಾಂಬಾ ಮೂರ್ತಿಯನ್ನು ಗದ್ದುಗೆಯಲ್ಲಿ ಪ್ರತಿಷ್ಠಾಪಿಸಿ ದೇವತಾ ಪ್ರಾರ್ಥನೆ, ಪುಣ್ಯಾಹದೊಂದಿಗೆ ಪೂಜೆ ಪುನಸ್ಕಾರಗಳೊಂದಿಗೆ ಆರಂಭವಾಗುತ್ತದೆ. ಜ.16 ರಂದು ಸಂಜೆ ವಿಸರ್ಜನಾ ಮೆರವಣಿಗೆಯೊಂದಿಗೆ ಮುಕ್ತಾಯವಾಗಲಿದೆ ಎಂದರು.
ಮಾರಿ ಜಾತ್ರೆ ಸಲುವಾಗಿ ಜ.14 ರಂದು ಸಂಜೆ ಭಕ್ತಾದಿಗಳೆಲ್ಲ ಸೇರಿ ದುರ್ಗಾಪರಮೇಶ್ವರಿ ಅಮ್ಮನವರಲ್ಲಿ ಪ್ರಾರ್ಥನೆ ಸಲ್ಲಿಸಿ ಗುಡಿಹಿತ್ಲು ಕಂಚಿನ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಹೋಗಿ ಕಾಯಿ, ಹೂವು, ಹಣ್ಣು, ಬಳೆ, ಸೀರೆ, ಅರಸಿನ, ಕುಂಕುಮ ಅರ್ಪಿಸಿ ಪೂಜೆ ಕೊಟ್ಟು ಪ್ರಾರ್ಥಿಸುವ ಪರಿಪಾಠವಿದೆ. ಅಲ್ಲಿಂದ ಬೈಕ್ ರ್ಯಾಲಿ ಮೂಲಕ ಭಕ್ತಾದಿಗಳು ಸಾರದಹೊಳೆ, ಮಾವಿನಕಟ್ಟೆ, ಯಕ್ಷಿಮನೆ, ಸಣಭಾವಿ, ಶ್ರೀರಾಮ ಭಜನಾ ಮಂದಿರದ ಮಾರ್ಗವಾಗಿ ಹೊರೆಕಾಣಿಕೆಯೊಂದಿಗೆ ದೇವಸ್ಥಾನಕ್ಕೆ ಬರುವುದು. ನಂತರ ದೇವರಲ್ಲಿ ದೀಪ ಸ್ಥಾಪನೆ ಮಾಡಿ ಫಲಸಮರ್ಪಣೆ ಮಾಡುವುದು, ಅಡುಗೆ ಚಪ್ಪರದಲ್ಲಿ ಅಗ್ನಿಪ್ರತಿಷ್ಠಾಪನೆ ಮಾಡಲಾಗುವುದು ಎಂದರು.
ಜ.15 ರಂದು ಬೆಳಗ್ಗೆ 6ರಿಂದ ದೇವತಾ ಪ್ರಾರ್ಥನೆ, ಮಾತಂಗಿ ಮೂರ್ತಿ ಶುದ್ಧಿ, ಅಲಂಕಾರ, ನಂತರ ಮಾತಂಗಿ ಮೂರ್ತಿಯನ್ನು ಜಾತ್ರಾ ಮಂಟಪಕ್ಕೆ ತಂದು ಪ್ರತಿಷ್ಠಾಪಿಸುವುದು. ಭಕ್ತಾದಿಗಳಿಂದ ಪೂಜೆ, ಅನ್ನ ಸಂತರ್ಪಣೆ, ಸಂಜೆ ಭಜನೆ, ರಾತ್ರಿ 9ಕ್ಕೆ ವನದುರ್ಗಾ ದೇವಿ ಮೇಳ ದೇನತಡ್ಕ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ವಿಶ್ವಾಮಿತ್ರ ಮೇನಕೆ, ಶಮಂತಕ ಮಣಿ, ಕದಂಬ ಕೌಶಿಕೆ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಜ.16 ರಂದು ಬೆಳಗ್ಗೆ 7ರಿಂದ ಸುಪ್ರಭಾತ, ನಂತರ ಭಕ್ತಾದಿಗಳಿಂದ ಪೂಜೆ, ಅನ್ನ ಸಂತರ್ಪಣೆ ನಂತರ ಸಂಜೆ 3ಕ್ಕೆ ಮಾರಿಕಾಂಬಾ ಹಾಗೂ ಮಾತಂಗಿ ಮೂರ್ತಿಯ ಭವ್ಯ ಮೆರವಣಿಗೆಯೊಂದಿಗೆ ಸಾಗಿ ವೆಂಕಟಾಪುರ ನದಿಯಲಿ ವಿಸರ್ಜನೆ ಮಾಡಲಾಗುವುದು ಎಂದೂ ರಾಮಾ ಮೊಗೇರ ಹೇಳಿದರು.
ದೇವಸ್ಥಾನದ ಧರ್ಮದರ್ಶಿ ನಾರಾಯಣ ದೈಮನೆ ಮಾತನಾಡಿ, ಅಳ್ವೆಕೋಡಿ ದುರ್ಗಾಪರಮೇಶ್ವರಿ ಮಾರಿ ಜಾತ್ರೆ ವಿಜೃಂಭಣೆಯಿಂದ ನಡೆಸಲು ತೀರ್ಮಾನಿಸಿದ್ದು ಊರಿನ ಹಾಗೂ ಹೊರ ಊರಿನ ಸುಮಾರು 50 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಆ ಪ್ರಕಾರ ದೇವಾಲಯ ಹಾಗೂ ಮಾರಿಜಾತ್ರಾ ಸಮಿತಿ ಎಲ್ಲ ತಯಾರಿ ಮಾಡಿಕೊಳ್ಳಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಹನುಮಂತ ಮಂಜಪ್ಪ ನಾಯ್ಕ, ಸದಸ್ಯರಾದ ತಿಮ್ಮಪ್ಪ ನಾರಾಯಣ ಹೊನ್ನಿಮನೆ, ಮಾರಿಕಾಂಬಾ ಜಾತ್ರಾ ಸಮಿತಿ ಉಪಾಧ್ಯಕ್ಷ ಬಿಳಿಯಾ ಕುಪ್ಪ ನಾಯ್ಕ, ದೇವಪ್ಪ ಕುಪ್ಪ ಮೊಗೇರ, ಹನುಮಂತ ಮಂಜಪ್ಪ ನಾಯ್ಕ, ನಾರಾಯಣ ಮೊಗೇರ, ಗೋವಿಂದ ಮೊಗೇರ, ದುರ್ಗಾದಾಸ ಮೊಗೇರ, ಭಾಸ್ಕರ ಮೊಗೇರ, ಪ್ರಧಾನ ಅರ್ಚಕ ಗೋವರ್ಧನ ಮೊಗೇರ ಮುಂತಾದವರು ಉಪಸ್ಥಿತರಿದ್ದರು.