ಮೂಡಬಿದಿರೆ: ಆಳ್ವಾಸ್ ವಿರಾಸತ್ 24ನೇ ವರ್ಷದ ಮೂರು ದಿನಗಳ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವಕ್ಕೆ ಶುಕ್ರವಾರ ಮುಂಬಯಿಯ ಪ್ರಸಿದ್ಧ ಗಾಯಕ ಕೆ. ಕೆ. ಮತ್ತು ಬಳಗದವರು ಮುನ್ನುಡಿ ಬರೆದರು.
ಜನಪ್ರಿಯ ಹಿಂದಿ ಚಿತ್ರಗೀತೆಗಳೊಂದಿಗೆ ಕೆಲವು ಇಂಗ್ಲಿಷ್ ಹಾಡುಗಳನ್ನೂ ಹಾಡಿ ನೆರೆದ ಅರ್ಧ ಲಕ್ಷಕ್ಕೂ ಅಧಿಕ ಪ್ರೇಕ್ಷಕರನ್ನು ಮೋಡಿ ಮಾಡಿದರು. ಕೆಲವು ಹಾಡುಗಳಿಗೆ ಯುವಜನರು ಹುಚ್ಚೆದ್ದು ಕುಣಿಯತೊಡಗಿದರು. ಹಿನ್ನೆಲೆ ಸಂಗೀತದಲ್ಲಿ ಕಲ್ಯಾಣ್ ಭೌರಾ ಮತ್ತು ಜೋನ್ ತಿರುಮಲೈ ಗಿಟಾರ್‌ನಲ್ಲಿ, ರಿಂಕು ರಜಪೂತ್ ಕೀ ಬೋರ್ಡ್‌ನಲ್ಲಿ, ಲಿನ್ಸೆ ಡಿ’ಮೆಲ್ಲೋ ಡ್ರಮ್ಸ್‌ನಲ್ಲಿ ಸಂಗೀತ ಪ್ರೇಮಿಗಳ ಮನರಂಜಿಸಿದರು. ಸುಮಾರು 2 ತಾಸುಗಳುದ್ದಕ್ಕೂ ಹಾಡಿದ ಕೆ. ಕೆ. ಅವರ ಶಕ್ತಿಶಾಲಿ ಪ್ರಸ್ತುತಿಯ ಬಗ್ಗೆ ಸಭೆಗೆ ಸಭೆಯೇ
ಸಂಭ್ರಮಿಸಿತು.
ಕೇರಳದ ಸೂರ್ಯ ಗಾಯತ್ರಿ ಅವರು ದೇವರ ನಾಮ ಹಾಡಿದರು. ಮಂಗಳೂರಿನ ಸನಾತನ ನಾಟ್ಯಾಲಯದವರು ಸನಾತನ ರಾಷ್ಟ್ರಾಮೃತ ಎಂಬ ಸಮೂಹ ನೃತ್ಯದಲ್ಲಿ ದೇಶದ ಭೌಗೋಳಿಕ, ಆಧ್ಯಾತ್ಮಿಕ ನೆಲೆಗಳ ಮಹತ್ವವನ್ನು ಸುಂದರವಾಗಿ ಪ್ರಸ್ತುತಪಡಿಸಿದರು.
ಅತ್ಯುತ್ತಮ ಉದ್ಘೋಷಕರು ಈ ಕಾರ್ಯಕ್ರಮದ ಮತ್ತೂಂದು ಧನಾತ್ಮಕ ಅಂಶ. ಕೇರಳದ ಮುತಿರಿಕ್ಕಸ್ ಕೊಟ್ಟಪುರಂ ಮತ್ತು ತಂಡದ 21 ಮಂದಿ ಶುಭ್ರ ಶ್ವೇತ ವಸ್ತ್ರಧಾರಿಗಳಾಗಿ ಕೇರಳದ ದಫ್ಮುಟ್ಟು ಎಂಬ ಧಾರ್ಮಿಕ ಕಲಾ ಪ್ರಕಾರದ ಸೊಬಗನ್ನು ಅಭಿವ್ಯಕ್ತಿಸಿದರು.
ಬಳಿಕ, ಆಳ್ವಾಸ್‌ನ ಸಾಂಸ್ಕೃತಿಕ ತಂಡದವರು ಭೋ ಶಂಭೋ ಭರತನಾಟ್ಯ (ನಿರ್ದೇಶನ: ವಿ| ದೀಪಕ್ ಕುಮಾರ್ ಪುತ್ತೂರು), ಶ್ರೀರಾಮ ಪಟ್ಟಾಭಿಷೇಕ- ಬಡಗು ಯಕ್ಷಗಾನ (ನಿರ್ದೇಶ: ಮಂಟಪ ಪ್ರಭಾಕರ ಉಪಾಧ್ಯ), ಗುಜರಾತ್‌ನ ದಾಂಡಿಯಾ ಹಾಗೂ ಮಣಿಪುರಿ ಧೋಲ್ ಚಲೋಂ ಮತ್ತು ಪೂಂಗ್ ಚಲೋಂ ನೃತ್ಯಗಳನ್ನು ಪ್ರದರ್ಶಿಸಿದರು.