ಮೂಡುಬಿದಿರೆ: ಸರಕಾರ ನಡೆಸುವ ಉತ್ಸವಗಳಲ್ಲಿ ಜೀವಕಳೆ ಇಲ್ಲದೆ ಸಪ್ಪಗಾದ ವಾತಾವರಣ ಕಂಡುಬಂದರೆ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆ ನಡೆಸುತ್ತ ಬಂದಿರುವ ವಿರಾಸತ್, ನುಡಿಸಿರಿಯಂಥ ಸಾಹಿತ್ಯ ಸಾಂಸ್ಕೃತಿಕ ಉತ್ಸವಗಳಲ್ಲಿ ಜನತೆ ಸ್ವಸಂತೋಷದಿಂದ ಪಾಲ್ಗೊಳ್ಳುತ್ತ ಇದು ತಮ್ಮದೇ ಉತ್ಸವ ಎಂಬಂತೆ ಸಂಭ್ರಮಿಸುವುದನ್ನು ಕಂಡಾಗ, ಸಂಘಟಕರು ಹಾಗೂ ವೀಕ್ಷಕರ ಹೃದಯ ಶ್ರೀಮಂತಿಕೆ ಎಷ್ಟೊಂದು ಅಗಾಧವಾದುದು ಎಂಬುದು ಅರಿವಾಗುತ್ತದೆ. ಈ ಎಲ್ಲ ಕಾರ್ಯಕ್ರಮಗಳು ನಮ್ಮ ನಿಮ್ಮ ಹೃದಯವನ್ನು ಗೆದ್ದಿವೆ, ಗೆಲ್ಲುತ್ತಿವೆ ಎಂದು ರಾಜ್ಯ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಮುಖ್ಯ ಆಯುಕ್ತ, ಮಾಜಿ ಸಚಿವ ಪಿ.ಜಿ.ಆರ್. ಸಿಂಧಿಯಾ ಹೇಳಿದರು.
ವಿದ್ಯಾಗಿರಿಯಲ್ಲಿ ಗುರುವಾರ ಪ್ರಾರಂಭವಾದ 29ನೇ ವರ್ಷದ ಆಳ್ವಾಸ್ ವಿರಾಸತ್ -2023ರಂಗವಾಗಿ ಏರ್ಪಡಿಸಲಾಗಿರುವ ಸಪ್ತ ಮೇಳಗಳನ್ನು ಉದ್ಘಾಟಿಸಿ ಮಾತನಾಡಿದ ಅವರು ಇಂಥ ಉತ್ಸವ ನೋಡಲು ಅದೃಷ್ಟ ಬೇಕು. ಕೃಷಿಯೊಂದಿಗೆ ನಾಡಿನ ಸಾಂಸ್ಕೃತಿಕ ಬದುಕಿನ ಅನಾವರಣವಾಗುತ್ತಿದೆ. ಹೃದಯದ ಕಣ್ಣುಗಳನ್ನು ತೆರೆಸುವ ಪ್ರದರ್ಶನ ಎಂದು ಶ್ಲಾಘಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವರು ಸ್ವಾಗತಿಸಿ ವಿರಾಸತ್ ಧ್ಯೇಯೋದ್ಧೇಶ, ಸ್ವರೂಪ ವಿವರಿಸಿದರು.
ಮಾಜಿ ಸಚಿವ ಅಭಯಚಂದ್ರ, ಚೌಟರ ಅರಮನೆ ಕುಲದೀಪ ಎಂ., ಶ್ರೀಪತಿ ಭಟ್, ಬಾಹುಬಲಿ ಪ್ರಸಾದ್, ಚಂದ್ರಶೇಖರ ಎಂ. ಎಸಿಎಫ್ ಸತೀಶ್ ಎನ್. , ಕೆವಿಕೆ ವಿಜ್ಞಾನಿ ಡಾ| ಬಿ.ಧನಂಜಯ, ಎಸ್ ಕೆಡಿ ಆರ್ ಡಿಪಿಯ ದುಗ್ಗೇ ಗೌಡ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇಗೌಡ, ಜಯಕುಮಾರ, ಬಾಲಕೃಷ್ಣ ಶೆಟ್ಟಿ ಮೊದಲಾದ ಗಣ್ಯರಿದ್ದರು. ಉಪನ್ಯಾಸಕ ಕೆ. ವೇಣುಗೋಪಾಲ ಶೆಟ್ಟಿ ನಿರೂಪಿಸಿದರು.
ಇದು ನಂದನವನ
ಮೂಡುಬಿದಿರೆಯ ಸ್ವಸ್ತಿಶ್ರೀಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಆಶೀರ್ವಚನವಿತ್ತರು. ನಮ್ಮೆಲ್ಲರ ಬದುಕಿಗೆ ಆಧಾರವೇ ಕೃಷಿ. ಪಾಳು ಬಿದ್ದಿರುವ ಬರಡುಭೂಮಿಯನ್ನು ನಿರುದ್ಯೋಗಿಗಳೆನ್ನುವ ಯುವಕರಿಗೆ ನೀಡಿ ಅಲ್ಲಿ ಕೃಷಿ ಅರಳಿಸುವ ಕಾರ್ಯ ನಡೆಯಬೇಕಾಗಿದೆ. ಕಾಲೇಜು ಶಿಕ್ಷಣದ ಜತೆಗೆ ಅಥವಾ ಬಳಿಕ ಕನಿಷ್ಠ ಎರಡು ವರ್ಷ ಕೃಷಿಯಲ್ಲಿ ಯುವಜನರು ತೊಡಗಿಸಿಕೊಳ್ಳುವಂತಾದರೆ ಆಹಾರದಲ್ಲಿ ಕೊರತೆ ತಲೆದೋರಲು ಸಾಧ್ಯವೇ ಇಲ್ಲ, ಮಾನವ ಶ್ರಮದ ಗೌರವವೂ ಅವರಿಗೆ ಮನವರಿಕೆ ಆಗಲು ಸಾಧ್ಯ. ವಿದ್ಯಾಗಿರಿ ಎಂಬ ಬರಡು ಭೂಮಿ ಹೇಗೆ ನಂದನವನವಾಗಿ ಬಹುಬಗೆಯಲ್ಲಿ ಅರಳಿಕೊಂಡಿದೆ ಎಂಬುದು ಚೇತೋಹಾರಿ ಸಂಗತಿ ಎಂದರು.