ಮೂಡುಬಿದಿರೆ: ಕಳೆದ ಹದಿಮೂರು ವರ್ಷಗಳಿಂದಲೂ ಬೃಹತ್ ಉದ್ಯೋಗ ಮೇಳಗಳನ್ನು ಆಯೋಜಿಸುತ್ತ ಬರುತ್ತಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಸರಕಾರ ಮಾಡುವ ಕೆಲಸವನ್ನು ತಾನೇ ಮುತುವರ್ಜಿಯಿಂದ ಮಾಡುತ್ತಿರುವುದು ಅಭಿನಂದನೀಯ ಎಂದು ಸಂಸದ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಶುಕ್ರವಾರ ಆರಂಭವಾದ “ಆಳ್ವಾಸ್ ಪ್ರಗತಿ-2023′ ಬೃಹತ್ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
2014ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಔದ್ಯೋಗಿಕ ಸಮೀಕ್ಷೆ ನಡೆಸಿ, ಜಿಲ್ಲೆಗೊಂದು ಉದ್ಯೋಗ ಮೇಳದ ಕಲ್ಪನೆ ತಂದಿದ್ದರು. ಆದರೆ, ಆಳ್ವಾಸ್ ಅದಕ್ಕಿಂತ ಮೊದಲೇ ಇಂಥ ಪರಿಕಲ್ಪನೆಯನ್ನು ಸಾಕಾರಗೊಳಿಸುವ ಹೆಜ್ಜೆ ಹಾಕಿದ್ದು ಶ್ಲಾಘನೀಯ ಎಂದವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಪ್ರತಿಭೆಯಷ್ಟೇ ಸಾಲದು, ನಿಮ್ಮ ಬಾಹ್ಯ ಉಡುಗೆ ತೊಡುಗೆ, ಹಾವ ಭಾವ ನಡತೆ, ಮಾತಿನ ಶೈಲಿ ಎಲ್ಲವೂ ಉದ್ಯೋಗದಾತರ ಗಮನ ಸೆಳೆಯುವಂತಿದ್ದಾಗ ನೌಕರಿ ಸಿಗುವ ಸಾಧ್ಯತೆ ಹೆಚ್ಚು’ ಎಂದು ಉದ್ಯೋಗಾಕಾಂಕ್ಷಿಗಳಿಗೆ ಕಿವಿಮಾತು ಹೇಳಿದರು.
ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಪ್ರಸ್ತಾವನೆಗೈದರು. ವಿದೇಶಗಳ ದೃಷ್ಟಿಯಲ್ಲಿ ಭಾರತೀಯ ಅಭ್ಯರ್ಥಿ ಉತ್ತಮ ಆಯ್ಕೆ. ಇಲ್ಲಿನವರಿಗೆ ಅದು ಆರ್ಥಿಕವಾಗಿಯೂ ಆಕರ್ಷಕ. ಆದರೆ, ಸ್ವದೇಶ ಬಿಟ್ಟು ವಿದೇಶಕ್ಕೆ ಹಾರಿಬಿಡುವ ನೀವು ಸಾಂಸಾರಿಕ, ಕೌಟುಂಬಿಕ ನೆಲೆಗಟ್ಟಿನ ಮಹತ್ವವನ್ನು ಕಳೆದುಕೊಳ್ಳುವ ಕಳವಳಕಾರಿ ಸಂಗತಿಯನ್ನು ಮರೆಯಬೇಡಿ. ದೇಶದಲ್ಲಿ ನೆಲೆ ನಿಂತು ಸಾಧಿ ಸುವ ಛಲದೊಂದಿಗೆ ಇಲ್ಲೇ ಬೆಳೆಯಲು ಪ್ರಯತ್ನಿಸಿ, ದೇಶಕ್ಕೂ ಕೊಡುಗೆಯಾಗಿರಿ. ಜ್ಞಾನದ ಜತೆ ಕೌಶಲ ವೃದ್ಧಿಪಡಿಸಿದಾಗ ಉದ್ಯೋಗ ಸುಲಭಸಾಧ್ಯವಾಗುತ್ತದೆ’ ಎಂದವರು ಹೇಳಿದರು.
ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಭಾರತ್ ಸ್ಕೌಟ್ಸ್ ಮತ್ತು ಗೆ„ಡ್ಸ್‌ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ, ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಇದ್ದರು.
ಯುಎಇ ಮೂಲದ ಬುರ್ಜಿಲ್ ಹೋಲ್ಡಿಂಗ್ಸ್‌ನ ಮಾನವ ಸಂಪನ್ಮೂಲದ ಸಮೂಹ ಮುಖ್ಯಸ್ಥ ಡಾ| ಸಂಜಯ್ ಕುಮಾರ್, ಅಲೆಂಬಿಕ್ ಫಾರ್ಮಾಸುಟಿಕಲ್ಸ್‌ನ ಮಾನವ ಸಂಪನ್ಮೂಲದ ಸಹ ಉಪಾಧ್ಯಕ್ಷ ಅರವಿಂದ ತ್ರಿಪಾಠಿ, ಫ್ಯಾಕ್ಟ್ಸೆಟ್ ಸಿಸ್ಟಮ್ ಇಂಡಿಯಾ ಹಾಗೂ ಭಾರತ ಮತ್ತು ಫಿಲಿಪೈನ್ಸ್ ಟಾಲೆಂಟ್ ಅಕ್ವಸಿಷನ್ ಉಪಾಧ್ಯಕ್ಷೆ ಅನುಪಮ ರಂಜನ್ ಉಪಸ್ಥಿತರಿದ್ದರು. ಆಳ್ವಾಸ್ ಪ.ಪೂ. ಕಾಲೇಜಿನ ಕಲಾ ವಿಭಾಗದ ಡೀನ್ ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಆನ್‌ಲೈನ್ ಮೂಲಕ 9,018 ಮಂದಿ, ಸ್ಥಳದಲ್ಲೇ 1,432 ಮಂದಿ ನೋಂದಣಿ ನಡೆಸಿದ್ದು ಒಟ್ಟು 7,986 ಮಂದಿ ಶುಕ್ರವಾರ ಆಗಮಿಸಿದ್ದರು. ಒಟ್ಟು 198 ಕಂಪೆನಿಗಳು ಅಭ್ಯರ್ಥಿಗಳ ಆಯ್ಕೆಯಲ್ಲಿ ಪಾಲ್ಗೊಂಡಿದ್ದವು.