Advertisement
ನನ್ನ ಮೂಲ ಹೆಸರು ದೊರೆಸ್ವಾಮಿ. ನಾವು ನಾಲ್ವರು ಗಂಡು ಮಕ್ಕಳು. 6-7ನೇ ತರಗತಿವರೆಗೆ ನನ್ನಲ್ಲಿ ಯಾವ ಭಾವನೆಯೂ ಇರಲಿಲ್ಲ. ಬಳಿಕ ನನ್ನ ವರ್ತನೆ ಹೆಣ್ಣಿನಂತಾಯಿತು. ಹೆಣ್ಣಿನಂತೆ ಉಡುಗೆ- ತೊಡುಗೆ ಧರಿಸಲು ಆಸೆಯಾಯಿತು. ಟೀಚರ್, ಸಹಪಾಠಿಗಳು ಮೂದಲಿಸಿದರು. 10ನೇ ತರಗತಿಗೆ ಶಿಕ್ಷಣ ಮುಗಿಸಿ ಮನೆ ಬಿಟ್ಟು ದಿಲ್ಲಿಗೆ ಹೋದೆ. ಅಲ್ಲಿ ನಮ್ಮವರು ಸಿಕ್ಕಿ, ಜತೆಸೇರಿ ಭಿಕ್ಷೆ ಬೇಡಲಾರಂಭಿಸಿದೆ. ಅಲ್ಲಿಂದ ಬದಲಾದೆ ಎಂದರು.
ನಾನು ಬದಲಾದಾಗ ಉದ್ಯೋಗ ಅರಸಿ ಊರೂರು, ಅಂಗಡಿ-ಮಳಿಗೆಯನ್ನು ಸುತ್ತಾಡಿದ್ದೇನೆ. ಆದರೆ ಯಾರೂ ಉದ್ಯೋಗ ನೀಡಿಲ್ಲ. ನೋವಿನ ಸಂಗತಿಯೆಂದರೆ ಶೌಚಾಲಯ ಬಳಸಲೂ ಅವಕಾಶ ನೀಡಲಿಲ್ಲ. ಹೊಟ್ಟೆಪಾಡಿಗೆ ಏನು ಮಾಡಬೇಕು ಎಂದು ಯೋಚಿಸಿದಾಗ ಭಿಕ್ಷಾಟನೆ ಮತ್ತು ಲೈಂಗಿಕ ಕಾರ್ಯಕರ್ತೆಯಾಗಿ ಬದಲಾಗ ಬೇಕಾಯಿತು. ಉದ್ಯೋಗವೇ ಇಲ್ಲದಿದ್ದ ಮೇಲೆ ಮತ್ತೇನನ್ನು ಮಾಡಬೇಕಿತ್ತು ಎಂದವರು ಪ್ರಶ್ನಿಸಿದರು. ಈ ಮಾತುಗಳನ್ನು ಆಲಿಸಿ ಸಮ್ಮೇಳನಾಧ್ಯಕ್ಷೆ ಡಾ| ಮಲ್ಲಿಕಾ ಘಂಟಿ ಕಂಬನಿದುಂಬಿದರು.
Related Articles
ಶಿವ-ವಿಷ್ಣುವಿಗೆ ಹುಟ್ಟಿದ ಅಯ್ಯಪ್ಪ ದೇವರನ್ನು ಪೂಜಿಸುವ ಈ ಸಮಾಜ ನಮ್ಮನ್ನು ಒಪ್ಪುವುದಿಲ್ಲ ಎನ್ನುವುದು ಬೇಸರದ ವಿಚಾರ. ನನ್ನದೊಂದು ವಿನಮ್ರ ಮನವಿಯಿದೆ: ನಿಮ್ಮ ಮನೆಯಲ್ಲಿ ನನ್ನಂತಹ ಮಗು ಹುಟ್ಟಿದರೆ ದಯವಿಟ್ಟು ಪ್ರೀತಿಯಿಂದಲೇ ಒಪ್ಪಿಕೊಳ್ಳಿ, ಹಿಂಸಿಸಬೇಡಿ. ಹೆಣ್ಣು-ಗಂಡಿನಂತೆಯೇ ನಮ್ಮನ್ನೂ ಸ್ವೀಕರಿಸಿ. ನಾವೂ ಮನುಷ್ಯರು ಎಂಬ ಸಾಮಾನ್ಯ ತಿಳಿವಳಿಕೆಯಿಂದ ಸ್ಪಂದಿಸಿ. ಪ್ರತೀ ಮನೆಯಲ್ಲಿ ತಾಯಿಯು ಹೆಣ್ಣುಮಗುವಿಗೆ ಕಲಿಸುವ ಶಿಷ್ಟಾಚಾರ, ನೀತಿನಿಯಮಗಳನ್ನು ಗಂಡುಮಗುವಿಗೂ ಕಲಿಸಲಿ. ಲೈಂಗಿಕ ಅಲ್ಪಸಂಖ್ಯಾಕರ ಭಾವನೆಗಳು ಏನು ಎಂಬ ಬಗ್ಗೆ ಗಂಡು ಮಕ್ಕಳಿಗೆ ಪ್ರತೀ ಮನೆಯಲ್ಲಿ ತಾಯಿ ಹೇಳಿಕೊಡಲಿ.
– ರೇವತಿ
Advertisement