Advertisement

ವಿದ್ಯಾಗಿರಿಯಲ್ಲಿ ತೆರೆದಿದೆ ಅರಣ್ಯ ಲೋಕ: ಮನುಕುಲದ ಜೀವಾಳ

11:47 PM Dec 21, 2022 | Team Udayavani |

ಮೂಡುಬಿದಿರೆ : ಕಾಡು ಕಾಡೆಂದರೆ ಅದು ಸಾಮಾನ್ಯ ಸಂಗತಿಯಲ್ಲ, ಮನುಕುಲದ ಜೀವಾಳ. ನಾಡ ಜನರ ಬದುಕು ಹಸನಾಗಬೇಕಾದರೆ ಕಾಡು ಬೇಕು, ಕಾಡಿದ್ದರೆ ನಾಡು ಎಂಬ ಅರಿವು ಕಾಡಿಗೆ ಮಾರಕವಾಗಿ ವರ್ತಿಸುವ ಮನುಜರು ಅರ್ಥೈಸಿಕೊಳ್ಳಬೇಕು. ಈ ದೂರದೃಷ್ಟಿಯ ಚಿಂತನೆಗೆ ಬಹುಮುಖೀಯಾಗಿ ತೆರೆದುಕೊಂಡಿದೆ-ವಿದ್ಯಾಗಿರಿ ಯಲ್ಲಿ ಆರಂಭವಾಗಿರುವ 25ನೇ ಅಂತಾರಾಷ್ಟ್ರೀಯ ಸ್ಕೌಟ್ಸ್‌ -ಗೈಡ್ಸ್‌ ಸಾಂಸ್ಕೃತಿಕ ಜಾಂಬೂರಿಯ ಪ್ರಮುಖ ಅಂಗವಾಗಿ ಮೈದಳೆದಿರುವ ಜಾಂಬೂರಿ ಅರಣ್ಯ ಲೋಕ.

Advertisement

ವಿದ್ಯಾಗಿರಿಯ ಉತ್ತರ ಭಾಗದಲ್ಲಿ ರುವ ನೂತನ ನೀಟ್‌ ಕಟ್ಟಡದ ಬದಿಗೆ ಹೊರಳಿಕೊಂಡಿರುವ ಮಣ್ಣಿನ ಮಾರ್ಗ ವನ್ನು ಒಂದಿಷ್ಟು ಕ್ರಮಿಸಿದರೆ ಬಾಯಿ ತೆರೆದ ಹತ್ತಡಿ ವಿಸ್ತಾರದ ಹುಲಿಮುಖ ವೀಕ್ಷಕರನ್ನು ಗರ್ಜನೆಯೊಂದಿಗೆ ಸ್ವಾಗತಿಸುತ್ತದೆ. ಬೆದ ರದೆ ಒಳಹೊಕ್ಕು ಇನ್ನೊಂದಷ್ಟು ದೂರ ಕ್ರಮಿಸಿದರೆ ಬಾಯೆ¤ರದ ಮೊಸಳೆ ನಮ್ಮನ್ನು ಅದರ ಉದರದೊಳಗೆ ಸೆಳೆಯುತ್ತದೆ. ಹೆದರದೆ ಮುಂದೆ ಕಡುಕತ್ತಲೆಯ ಸುರಂಗ ಮಾರ್ಗದಲ್ಲಿ ತೀರಾ ಮಂದ ಬೆಳಕಿನಲ್ಲಿ ಕಾಡುಪ್ರಾಣಿಗಳ ಕೂಗು, ಆಕಳಿಕೆ, ಗರ್ಜನೆಯನ್ನು ಕೇಳಿಸುತ್ತ ಸಾಗಿದಂತೆಲ್ಲ ನಾವು ನಮ್ಮಿರುವನ್ನು ಮರೆದು ಕಾಡಾಡಿಗಳಾಗಿ ಬಿಡುತ್ತೇವೆ.

ಈ ಪ್ರಾಣಿಯ ಮೂಲಕ ಸಾಗಿ ಬಂದಾಗ ಅಲ್ಲಲ್ಲಿ ಘೀಳಿಡುವ ಆನೆ, ಮರವೇರಿ ಕುಳಿತ ಚಿರತೆ, ಮಂಗ, ನವಿಲು ಮೊದಲಾದ ಪ್ರಾಣಿಗಳು ಸಜೀವವೋ ಎಂಬಂತೆ ಗೋಚರಿಸುತ್ತವೆ. ಮುಂದೆ ಬಂದಂತೆಲ್ಲ ಸಿಗುವ ಮರದ ಮೆಟ್ಟಲುಗಳನ್ನೇರಿದರೆ ಆಲ್ಲೊಂದು ತೂಗು ಸೇತುವೆ ಕಟ್ಟಿದ್ದಾರೆ. ಅಲುಗಾಡುವ ಈ ತೂಗುಸೇತುವೆಯಲ್ಲಿ ಅಲುಗಾಡದೆ ನಡೆಯುವ ಮಕ್ಕಳಿಗೆ ಮಜವೋ ಮಜ.

ಕೃಷಿ ಋಷಿ ಸಂಸ್ಕೃತಿ
ಒಂದೆಡೆ ನೇಗಿಲ ಹಿಡಿದು ಉಳುವಾ ಯೋಗಿ ಕಾಣಿಸಿದರೆ ಬದಿಯಲ್ಲೇ ತೆನೆ ಹಸನುಗೊಳಿಸುವ ರೈತಾಪಿ ಕಾರ್ಮಿಕರು ಜೀವಂತವಿರುವಂತೆ ಗೋಚರಿಸುತ್ತಾರೆ. ಇನ್ನೊಂದೆಡೆ ಅಗಾಧ ಜಲಸಿರಿಯ ಜಲಪಾತ ಕಣ್ಮನ ಸೆಳೆಯುತ್ತಿದೆ. ನಾಗಬನದಲ್ಲಿ ನಾಗರಾಜ ಹೆಡೆ ಎತ್ತಿದ ನೋಟವಿದೆ. ಮತ್ತೂಂದೆಡೆ ಕಿನ್ನಿಗೋಳಿಯವರು ಬುಟ್ಟಿ ಹೆಣೆಯುವ ಕಾಯಕದಲ್ಲಿ ತೊಡಗಿದ್ದಾರೆ. ಕಮ್ಮಾರರೂ ಇಲ್ಲಿದ್ದಾರೆ.

ಅನತಿ ದೂರದಲ್ಲಿ ಋಷಿಯೊಬ್ಬರು ತಪೋನಿರತರಾಗಿದ್ದರೆ ಅವರೆದುರೇ ಹುಲಿಯೊಂದು ತಣ್ಣಗೆ ಕುಳಿತಿದೆ. ಹಾದಿಬದಿಯಲ್ಲಿ ಅಳ್ವಾಸ್‌ ವಿದ್ಯಾರ್ಥಿಗಳು ಕಾಡು ಪ್ರಾಣಿಗಳ ಛದ್ಮವೇಷದಲ್ಲಿ ನಡೆದಾಡಿಕೊಂಡು ಹೋಗುವ ಮಕ್ಕಳಿಗೆ ಕಚಗುಳಿ ಇಡುತ್ತಿದ್ದಾರೆ.

Advertisement

ವಲಯ ಅರಣ್ಯಾಧಿಕಾರಿಗಳ ಕಚೇರಿ, ಕಳ್ಳಬೇಟೆ ನಿಯಂತ್ರಣ ಶಿಬಿರ, ಪಾರಗೋಲ ಕಾಣಿಸುತ್ತವೆ. ಇದರೊಂದಿಗೆ ಸ್ಕೌಟ್‌ ಮಕ್ಕಳಿಗೆ ಮಾತ್ರವಲ್ಲ ಸಾರ್ವಜನಿಕರಿಗೂ ವಿಶಿಷ್ಟ ಅನುಭವ ನೀಡುವ ಕಾಡಿನೊಳಗಿನ ನಡೆದಾಡುವ, ಒಂದೂವರೆ ಕಿ.ಮೀ. ಉದ್ದದ, ಟ್ರೆಕ್ಕಿಂಗ್‌ ಅನುಭವ ನೀಡುವ ಹಾದಿಯ ನಿರ್ಮಾಣವನ್ನೂ ಗಮನಿಸಬಹುದಾಗಿದೆ.

ನೈಸರ್ಗಿಕ ಅರಣ್ಯ
ಕೃಷಿ ಋಷಿ ಡಾ| ಎಲ್‌.ಸಿ. ಸೋನ್ಸ್‌ ಅವರು ಜತನದಿಂದ ಕಾಪಾಡಿಕೊಂಡು ಬಂದಿರುವ ನೈಸರ್ಗಿಕ ಅರಣ್ಯಪ್ರದೇಶದಲ್ಲಿ ಅತ್ಯದ್ಭುತವಾಗಿ ಮೂಡಿಬಂದಿದೆ ಅರಣ್ಯ ಲೋಕ.
ಜಾಂಬೂರಿಯ ಪ್ರಮುಖರಾದ ಡಾ| ಎಂ. ಮೋಹನ ಆಳ್ವರ ಮೇಲುಸ್ತುವಾರಿ, ಶಾಸಕ ಉಮಾನಾಥ ಕೋಟ್ಯಾನರ ಸಹಕಾರದೊಂದಿಗೆ ಮೂಡುಬಿದಿರೆ ವಲಯ ಅರಣ್ಯ ಇಲಾಖೆಯವರ ಕಲ್ಪನಾಶಕ್ತಿಗೆ ಕಲಾ ಮಾಧ್ಯಮದ ಮೂಲಕ ಇಂಬುಗೊಟ್ಟವರು ಬಂಟ್ವಾಳದ ಕೇಶವ ಸುವರ್ಣ, ತೂಗು ಸೇತುವೆ ನಿರ್ಮಿಸಿಕೊಟ್ಟವರು ಕೊಡಗಿನ ಧರ್ಮಪ್ಪ. ವಲಯ ಸ. ಅರಣ್ಯ ಸಂರಕ್ಷಣ ಅಧಿಕಾರಿ ಸತೀಶ್‌ ಎನ್‌., ಅರಣ್ಯಾಧಿಕಾರಿ ಹೇಮಗಿರಿ ಅಂಗಡಿ, ವಲಯದ ಅರಣ್ಯ ಇಲಾಖಾ ಸಿಬಂದಿ ಮೂರು ವಾರಗಳಿಂದ ಅವಿರತವಾಗಿ ಪರಿಶ್ರಮಿಸಿದ್ದಾರೆ.

ವಿವಿಧ ಮೇಳಗಳಿಗೆ ಚಾಲನೆ
ಮೂಡುಬಿದಿರೆ: ಆಳ್ವಾಸ್‌ ಕಾಲೇಜಿನಲ್ಲಿ ನಡೆಯುತ್ತಿರುವ ವಿಶ್ವ ಜಾಂಬೂರಿ ಹಿನ್ನೆಲೆಯಲ್ಲಿ ವಿವಿಧ ಮೇಳಗಳ ಉದ್ಘಾಟನ ಕಾರ್ಯಕ್ರಮ ನೀಟ್‌ ಲಾಂಗ್‌ ಟರ್ಮ್ ಬಿಲ್ಡಿಂಗ್‌ನಲ್ಲಿ ಬುಧವಾರ ನಡೆಯಿತು.

ಕಲಾಮೇಳವನ್ನು ಚಿತ್ರ ಕಲಾವಿದ ಕೆ.ಕೆ. ಕೃಷ್ಣ ಶೆಟ್ಟಿ, ವಿಜ್ಞಾನ ಮೇಳವನ್ನು ಇಸ್ರೋದ ಮಾಜಿ ವೈಜ್ಞಾನಿಕ ಕಾರ್ಯದರ್ಶಿ ಡಾ| ದಿವಾಕರ್‌, ಕೃಷಿ ಮೇಳವನ್ನು ಶ್ರೀಪತಿ ಭಟ್‌, ಪುಸ್ತಕ ಮೇಳವನ್ನು ಶಾಸಕ ಉಮಾನಾಥ ಕೋಟ್ಯಾನ್‌ ಹಾಗೂ ಆಹಾರ ಮೇಳವನ್ನು ಒಡಿಶಾದ ಭಟ್ಕಳ ಕಾಮತ್‌ ಗ್ರೂಪ್‌ ಆಫ್‌ ಹೊಟೇಲ್‌ನ ಪ್ರಮುಖರಾದ ಕೆ.ಪಿ. ಮಿಶ್ರಾ ಉದ್ಘಾಟಿಸಿದರು.
ಅರಣ್ಯ ಚಾರಣಕ್ಕೆ ಜಿಲ್ಲಾಧಿಕಾರಿ ರವಿಕುಮಾರ್‌ ಎಂ.ಆರ್‌. ಚಾಲನೆ ನೀಡಿ ದರು. ಜಿಲ್ಲಾ ಪಂಚಾಯತ್‌ ಸಿಇಒ ಡಾ| ಕುಮಾರ್‌, ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ| ಎಂ. ಮೋಹನ್‌ ಆಳ್ವ ಮೊದಲಾದವರು ಉಪಸ್ಥಿತರಿದ್ದರು.

– ಧನಂಜಯ ಮೂಡುಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next