ಮೂಡಬಿದಿರೆ: ‘ಮಹಿಳಾ ಕ್ರೀಡಾಳುಗಳ ಬೆಳವಣಿಗೆಯಲ್ಲಿ ಪುರುಷರ ಸಹಕಾರ ಪ್ರೋತ್ಸಾಹ ಅತ್ಯಗತ್ಯವಾಗಿದೆ’ ಎಂದು ಡಬಲ್ ಒಲಿಂಪಿಯನ್ ಪ್ರಮೀಳಾ ಅಯ್ಯಪ್ಪ ಹೇಳಿದರು. ಸ್ವರಾಜ್ಯ ಮೈದಾನದ ಕ್ರೀಡಾಂಗಣದಲ್ಲಿ ಶನಿವಾರ ನಡೆದ, ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ.ಗೆ ಸಂಯೋಜಿತ ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ, ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್ ಹಾಗೂ ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿ.ವಿ.ಗೆ ಸಂಯೋಜಿತ ಆಳ್ವಾಸ್‌ನ ವಿವಿಧ ಕಾಲೇಜುಗಳ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿವರು ಮಾತನಾಡಿದರು.
ನನ್ನ ಬದುಕಿನಲ್ಲಿ ತಂದೆ, ಮದುವೆಯಾದ ಬಳಿಕ ಪತಿ ತಮಗೆ ನೀಡಿದ ಸಹಕಾರ, ಪ್ರೋತ್ಸಾಹದಿಂದಾಗಿ ಕ್ರೀಡಾರಂಗದಲ್ಲಿ ಸಾಧನೆ ಮಾಡಲು ಸಾಧ್ಯವಾಗಿದೆ’. ಡಾ| ಮೋಹನ ಆಳ್ವರು ಕ್ರೀಡಾರಂಗದಲ್ಲಿ ದತ್ತು ಸ್ವೀಕಾರ ಯೋಜನೆಯನ್ನು ಹಮ್ಮಿಕೊಂಡು ದೇಶದ ಕ್ರೀಡಾಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡುತ್ತಿದ್ದಾರೆ ಎಂದರು.
ರಾಷ್ಟ್ರಮಟ್ಟದ ಆಳ್ವಾಸ್ ಕ್ರೀಡಾಳುಗಳಾದ ಸುಪ್ರೀತಾ ಕ್ರೀಡಾ ಜ್ಯೋತಿ ಬೆಳಗಿದರು. ನವೀನ್, ಜೊಬಿನ, ಸಿಮೋನಾ, ರವಿಮಠ್ ಕ್ರೀಡಾಜ್ಯೋತಿಯನ್ನು ಮುಖ್ಯ ಅತಿಥಿಗೆ ಒಪ್ಪಿಸಿ ಬಳಿಕ ಅವರಿಂದ ಪಡೆದ ಕ್ರೀಡಾಜ್ಯೋತಿಯನ್ನು ಜ್ಯೋತಿಕುಂಡದತ್ತ ಒಯ್ದು ಅದನ್ನು ಬೆಳಗಿದರು.
ಪ್ರಾರಂಭದಲ್ಲಿ ನಡೆದ 3,000ಕ್ಕೂ ಅಧಿಕ ಕ್ರೀಡಾಳುಗಳ ಆಕರ್ಷಕ ಪಥ ಸಂಚಲನದ ಗೌರವ ರಕ್ಷೆಯನ್ನು ಪ್ರಮೀಳಾ
ಅಯ್ಯಪ್ಪ ಸ್ವೀಕರಿಸಿದರು. ಸಂಸ್ಥೆಯ ಅಧ್ಯಕ್ಷ ಡಾ| ಮೋಹನ ಆಳ್ವ, ಮ್ಯಾನೇಜಿಂಗ್ ಟ್ರಸ್ಟಿ ವಿವೇಕ ಆಳ್ವ ಹಾಗೂ ವಿವಿಧ ಕಾಲೇಜುಗಳ ಪ್ರಾಚಾರ್ಯರು ಈ ಸಂದರ್ಭ ಉಪಸ್ಥಿತರಿದ್ದರು.
ರವಿ ಕ್ರೀಡಾಳುಗಳ ಪರವಾಗಿ ಪ್ರಮಾಣ ವಚನ ಸ್ವೀಕರಿಸಿದರು. ಕಾಲೇಜ್ ಆಫ್ ನರ್ಸಿಂಗ್‌ನ ಪ್ರಾಚಾರ್ಯ ಡಾ| ಬಿ.ಎ. ಯತಿಕುಮಾರ ಸ್ವಾಮಿ ಗೌಡ ಸ್ವಾಗತಿಸಿದರು. ಎಐಇಟಿ ಪ್ರಾಚಾರ್ಯ ಡಾ| ಪೀಟರ್ ಫೆರ್ನಾಂಡಿಸ್ ವಂದಿಸಿದರು. ರೀನು ಥೋಮಸ್ ನಿರೂಪಿಸಿದರು.
ಆಕರ್ಷಕ ಪಥಸಂಚಲನ
ಪ್ರಾರಂಭದಲ್ಲಿ ನಡೆದ ಕ್ರೀಡಾಪಟುಗಳ ಪಥಸಂಚಲನದಲ್ಲಿ 3,000ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದು ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ಡೊಳ್ಳು ಕುಣಿತ, ಹೊನ್ನಾವರದ ಮದರ್ ತೆರೆಸಾ ಬ್ರಾಸ್ ಬ್ಯಾಂಡ್, ಸ್ಕೂಲ್ ಬ್ಯಾಂಡ್ ಮೊದಲಾದ ಆಕರ್ಷಣೆಗಳಿದ್ದವು.