Advertisement
ಕೃಷಿ ಸಿರಿ ನಡೆಯುವ ಮುಂಡ್ರುದೆ ಗುತ್ತು ರಾಮ ಮೋಹನ ರೈ ಆವರಣದಲ್ಲಿ ಹೂ ತರಕಾರಿಗಳ ಸಹಿತ ಕೃಷಿ ಸಮೃದ್ಧವಾಗಿ ಬೆಳೆದು ನಿಂತಿದೆ. ಕಳೆದ ಎರಡು ತಿಂಗಳ ಪರಿಶ್ರಮದಿಂದ ಸಮೃದ್ಧವಾದ ಕೃಷಿತೋಟ ನಿರ್ಮಾಣವಾಗಿದ್ದು, ಈಗ ಅವುಗಳಿಗೆ ದೃಷ್ಟಿ ತಾಗಬಾರದು ಎಂಬ ಕಾಳಜಿಯಿಂದಈ ಬೆದರುಗೊಂಬೆಗಳನ್ನು ಇರಿಸಲಾಗಿದೆ.
ನುಡಿಸಿರಿಯ ಪ್ರವರ್ತಕ ಡಾ| ಎಂ. ಮೋಹನ ಆಳ್ವರ ಮಾರ್ಗದರ್ಶನದಲ್ಲಿ ಕಲಾಶಿಕ್ಷಕ ಭಾಸ್ಕರ ನೆಲ್ಯಾಡಿ ಮತ್ತು ಸಂಗಡಿಗರ ನಿರ್ವಹಣೆಯಲ್ಲಿ ಜಿಲ್ಲೆಯ ಚಿತ್ರಕಲಾ ಶಿಕ್ಷಕರು ಈ ಹೊಸತನವನ್ನು ಹೊದ್ದುಕೊಂಡ ಬೆದರುಗೊಂಬೆಗಳನ್ನು ತಯಾರಿಸಿದ್ದಾರೆ. ಶೀರ್ಷಾಸನ ಮಾಡಿರುವ ಗೊಂಬೆಯೂ ಇದೆ! ಗೋಣಿ, ಪ್ಲಾಸ್ಟಿಕ್ ಕೊಡ ಪಾನ, ಥರ್ಮೋಫೋಮ್, ಥರ್ಮೋ ಕೋಲ್ ತ್ಯಾಜ್ಯ, ಬಟ್ಟೆ ಮುಂತಾದವನ್ನು ಬಳಸಿ ರೂಪಿಸಲಾಗಿದೆ. ಇವುಗಳೊಂದಿಗೆ ವೆಂಕಿ ಫಲಿಮಾರು, ಶ್ರೀನಾಥ್ ಮಣಿಪಾಲ ತಂಡದವರು ಬೈಹುಲ್ಲು, ಫೋಮ್, ಬಟ್ಟೆ, ಥರ್ಮೋ ಫೋಮ್ ತ್ಯಾಜ್ಯ ಮುಂತಾದವುಗಳನ್ನು ಬಳಸಿ ಮಾಡಿದ ಆಸೀನ ಭಂಗಿಯ ಭಾರೀ ಗಾತ್ರದ ಚಿಂಪಾಂಜಿಯೂ ಗಮನ ಸೆಳೆಯುತ್ತಿದೆ.