Advertisement

ಆಲೂರು ವೆಂಕಟರಾಯರ ಹುಟ್ಟೂರು ಮರೆತ ಸರ್ಕಾರ 

05:23 PM Nov 09, 2018 | |

ಹುಬ್ಬಳ್ಳಿ: ಕರ್ನಾಟಕ ಏಕೀಕರಣಕ್ಕೆ ಜೀವನವಿಡೀ ಶ್ರಮಿಸಿ ಕನ್ನಡಿಗರಿಂದ ‘ಕನ್ನಡ ಕುಲಪುರೋಹಿತರು’ ಎಂಬ ಪ್ರಶಂಸೆಗೆ ಪಾತ್ರರಾದ ಆಲೂರು ವೆಂಕಟರಾಯರ ಜನ್ಮಸ್ಥಳ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ವಿಪರ್ಯಾಸವೆಂದರೆ ಆ ಗ್ರಾಮದ ಎಷ್ಟೊ ಜನರಿಗೆ ಮಹಾನ್‌ ನಾಡಸೇವಕ ನಮ್ಮೂರಲ್ಲೇ ಜನಿಸಿದ್ದು ಎಂಬುದು ಗೊತ್ತಿಲ್ಲ!

Advertisement

ಹೌದು, ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆ ಆಲೂರು ಗ್ರಾಮವೇ ಆಲೂರು ವೆಂಕಟರಾಯರ ಹುಟ್ಟೂರು. ಆದರೆ ಕೆಲ ಪುಸ್ತಕ ಮತ್ತು ಅಂತರ್ಜಾಲದಲ್ಲಿ ಜನ್ಮಸ್ಥಳ ವಿಜಯಪುರ (ಅಜ್ಜಿಯ ಊರು) ವೆಂದು ತಪ್ಪು ದಾಖಲಾಗಿದ್ದರಿಂದ ಈಗಲೂ ಬಹಳಷ್ಟು ಜನರಿಗೆ ಸತ್ಯಾಂಶ ಗೊತ್ತಿಲ್ಲ. ಇನ್ನು ಅಖಂಡ ಧಾರವಾಡದ ಆಲೂರು (ಈಗಿನ ಗದಗ ಜಿಲ್ಲೆ ರೋಣ ತಾಲೂಕಿನ ಹೊಳೆ ಆಲೂರು) ಇವರ ಪೂರ್ವಿಕರಿಗೆ ಜಾಗೀರಾಗಿ ದೊರೆತ ಊರು. ಅಂದಿನಿಂದ ಇವರದ್ದು ಆಲೂರು ಮನೆತನವಾಯಿತು ಎಂದು ಹೇಳಲಾಗುತ್ತಿದೆ.

ಈಗಲೂ ಹೊಳೆ ಆಲೂರಿನಲ್ಲಿ ವೆಂಕಟರಾಯರು ಆಡಿ ಬೆಳೆದ ಮನೆ, ಗ್ರಾಮದಲ್ಲಿರುವ ಅವರ ಪುತ್ಥಳಿ ಮತ್ತು ಸರ್ಕಾರದಿಂದ ಸ್ಮಾರಕ ಭವನ ನಿರ್ಮಿಸಿರುವುದನ್ನು ನೋಡಬಹುದು. ಆದರೆ, ಆಲೂರು ವೆಂಕಟರಾಯರ ನಾಡು-ನುಡಿಗೆ ಸಲ್ಲಿಸಿದ ಸೇವೆಯನ್ನು ಸ್ಮರಿಸುವಂತ ಕಾರ್ಯ ಆಗದಿರುವುದರಿಂದ ದಿನದಿಂದ-ದಿನಕ್ಕೆ ಗ್ರಾಮಸ್ಥರ ನೆನಪಿನಂಗಳದಿಂದ ವೆಂಕಟರಾಯರು ಕಣ್ಮರೆಯಾಗುತ್ತಿದ್ದಾರೆ.

ಪಾಳು ಬಿದ್ದ ಮನೆ: ವೆಂಕಟರಾಯರು ಆಡಿ ಬೆಳೆದ ಮನೆ ಈಗ ಪಾಳು ಬಿದ್ದಿದೆ. ಇವರ (ನಾಲ್ವರು ಪುತ್ರರು ಮತ್ತು ಓರ್ವ ಪುತ್ರಿ) ಸಂಬಂಧಿಕರು ನೌಕರಿ ಕೆಲಸದ ನಿಮಿತ್ತ ಬೇರೆಡೆ ನೆಲೆಸಿದ್ದರಿಂದ ಈಗ ವೆಂಕಟರಾಯರ ಮನೆ ಅನಾಥವಾಗಿದೆ. ಗಂಗೂಬಾಯಿ ಹಾನಗಲ್ಲ, ದ.ರಾ. ಬೇಂದ್ರೆ ಸೇರಿದಂತೆ ಇತರೆ ಮಹನೀಯರ ಮನೆಗಳನ್ನು ಸ್ಮಾರಕವನ್ನಾಗಿಸಿದಂತೆ ವೆಂಕಟರಾಯರ ಮನೆಯನ್ನು ಸಹ ಸ್ಮಾರಕವನ್ನಾಗಿಸಬೇಕಾಗಿದೆ. ಗ್ರಾಮದಲ್ಲಿರುವ ಆಲೂರು ವೆಂಕಟರಾಯರ ವೃತ್ತದಲ್ಲಿ ಇವರ ಪುತ್ಥಳಿ ಪ್ರತಿಷ್ಠಾಪಿಸಲಾಗಿದೆ. 2013ರಲ್ಲಿ ಆಲೂರು ವೆಂಕಟರಾವ್‌ ಸ್ಮಾರಕ ಭವನವನ್ನು ಉದ್ಘಾಟಿಸಲಾಗಿದೆ. ಇದಕ್ಕೆ ಅಂದಾಜು 1.25 ಕೋಟಿ ರೂ. ವೆಚ್ಚ ಮಾಡಲಾಗಿದೆ. ಆದರೆ, ಭವನ ನಿರ್ಮಿಸುವ ಉದ್ದೇಶ ಈಡೇರಿಲ್ಲ. ಇಲ್ಲಿ ವೆಂಕಟರಾಯರ ಪುತ್ಥಳಿ ಬಿಟ್ಟು ಬೇರೆ ಏನೂ ಇಲ್ಲ. ಈಚೆಗೆ ಈ ಭವನದಲ್ಲಿ ಮೊರಾರ್ಜಿ ಶಾಲೆ ನಡೆಸಲಾಗುತ್ತಿದೆ. ಇನ್ನು ಆಲೂರರ ಸಂಬಂಧಿಕರ ಹೆಸರಿನಲ್ಲಿ ಆಸ್ತಿಗಳು ಇವೆ. ಈ ಎಲ್ಲ ಅಂಶಗಳನ್ನು ಗಮನಿಸಿದರೆ ಆಲೂರು ವೆಂಕಟರಾಯರ ಹುಟ್ಟೂರು ಹೊಳೆ ಆಲೂರು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

ಇದ್ದೂ ಇಲ್ಲವಾದ ಟ್ರಸ್ಟ್‌: 2009ರಲ್ಲಿಯೇ ಧಾರವಾಡದಲ್ಲಿ ಕುಲಪುರೋಹಿತರ ಹೆಸರಿನಲ್ಲಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ರಚನೆಯಾಗಿದೆ. ಆಲೂರರ ಹೆಸರಿನಲ್ಲಿ ಭವನವೂ ನಿರ್ಮಿಸಲಾಗಿದೆ. ಇಲ್ಲಿಯೇ ಟ್ರಸ್ಟ್‌ ಕಾರ್ಯವನ್ನು ಮಾಡುತ್ತದೆ. ವೆಂಕಟರಾಯರ ಹೆಸರನ್ನು ಅಜರಾಮರ ಮಾಡಲು ಟ್ರಸ್ಟ್‌ ಹಲವು ಯೋಜನೆಗಳನ್ನು ರೂಪಿಸುತ್ತಿದೆ. ಆದರೆ. ಆಲೂರರ ಹುಟ್ಟೂರ ಬಗ್ಗೆ ಯೋಚಿಸುತ್ತಿಲ್ಲ. ಹೊಳೆ ಆಲೂರಿನಲ್ಲಿರುವ ಸ್ಮಾರಕ ಭವನದಲ್ಲಾದರೂ ಆಲೂರರ ಸಾಹಿತ್ಯ, ಜೀವನ ಚರಿತ್ರೆ, ಕೃತಿಗಳ ಪ್ರದರ್ಶನ ಹಾಗೂ ಕರ್ನಾಟಕದ ಏಳ್ಗೆಗಾಗಿ ಶ್ರಮಿಸಿದ ಕಾರ್ಯವನ್ನು ಯುವ ಪೀಳಿಗೆಗೆ ಪರಿಚಯಿಸುವ ಕೆಲಸವನ್ನಾದರೂ ಮಾಡಬೇಕಾಗಿದೆ. ಇನ್ನು ಆಲೂರರು ಆಡಿ ಬೆಳೆದ ಮನೆಯನ್ನು ಜೀರ್ಣೋದ್ಧಾರ ಮಾಡಬೇಕೆಂಬುದು ಗ್ರಾಮಸ್ಥರ ಆಗ್ರಹವಾಗಿದೆ.

Advertisement

‘ಕನ್ನಡ ಕುಲ ಪುರೋಹಿತರು’ ಬಿರುದು
ಆಲೂರು ವೆಂಕಟರಾಯರು 1880 ಜುಲೈ 12ರಂದು ಜನಿಸಿದರು. ತಂದೆ ಭೀಮರಾಯರು, ತಾಯಿ ಭಾಗೀರಥೀಯರು. ಬಾಲ್ಯವನ್ನು ಹೊಳೆ ಆಲೂರಿನಲ್ಲಿ ಕಳೆದ ನಂತರ ಸಮೀಪದ ನವಲಗುಂದದಲ್ಲಿ ಪ್ರಾಥಮಿಕ ಶಿಕ್ಷಣ ಆರಂಭಿಸಿದರು. 1903ರಲ್ಲಿ ಪುಣೆಯಲ್ಲಿ ಬಿ.ಎ ಪದವಿ ಪಡೆಯುವಾಗಲೇ ಕನ್ನಡದ ಅಭಿಮಾನ ಬೆಳೆಸಿಕೊಂಡರು. ಧಾರವಾಡದಲ್ಲಿ ವಕೀಲರಾಗಿದ್ದುಕೊಂಡು ಕನ್ನಡ ನಾಡಿದ ಬಗ್ಗೆ ಜನರಲ್ಲಿ ಜಾಗೃತಿ ಉಂಟು ಮಾಡಿದರು. ಇವರು ಬರೆದ ಕರ್ನಾಟಕ ಗತವೈಭವ ಕನ್ನಡಿಗರ ಭವ್ಯ ಪರಂಪರೆಯನ್ನು ಜನರಿಗೆ ಪರಿಚಯಿಸಿ ಕೊಟ್ಟಿತು. ಸ್ವಾತಂತ್ರ್ಯ  ಸಂಗ್ರಾಮದಲ್ಲಿ ದುಮುಕಿ ಅವಿಶ್ರಾಂತ ಶ್ರಮಿಸಿದರು. ಕರ್ನಾಟಕ ವಿದ್ಯಾವರ್ಧಕ ಸಂಘದ ಸಕ್ರಿಯ ಸದಸ್ಯರಾಗಿ ಕರ್ನಾಟಕದ ಏಕೀಕರಣಕ್ಕಾಗಿ ಮಹತ್ತರ ಸೇವೆ ಸಲ್ಲಿಸಿದರು. ಇವರ ಅವಿರತ ಶ್ರಮದಿಂದಾಗಿ ಕರ್ನಾಟಕ ಏಕೀಕೃತಗೊಳ್ಳಲು ಸಾಧ್ಯವಾಯಿತು. ಅವರ ಇಡೀ ಜೀವನವೇ ಕನ್ನಡ ನಾಡು-ನುಡಿಗಾಗಿ ಅರ್ಪಣೆಯಾಗಿದ್ದಿತು. ಅವರ ಸೇವೆಯನ್ನು ಗುರುತಿಸಿದ ಕನ್ನಡ ಜನತೆ ಅವರಿಗೆ ಕನ್ನಡ ಕುಲ ಪುರೋಹಿತ ಎಂಬ ಬಿರುದು ನೀಡಿ ಗೌರವಿಸಿದರು.

ಅಜ್ಜನ ತಂದೆ ಭೀಮರಾಯರು ಆಲೂರಿನಲ್ಲಿ ಜಹಗೀರಿಯನ್ನು ಬ್ರಿಟಿಷರಿಂದ ಪಡೆದಿದ್ದರು. ಹೀಗಾಗಿ ವೆಂಕಟರಾಯರ ತಾಯಿಯ ತವರು ಮನೆ ವಿಜಯಪುರದಲ್ಲಿ ಜನಿಸಿದರೂ ಹೊಳೆ ಆಲೂರಿನಲ್ಲಿಯೇ ತಮ್ಮ ಬಾಲ್ಯವನ್ನು ಕಳೆದರು. ಅದರಿಂದಲೇ ನಮ್ಮ ಅಜ್ಜನವರಿಗೆ ಆಲೂರು ವೆಂಕಟರಾಯರು ಅಂತ ಹೆಸರು ಬಂತು. ಸ್ಥಳೀಯ ಶಾಸಕರು ಮತ್ತು ಕೆಲವರಿಂದ ಹೊಳೆ ಆಲೂರಿನಲ್ಲಿ ಸ್ಮಾರಕ ಭವನ ನಿರ್ಮಿಸಲಾಗಿದೆ. ಇನ್ನಾದರೂ ಸರ್ಕಾರ ಅದರ ಸದ್ಬಳಕೆಗೆ ಮುಂದಾಗಬೇಕು. ವೆಂಕಟರಾಯರ ಹುಟ್ಟೂರು ಆಲೂರು ಆದರೂ ಅವರ ಕಾರ್ಯಕ್ಷೇತ್ರ ಧಾರವಾಡ. ನಮ್ಮ ಅಜ್ಜಿ ಊರು ವಿಜಯಪುರದಲ್ಲಿ ವೆಂಕಟರಾಯರು ಜನಿಸಿದ್ದು. ಹೀಗಾಗಿ ಕೆಲ ಪುಸ್ತಕದಲ್ಲಿ ವಿಜಯಪುರವೆಂದು ದಾಖಲಾಗಿದೆ. 
ದೀಪಕ ಆಲೂರು,
ವೆಂಕಟರಾಯರ ಮೊಮ್ಮಗ, ಧಾರವಾಡ

ಕನ್ನಡ ನಾಡು-ನುಡಿಗೆ ಆಲೂರು ವೆಂಕಟರಾಯರ ಸೇವೆ ಸ್ಮರಣೀಯ. ಅಂಥ ಮಹನೀಯರು ನಮ್ಮ ಊರಿನಲ್ಲಿ ಜನಿಸಿರುವುದು ಹೆಮ್ಮೆಯ ವಿಷಯ. ಅವರ ಕನ್ನಡ ಕೈಂಕರ್ಯವನ್ನು ಯುವಪೀಳಿಗೆಗೆ ತಿಳಿಸುವ ಕಾರ್ಯವಾಗಬೇಕು. ಅವರ ಮನೆಯನ್ನು ಸ್ಮಾರಕವನ್ನಾಗಿ ನಿರ್ಮಿಸುವುದರ ಜೊತೆಗೆ ವರ್ಷಕ್ಕೊಮ್ಮೆ ಗ್ರಾಮದಲ್ಲಿ ಆಲೂರರ ಜಯಂತಿ, ಪುಣ್ಯಸ್ಮರಣೆ ಆಚರಿಸುವ ಮೂಲಕ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಬೇಕು.  
 ಶಿವಾನಂದ ಕೆಲೂರು ಹೊಳೆ ಆಲೂರು ಗ್ರಾಮಸ್ಥ

ಶರಣು ಹುಬ್ಬಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next