Advertisement

ಆಲೂರು: 24, 25ಕ್ಕೆ ಅಡಿಬೈಲು ರಂಗನಬೆಟ್ಟದ ಜಾತ್ರಾ ಮಹೋತ್ಸವ

01:28 PM Feb 22, 2024 | Team Udayavani |

■ ಉದಯವಾಣಿ ಸಮಾಚಾರ
ಆಲೂರು: ತಾಲೂಕಿನ ಎರಡು ಹೋಬಳಿಗಳ ಧಾರ್ಮಿಕ ಸಂಬಂಧ ಬೆಸೆಯುವ ಅಡಿಬೈಲು ಗ್ರಾಮದ ರಂಗನಬೆಟ್ಟದ ಐತಿಹಾಸಿಕ ಜಾತ್ರೆ ಫೆ.24, 25ರಂದು ನಡೆಯಲಿದೆ. ಮೊದಲ ದಿನ ಶನಿವಾರ ದೊಡ್ಡ ಹರಿಸೇವೆ, ಭಾನುವಾರ ಹಕ್ಕಿನ ಉತ್ಸವ ನಡೆಯಲಿದೆ.

Advertisement

ಮಂಗಳವಾರ ಬಿಂದಿಗಮ್ಮ ಕಳಸ ಹೊರುವ ಪೂಜಾರಿಯವರಿಗೆ ಕೇಶಮುಂಡನ, ಹಸೆ ಹಾಕಿ ಕಾಸೆ ವೇಷದೊಂದಿಗೆ ದೇವಾಲಯಕ್ಕೆ ಕಳುಹಿಸಿ ಕೊಡಲಾಗುತ್ತದೆ. ಇವರು ಜಾತ್ರಾ ಮಹೋತ್ಸವ ಮುಗಿಯುವವರೆಗೂ ಹಣ್ಣ-ಹಂಪಲು ಬಿಟ್ಟರೆ
ಬೇರೆನನ್ನೂ ಸೇವಿಸದೇ ಪೂಜಾ ಕೈಂಕರ್ಯದಲ್ಲಿ ತೊಡಗುತ್ತಾರೆ. ಶ್ರೀರಂಗನಾಥಸ್ವಾಮಿಗೂ ಬಿಂದಿಗಮ್ಮನಿಗೂ ಮದುವೆ ಮಾಡಿ ಆ ವೈಭವವನ್ನು ಆನಂದಿಸುವುದು ಈ ಜಾತ್ರೆಯ ವಿಶೇಷವಾಗಿದೆ.

ವಿಶೇಷ ಆತಿಥ್ಯ ನೀಡಿ ಗೌರವ: ದೇವಾಲಯದಲ್ಲಿ ಗುರುವಾರ ರಾತ್ರಿ ಬಿಂದಿಗಮ್ಮನವರಿಗೆ ಹಸೆ ಹಾಕುವ ವಿಶೇಷ ಪೂಜೆ, ಶುಕ್ರವಾರ ರಾತ್ರಿ ಗಂಡನ ಕಡೆ ಊರಾದ ಭರತೂರಿನ ಹೊಳೆ ದಡಕ್ಕೆ ಉತ್ಸವ ಮೂರ್ತಿಯೊಂದಿಗೆ ಬಿಂದಿಗಮ್ಮನವರನ್ನು ಕರೆ ತರಲಾಗುವುದು. ಶನಿವಾರ ಹೊಳೆ ದಡದಲ್ಲಿ ಜಾತ್ರೆ ನಡೆಯುತ್ತದೆ.

ಸಂಜೆ ಬಿಂದಿಗಮ್ಮನವರನ್ನು ಗಂಡನ ಮನೆಗೆ ಅಂದರೆ ರಂಗನಾಥಸ್ವಾಮಿ ದೇವಾಲಯಕ್ಕೆ ಕಳುಹಿಸುವುದು ವಿಶೇಷ. ಕಳಸ ಹೊರಡುವ ಮುನ್ನ ಕುಂದೂರಿನ ಗ್ರಾಮಸ್ಥರನ್ನು ಭರತೂರು ಗ್ರಾಮಸ್ಥರು ಬರಮಾಡಿಕೊಂಡು ಆತಿಥ್ಯ ನೀಡಿ ಗೌರವಿಸುತ್ತಾರೆ.

ಹೂವು ತುಳಸಿಯಿಂದ ಅಲಂಕೃತವಾದ ಹರಿವಾಣದಲ್ಲಿ ಬಿಂದಿಗಮ್ಮನವರ ಕಳಸವನ್ನು ಪೂಜಾರಿ ತಲೆಮೇಲೆ ಇಡಲಾಗುತ್ತದೆ. ಸ್ವಲ್ಪ ದೂರ ನಡೆದು ನಂತರದಲ್ಲಿ ಕಳಸವನ್ನು ಕೈಯಿಂದ ಹಿಡಿಯದೇ ಓಡುತ್ತಾರೆ. ಹೊಳೆಯಿಂದ ಸುಮಾರು 10 ಕಿ. ಮೀ. ದೂರದ ಗುಡ್ಡದ ಮೇಲಿರುವ ದೇವಸ್ಥಾನಕ್ಕೆ ಏಳು ಊರುಬಾಗಿಲಗಳನ್ನು ದಾಟಿಕೊಂಡು ಕೇವಲ ಮುಕ್ಕಾಲು ಗಂಟೆಯಲ್ಲಿ ತಲುಪಲಾಗುತ್ತದೆ.

Advertisement

ಅಡ್ಡೆ ಉತ್ಸವ: ಭಾನುವಾರ ಬೆಟ್ಟದ ಮೇಲೆ ಹಗಲು ಜಾತ್ರೆ, ಸೋಮವಾರ ಹೇಮಾವತಿ ನದಿ ನೀರಿನಿಂದ ಅಭಿಷೇಕದೊಂದಿಗೆ ಜಾತ್ರಾ ವಿಶೇಷ ಪೂಜಾ ಕಾರ್ಯಕ್ಕೆ ನಾಂದಿ ಹಾಡಲಾಗುತ್ತದೆ.

ಜಾತ್ರೆ ಫೆ.24 ರಂದು ಭರತೂರು ಹೊಳೆ ಬದಿಯಲ್ಲಿ ಮತ್ತು 25 ರಂದು ಬೆಟ್ಟದ ಮೇಲೆ ನಡೆಯುತ್ತದೆ. ಆಲೂರಿನಿಂದ 18 ಕಿ. ಮೀ. ಮಗ್ಗೆ- ರಾಯರಕೊಪ್ಪಲು ಮಾರ್ಗವಾಗಿ ಪ್ರತಿದಿನ ಸಾರಿಗೆ ಬಸ್‌ ವ್ಯವಸ್ಥೆ ಇರುತ್ತದೆ.
●ತನುಗೌಡ, ಗ್ರಾಮದ ಮುಖಂಡ

ಜಾತ್ರೆ ನಡೆಯುವ ಅಡಿಬೈಲು ವ್ಯಾಪ್ತಿ ಕಾಡಾನೆಗಳ ಹಾವಳಿ ಪ್ರದೇಶವಾಗಿದೆ. ಜಾತ್ರೆ ನಡೆಯುವ ಮೂರು ದಿನಗಳ ಕಾಲ ಮುಂಜಾಗ್ರತೆಯಿಂದ ಶಸ್ತ್ರಸಜ್ಜಿತ ಸಿಬ್ಬಂದಿಗಳನ್ನು ನೇಮಕ ಮಾಡಲಾಗುವುದು. ಭಕ್ತರು ಆತಂಕಕ್ಕೊಳಗಾಗದೇ ಧೈರ್ಯದಿಂದ
ಜಾತ್ರೆಯಲ್ಲಿ ಪಾಲ್ಗೊಳ್ಳಲಿ.
●ಬಿ.ಬಿ.ಯತೀಶ್‌, ವಲಯ ಅರಣ್ಯಾಧಿಕಾರಿ, ಆಲೂರು

Advertisement

Udayavani is now on Telegram. Click here to join our channel and stay updated with the latest news.

Next