ನವದೆಹಲಿ: ಇದೇ ಮೊದಲ ಬಾರಿಗೆ ಭಾರತೀಯ ರೈಲ್ವೆ ಇಲಾಖೆ, ಸಂಪೂರ್ಣ ದೇಶೀಯವಾಗಿ ನಿರ್ಮಿಸಿರುವ ಅಲ್ಯುಮಿನಿಯಮ್ ಸರಕು ಸಾಗಣೆ ಬೋಗಿಗಳನ್ನು ಅಳವಡಿಸಿಕೊಂಡಿದೆ. ಅಷ್ಟು ಮಾತ್ರವಲ್ಲ ಅದನ್ನು ಸರಕು ಸಾಗಣೆ ರೈಲ್ವೆಯಲ್ಲಿ ಜೋಡಿಸಿ, ಭುವನೇಶ್ವರದಲ್ಲಿ ಸಂಚಾರ ಆರಂಭಿಸಲಾಗಿದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಇವುಗಳ ಬಳಕೆಗೆ ಚಾಲನೆ ನೀಡಿದರು.
ಇವುಗಳ ವಿಶೇಷವೆಂದರೆ ಪ್ರತೀ ಬೋಗಿಗಳು ಹಗುರಾಗಿವೆ. ಹಾಗಾಗಿ ರೈಲುಗಳು ಇಂಗಾಲವನ್ನು ಹೊರಬಿಡುವ ಪ್ರಮಾಣ ತೀರಾ ಕಡಿಮೆಯಾಗುತ್ತದೆ.
ಅರ್ಥಾತ್ ಒಂದು ಬೋಗಿಯ ಕಾರಣದಿಂದ ತನ್ನ ಜೀವಿತಾವಧಿಯಲ್ಲಿ ರೈಲೊಂದು ಹೊರಬಿಡುವ ಇಂಗಾಲದ ಪ್ರಮಾಣ 14,500 ಟನ್‌ಗಳಷ್ಟು ಕಡಿಮೆಯಾಗಲಿದೆ.
ಅಂದರೆ ಒಂದು ಬೋಗಿಯಿಂದ ಪ್ರಕೃತಿಗೆ ಇಷ್ಟು ಉಪಕಾರವಾಗುತ್ತದೆ. ಪ್ರತೀ ಬೋಗಿಯ ಭಾರ ಹಿಂದಿನ ಟ್ರೈನ್‌ಗಳಿಗೆ ಹೋಲಿಸಿದರೆ 180 ಟನ್‌ಗಳಷ್ಟು ಕಡಿಮೆಯಾಗಿದೆ. ಹಾಗಾಗಿ ಹೆಚ್ಚುವರಿ 180 ಟನ್‌ಗಳನ್ನು ಹೊರುವ ತಾಕತ್ತು ಪ್ರತೀ ಬೋಗಿಗೆ ಲಭಿಸಿದೆ.
ಸಾಂಪ್ರದಾಯಿಕ ಮಾದರಿಯ ಟ್ರೈನುಗಳಿಗೆ ಹೋಲಿಸಿದರೆ ಸವಕಳಿ ಕಡಿಮೆಯಿರುತ್ತದೆ. ನಿರ್ವಹಣಾ ವೆಚ್ಚವೂ ಕಡಿಮೆ. ವೆಲ್ಡಿಂಡ್ ಮಾಡದೇ ಬೋಗಿಗಳನ್ನು ಲಾಕ್‌ಗಳ ಮೂಲಕ ಸಿದ್ಧಪಡಿಸಿರುವುದು ಗಮನಾರ್ಹ.