1962ರಲ್ಲಿ ಸೇನೆಗೆ ಸೇರ್ಪಡೆಯಾಗಿ ಟೆಲಿಕಮ್ಯುನಿಕೇಷನ್, ಇಂಟೆಲಿಜೆನ್ಸಿ ವಿಭಾಗದಲ್ಲಿ ಸೇವೆ ಸಲ್ಲಿಸಿರುವ ಜಿ.ಟಿ ಆಳ್ವ ಅವರು 1971ರ ಬಾಂಗ್ಲಾ ಯುದ್ಧದಲ್ಲಿ ಹೆಲಿಕಾಪ್ಟರ್ ಮೇಲೆ ನಡೆದ ದಾಳಿಯಲ್ಲಿ ಪವಾಡ ಸದೃಶವಾಗಿ ಬದುಕುಳಿದವರು. ಇವರು ದ.ಕ ಜಿಲ್ಲೆಯ ನರಿಂಗಾನದವರಾಗಿದ್ದು ಮಂಗಳೂರಿನ ಲೋಹಿತ್‌ನಗರದಲ್ಲಿ ವಾಸವಾಗಿದ್ದಾರೆ.
ಸಿಎಚ್‌ಎಂ ಜಿ.ಟಿ. ಆಳ್ವ
ಬಾಂಗ್ಲಾ ಯುದ್ಧ 1971ರ ಡಿಸೆಂಬರ್‌ನಲ್ಲಿ ಔಪಚಾರಿಕವಾಗಿ ಆರಂಭವಾಗಿತ್ತು. ಆದರೆ ಅದಕ್ಕೆ ಪೂರ್ವಭಾವಿಯಾಗಿ ಸೆಪ್ಟಂಬರ್‌ನಲ್ಲಿಯೇ ನಮ್ಮ ತಯಾರಿ ನಡೆಯುತ್ತಿತ್ತು. ಪೂರ್ವ ಪಾಕಿಸ್ಥಾನದ ಗಡಿ ಬಳಿ ಇರುವ ಚಹಾ ತೋಟದಲ್ಲಿ ನಮ್ಮ ಕ್ಯಾಂಪ್ ಮಾಡಿದ್ದೆವು. ನಾನು ಪೂರ್ವ ಪಾಕಿಸ್ಥಾನದೊಳಗೆ ತೆರಳಿ ಅಲ್ಲಿ ಬಾಂಗ್ಲಾ ವಿಮೋಚನೆಗಾಗಿ ಹೋರಾಡುತ್ತಿದ್ದ ಮುಕ್ತಿವಾಹಿನಿಯವರ ಜತೆಗೆ ಇದ್ದು ಗೌಪ್ಯವಾಗಿಯೇ ಅಲ್ಲಿಂದ ಮಾಹಿತಿ ಸಂಗ್ರಹಿಸಿ ನೀಡುತ್ತಿದ್ದೆ. ಅದೆಷ್ಟೋ ಊರುಗಳಿಗೆ ತಿರುಗಾಡಿದ್ದೇವೆ. ಹಲವೆಡೆ ವಯರ್‌ಲೆಸ್ ಬಳಕೆ ಮಾಡಿದ್ದರೆ ಇನ್ನು ಕೆಲವೆಡೆ ಕೈಯಲ್ಲಿ ಯಾವುದೇ ಉಪಕರಣಗಳನ್ನು ಕೂಡ ಇಟ್ಟುಕೊಳ್ಳುವಂತಿರಲಿಲ್ಲ. ಸೈನ್ಯದ ಸಮವಸ್ತ್ರದ ಬದಲು ಸಾಮಾನ್ಯ ಉಡುಗೆಯನ್ನು ಬಳಸಿ ಗುಪ್ತಚರನಾಗಿ ಇದ್ದೆ. ಮುಕ್ತಿವಾಹಿನಿಯವರು ನನಗೆ ಅಲ್ಲಿನ ಪ್ರಮುಖ, ಆಯಕಟ್ಟಿನ ಸ್ಥಳಗಳ ಮಾಹಿತಿಯನ್ನು ನೀಡುತ್ತಿದ್ದರು. ಅದನ್ನು ಕೋಡ್ ವರ್ಡ್‌ನಲ್ಲಿ ನಮ್ಮ ಭೂಸೇನೆ, ವಾಯುಸೇನೆ ಮತ್ತು ನೌಕಾಪಡೆಯವರಿಗೆ ನೀಡುವ ಜವಾಬ್ದಾರಿ ನನ್ನದಾಗಿತ್ತು.
ಪಾಕ್ ಸೈನಿಕರ ಕಣ್ಣಿಗೆ ಬಿದ್ದಿದ್ದರೆ ಜೀವನಪರ್ಯಂತ ಜೈಲಿನಲ್ಲಿರಬೇಕಿತ್ತು. ಬಳಿಕ ಚಿತ್ತಗಾಂಗ್ ಬಳಿಯ ನಮ್ಮ ಕ್ಯಾಂಪ್ ಕೇಂದ್ರೀಕರಿಸಿಕೊಂಡಿದ್ದೆವು. ಪೂರ್ವ ಪಾಕಿಸ್ಥಾನದ 4 ಜಿಲ್ಲೆಗಳನ್ನು ಆಕ್ರಮಿಸುವ ಆದೇಶ ನಮಗೆ ನೀಡಲಾಗಿತ್ತು. ಡಿ.12ರಂದು ಆ 4 ಜಿಲ್ಲೆಗಳನ್ನು ಕೂಡ ಗೆದ್ದುಕೊಂಡೆವು. ಪಾಕ್ ಸೈನಿಕರ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡು ಅವರನ್ನು ಅಲ್ಲಲ್ಲಿ ಇದ್ದ ಶಾಲೆ, ಇತರ ಕಟ್ಟಡಗಳಲ್ಲಿ ಕೂಡಿಹಾಕಿದ್ದೆವು. ಡಿ.12ರ ತಡರಾತ್ರಿ 2 ಗಂಟೆಗೆ ನನಗೆ ಬಂದ ತುರ್ತು ಸಂದೇಶದಂತೆ ನಾನು ಹೊರಟಿದ್ದೆ.
ಹೆಲಿಕಾಪ್ಟರ್‌ನಲ್ಲಿ ವಾಯುಪಡೆಯ ಮೂವರು ಮತ್ತು ಇತರ ಇಬ್ಬರು ಸೈನಿಕರು 8 ಮೌಂಟೇನ್ ಡಿವಿಜನ್ ಕಡೆಗೆ ಹೊರಟಿದ್ದೆವು. ಹೊರಟು ಸುಮಾರು 40 ನಿಮಿಷಗಳಾದಾಗ ನಮ್ಮ ಹೆಲಿಕಾಪ್ಟರ್‌ನಲ್ಲಿ ಭಾರೀ ಸುದ್ದು ಕೇಳಿತು. ಏನಾಯಿತೆಂದು ಗೊತ್ತಾಗಿಲ್ಲ. ನಾನು ಎಲ್ಲಿಗೆ ಎಸೆಯಲ್ಪಟ್ಟಿದ್ದೆಂದೇ ಗೊತ್ತಿಲ್ಲ. ಎಷ್ಟೋ ದಿನಗಳ ಕಾಲ ಕೋಮಾದಲ್ಲಿದ್ದೆ. ಎಚ್ಚರವಾದಾಗ ಹೆಲಿಕಾಪ್ಟರ್‌ನ ಪೈಲಟ್ ಸಹಿತ ಒಟ್ಟು 3 ಮಂದಿ ಮೃತಪಟ್ಟಿದ್ದರು ಎಂಬ ಮಾಹಿತಿ ಸಿಕ್ಕಿತು. ನನ್ನ ಕೈ ಕಾಲುಗಳು ತುಂಡಾಗಿ ಮರು ಜೋಡಣೆಯಾದವು. ಮೂರೂವರೆ ತಿಂಗಳು ಆಸ್ಪತ್ರೆಯಲ್ಲಿದ್ದು ಅನಂತರ ಮನೆಗೆ ಬಂದಿದ್ದೆ. ಕೈಕಾಲುಗಳ ಸ್ವಾದೀನ ಕಳೆದುಕೊಂಡಿದ್ದರೂ ಮಾನಸಿಕವಾಗಿ ಪೂರ್ಣ ಸದೃಢನಾಗಿದ್ದರಿಂದ ಸೇನೆ ಮತ್ತೆ ನನಗೆ ಅವಕಾಶ ನೀಡಿತು.
ಈ ಹಿಂದೆ ಗುಪ್ತಚರ ಮತ್ತು ಟೆಲಿಕಮ್ಯುನಿಕೇಶನ್ ವಿಭಾಗದಲ್ಲಿ ಸಲ್ಲಿಸಿದ ಸೇವೆಗೆ ಪ್ರಶಂಸೆಯೂ ಲಭಿಸಿತು. ಗುಣಮುಖನಾದ ಮೇಲೆ ಮತ್ತೆ ಡೆಹ್ರಾಡೂನ್‌ನಲ್ಲಿ ಸೇವೆ ಸಲ್ಲಿಸಿದೆ. ಬಾಂಗ್ಲಾ ಯುದ್ಧದ ವೇಳೆ ನನಗೆ 29 ವರ್ಷ. ಈಗ 80 ವರ್ಷ. ದೇಶದ ವಿವಿಧೆಡೆ ಸೇವೆ ಸಲ್ಲಿಸಿ ಕಂಪನಿ ಹವಾಲ್ದಾರ್ ಮೇಜರ್ ಆಗಿದ್ದೆ. ವೈರ್‌ಲೆಸ್ ಆ್ಯಂಡ್ ಲೈನ್ ಆಪರೇಟಿಂಗ್, ಸಿಫರ್, ಇಂಟೆಲಿಜೆನ್ಸಿ ವಿಭಾಗದಲ್ಲಿ ಕೆಲಸ ಮಾಡಿದ್ದೆ. ಈಗಲೂ ಕೈ ಕಾಲುಗಳಲ್ಲಿ ರಾಡ್‌ಗಳಿವೆ. 1982ರಲ್ಲಿ ವೈದ್ಯಕೀಯ ಕಾರಣಗಳಿಂದ ಸ್ವಯಂ ನಿವೃತ್ತಿ ಪಡೆದೆ.