Advertisement
ವಂಡ್ಸೆ ಪ್ರಾಥಮಿಕ ಆರೋಗ್ಯ ಕೇಂದ್ರದ ಅಡಿಯಲ್ಲಿ ಕೆರಾಡಿ ಗ್ರಾಮ ಕೂಡ ಬರುತ್ತಿದ್ದು, ಇಲ್ಲಿ ಈ ಹಿಂದೆ ಯಾವುದೇ ಉಪ ಕೇಂದ್ರ ಇಲ್ಲದಿರುವುದನ್ನು ಪರಿಗಣಿಸಿ, ಕೆರಾಡಿಯ ಶಾಲೆ ಹಾಗೂ ಗ್ರಾ.ಪಂ. ಕಚೇರಿ ಸಮೀಪವೇ ಹೊಸದಾಗಿ ಕಟ್ಟಡ ನಿರ್ಮಾಣವಾಗಿದೆ.
ಕಳೆದ ವರ್ಷದ ಫೆಬ್ರವರಿಯಲ್ಲಿ ಅದರ ಕಾರ್ಯ ಮುಗಿದಿದೆ. ಬೆಂಗಳೂರು ಮೂಲದ ಕಂಪೆನಿಯೊಂದು ಇದರ ಗುತ್ತಿಗೆ ವಹಿಸಿಕೊಂಡಿದ್ದು, ಇನ್ನೂ ಆರೋಗ್ಯ ಇಲಾಖೆಗೆ ಹಸ್ತಾಂತರಿಸಿಲ್ಲ. ಜತೆಗೆ ಕೆಎಚ್‌ಎಸ್‌ಡಿಆರ್‌ಪಿಯ ಎಂಜಿನಿಯರ್ ಸರ್ಟಿಫಿಕೇಟ್ ಕೊಡದ ಕಾರಣ ಉದ್ಘಾಟನೆಗೆ ಅಡ್ಡಿಯಾಗಿದೆ. ಕೆರಾಡಿಯಲ್ಲಿ ಈ ಉಪ ಕೇಂದ್ರದ ವ್ಯಾಪ್ತಿಯಲ್ಲಿ ಒಟ್ಟು 450ಕ್ಕೂ ಹೆಚ್ಚು ಮನೆಗಳಿದ್ದು, ಸುಮಾರು 4 ಸಾವಿರದಷ್ಟು ಜನರಿದ್ದಾರೆ. ಈ ಕೇಂದ್ರ ಆದಷ್ಟು ಶೀಘ್ರ ಆರಂಭಗೊಂಡರೆ ಇಲ್ಲಿನ ಜನರ ಸ್ವಾಸ್ಥ್ಯಕಾಪಾಡುವಲ್ಲಿ ಪ್ರಯೋಜನವಾಗಲಿದೆ. ಇಲ್ಲದಿದ್ದರೆ 15 ಕಿ.ಮೀ. ದೂರದಲ್ಲಿರುವ ವಂಡ್ಸೆಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಬೇಕಾಗಿದೆ.
Related Articles
ಇದು ಉಪ ಆರೋಗ್ಯ ಕೇಂದ್ರದ ಜತೆಗೆ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ವಸತಿ ಕೇಂದ್ರವೂ ಆಗಿದೆ. ಇಲ್ಲಿ ಕಿರಿಯ ಆರೋಗ್ಯ ಸಹಾಯಕಿಯರೊಬ್ಬರು ಇದ್ದು, ಅವರು ಬೆಳಗ್ಗಿನ ಅವಧಿಯಲ್ಲಿ ಮನೆ- ಮನೆ ಭೇಟಿ ನೀಡಿದರೆ, ಮಧ್ಯಾಹ್ನ ಅನಂತರ ಇಲ್ಲಿರುವ ಕ್ಲಿನಿಕ್‌ನಲ್ಲಿರಬೇಕು. ಪ್ರತ್ಯೇಕ ಕ್ಲಿನಿಕ್ ಇದ್ದು, ಅಲ್ಲಿಗೆ ವಾರಕ್ಕೊಮ್ಮೆ ವಂಡ್ಸೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಬಂದು ತಪಾಸಣೆ ನಡೆಸುತ್ತಾರೆ. ತಿಂಗಳಿಗೊಮ್ಮೆ ಮಕ್ಕಳಿಗೆ ಚುಚ್ಚುಮದ್ದು ಲಸಿಕೆ, ಗರ್ಭಿಣಿಯರ ನೋಂದಣಿ ಮಾಡಲಾಗುತ್ತದೆ. ತುರ್ತು ಸಂದರ್ಭಗಳಿಗೆ ಬೇಕಾದ ಔಷಧಗಳ ಸಂಗ್ರಹವೂ ಇರುತ್ತದೆ.
Advertisement
ಹಸ್ತಾಂತರವಾದರೆ ಶೀಘ್ರ ಆರಂಭಕಟ್ಟಡದ ಕಾಮಗಾರಿ ಮುಗಿದರೂ ಅದನ್ನು ನಮಗೆ ಗುತ್ತಿಗೆದಾರರು ಇನ್ನೂ ಹಸ್ತಾಂತರ ಮಾಡಿಲ್ಲ. ಅದಲ್ಲದೆ ಕೆಎಚ್‌ಎಸ್‌ಡಿಆರ್‌ಪಿಯ ಎಂಜಿನಿಯರ್ ಇದು ಪೂರ್ಣಗೊಂಡಿದ್ದು, ಬಳಕೆಗೆ ಯೋಗ್ಯ ಎಂದು ಸರ್ಟಿಫಿಕೇಟ್ ಕೊಡಬೇಕಿದ್ದು, ಅದಿನ್ನು ನೀಡದ ಕಾರಣ ಉದ್ಘಾಟನೆ ವಿಳಂಬವಾಗುತ್ತಿದೆ. ಹಸ್ತಾಂತರಿಸಿದರೆ ಶೀಘ್ರ ಈ ಉಪ ಕೇಂದ್ರ ಜನರ ಸೇವೆಗೆ ತೆರೆದುಕೊಳ್ಳಲಿದೆ.
– ಡಾ| ನಾಗಭೂಷಣ ಉಡುಪ, ತಾಲೂಕು ವೈದ್ಯಾಧಿಕಾರಿ, ಕುಂದಾಪುರ