Advertisement

ಪ್ರಜಾಪ್ರಭುತ್ವ ಹೈಜಾಕ್‌ ತಡೆಗೆ ಪರ್ಯಾಯ ಶಕ್ತಿ

01:19 PM Apr 24, 2017 | Team Udayavani |

ದಾವಣಗೆರೆ: ಜಾತ್ಯತೀತ ಜನತಾದಳ, ಕಾಂಗ್ರೆಸ್‌ ಮತ್ತು ಬಿಜೆಪಿಯ ಜನ, ಸಂವಿಧಾನ ವಿರೋಧಿ, ದುಷ್ಟ ರಾಜಕಾರಣದ ವಿರುದ್ಧ ಸೂಕ್ತ ಪರ್ಯಾಯ ರಾಜಕೀಯ ವ್ಯವಸ್ಥೆ ಕಂಡುಕೊಳ್ಳಬೇಕಿದೆ ಎಂದು ಜನ ಸಂಗ್ರಾಮ ಪರಿಷತ್‌ ರಾಜ್ಯ ಗೌರವ ಅಧ್ಯಕ್ಷ ಎಸ್‌.ಆರ್‌. ಹಿರೇಮಠ್ ಪ್ರತಿಪಾದಿಸಿದ್ದಾರೆ. 

Advertisement

ಭಾನುವಾರ ನಿವೃತ್ತ ನೌಕರರ ಸಮುದಾಯ ಭವನದಲ್ಲಿ ನಡೆದ ಜನ ಪರ್ಯಾಯ ಕಟ್ಟೋಣ ಜಾಥಾ…ಸಭೆಯಲ್ಲಿ ಮಾತನಾಡಿದ ಅವರು, ಮೂರು ಪಕ್ಷಗಳು ಬಂಡವಾಳಶಾಹಿ ವ್ಯವಸ್ಥೆ ಪರ ಕೆಲಸ ಮಾಡುತ್ತವೆ. ಜನ ಮತ್ತು ಸಂವಿಧಾನ ವಿರೋಧಿ, ದುಷ್ಟ ರಾಜಕಾರಣದ ವಿರುದ್ಧ ಜನ ಸಾಮಾನ್ಯರು ಪರ್ಯಾಯ ರಾಜಕೀಯ ವ್ಯವಸ್ಥೆ ಕಂಡುಕೊಳ್ಳಬೇಕು.

ಪ್ರಜಾಪ್ರಭುತ್ವ, ಸಂವಿಧಾನದ ಹೈಜಾಕ್‌ ವಿರುದ್ಧ ಮತ್ತೂಂದು ಸ್ವಾತಂತ್ರ ಸಂಗ್ರಾಮ ನಡೆಸಬೇಕು ಎಂದು ತಿಳಿಸಿದರು. ದೇಶಕ್ಕೆ ಸ್ವಾತಂತ್ರ ಲಭಿಸಿ 70 ವರ್ಷ ನಂತವರೂ ಶೋಷಣೆ, ಅಸಮಾನತೆ ಜೀವಂತವಾಗಿವೆ. 200 ವರ್ಷಗಳ ಕಾಲ ಆಡಳಿತ ನಡೆಸಿದ ಬ್ರಿಟಿಷರಗಿಂತಲೂ ನಮ್ಮವರೇ ಕೆಟ್ಟ ಆಡಳಿತ ನೀಡಿದ್ದಾರೆ. 

ಶೇ.70ರಷ್ಟು ಜನರು ಅವಲಂಬಿಸಿರುವ ಕೃಷಿಗೆ ಈ ಕ್ಷಣಕ್ಕೂ ಸಂಕಷ್ಟ ತಪ್ಪಿಲ್ಲ. ಒಳ್ಳೆಯ ವಿದ್ಯೆ ಪಡೆದವರೂ ನಿರುದ್ಯೋಗದ ಸಮಸ್ಯೆ ಎದುರಿಸುತ್ತಿದ್ದಾರೆ. ರೈತರ ಭೂಮಿಯನ್ನು ಬಲವಂತವಾಗಿ ಕಿತ್ತುಕೊಂಡು ಬಹು ರಾಷ್ಟ್ರೀಯ ಕಂಪನಿಗಳಿಗೆ ಅತಿ ಕಡಿಮೆ ಬೆಲೆಗೆ ನೀಡುವ ಮೂಲಕ ರೈತರ ದುಡಿಮೆಯನ್ನು ಕಸಿದುಕೊಳ್ಳಲಾಗುತ್ತಿದೆ.

ಮತ್ತೆ ಊಳುವವನೆ ಒಡೆಯ ಎಂಬ ಕಾನೂನು ಜಾರಿಗೆ ಬರುವ ಅಗತ್ಯತೆ ಇದೆ ಎಂದು ತಿಳಿಸಿದರು.  ಭರವಸೆಯೊಂದಿಗೆ ಅಧಿಕಾರಕ್ಕೆ ಬಂದಿರುವ ನರೇಂದ್ರ ಮೋದಿ ಅವರು ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವ ಮಾತುಗಳಾಡಿದ್ದರು. ಈವರೆಗೆ 2 ಲಕ್ಷ ಹುದ್ದೆಗಳನ್ನೂ ಸೃಷ್ಟಿಸಿಲ್ಲ.  10-15 ಲಕ್ಷ ಕೋಟಿ ಬಂಡವಾಳ ಹೂಡಿಕೆ ಮಾಡಿರುವ ಕಡೆಯಲ್ಲೂ ಯುವ ಜನಾಂಗಕ್ಕೆ ಉದ್ಯೋಗವಕಾಶ ಇಲ್ಲ. 

Advertisement

ಅಧಿಕಾರಕ್ಕೆ ಬರಲು ನೆರವಾಗಿರುವ ಬಂಡವಾಳಶಾಹಿಗಳ ಸೇವೆಗಾಗಿ ಕೇಂದ್ರ ಸರ್ಕಾರ ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಸುಗ್ರೀವಾಜ್ಞೆ ತರುವ ಮೂಲಕ ಸಂವಿಧಾನಕ್ಕೆ ತದ್ವಿರುದ್ಧವಾಗಿ ನಡೆದುಕೊಂಡಿದೆ ಎಂದು ದೂರಿದರು. ಈಗ ಭ್ರಷ್ಟಾಚಾರ ಎನ್ನುವುದು ಮುಗಿಲು ಮುಟ್ಟಿದೆ. ಶಿಕ್ಷಣ,ಆರೋಗ್ಯ ಕ್ಷೇತ್ರವೂ ವ್ಯಾಪಾರಿ ಕ್ಷೇತ್ರಗಳಾಗಿವೆ.

ಜನ ಸೇವೆ ಮಾಡಬೇಕಾದವರು ರಾಜಕೀಯವನ್ನು ವ್ಯಾಪಾರವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಇಂತಹ ದುಷ್ಟ ರಾಜಕಾರಣ, ವ್ಯವಸ್ಥೆಯ ವಿರುದ್ಧ ಜನರೇ ಸೂಕ್ತ ಪರ್ಯಾಯ ರಾಜಕೀಯ ವ್ಯವಸ್ಥೆ, ವೇದಿಕೆ ಕಂಡುಕೊಳ್ಳಬೇಕು. ಜನರಲ್ಲಿ ಜಾಗೃತಿ ಮೂಡಿಸುವ ಪ್ರಮುಖ ಉದ್ದೇಶದಿಂದ ಮಂಡ್ಯದಿಂದ ರಾಯಚೂರಿನವರೆಗೆ ಜನ ಪರ್ಯಾಯ ಕಟ್ಟೋಣ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. 

ಸಾಹಿತಿ ಡಾ| ಕಾಳೇಗೌಡ ನಾಗಾವರ ಮಾತನಾಡಿ, ಸಕಲರ ಹಿತ ಬಯಸುವರು ಇತಿಹಾಸದಲ್ಲಿ ಉಳಿಯುವರು ಎನ್ನುವುದಕ್ಕೆ ಬುದ್ಧ, ಬಸವಣ್ಣ, ಅಂಬೇಡ್ಕರ್‌ ಉದಾಹರಣೆಯಾಗಿದ್ದಾರೆ. ಇಂದಿನ ರಾಜಕಾರಣ, ವ್ಯವಸ್ಥೆಯ ವಿರುದ್ಧ ಮತ್ತೂಮ್ಮೆ ಪ್ರಾಮಾಣಿಕ, ಜನಪರ ಚಳವಳಿ ಕಟ್ಟುವ ಅಗತ್ಯತೆ ಇದೆ. ವ್ಯಾಪಾರಿ ಮನೋಭಾವದ ಪ್ರತೀಕವಾಗಿರುವ ಕೇಂದ್ರ, ರಾಜ್ಯ ಸರ್ಕಾರ ಅನ್ನದಾತರಿಗೆ ಏನೂ ಮಾಡುತ್ತಿಲ್ಲ.

ಜ್ವಲಂತ ಸಮಸ್ಯೆಗೆ ಸೂಕ್ತ ಪರಿಹಾರ, ಪರ್ಯಾಯ ವ್ಯವಸ್ಥೆ ಕಂಡುಕೊಳ್ಳಲು ಪ್ರಾರಂಭಿಸಿರುವ ಜಾಥಾ ಯಶಸ್ವಿಯಾಗಲಿಕ್ಕೆ ಜನರಭಾಗವಹಿಸುವಿಕೆ ಮುಖ್ಯ. ಈ ಸತ್ಯದ ಹೋರಾಟಕ್ಕೆ ಜಯ ಸಿಗಲಿದೆ ಎಂಬ ಆಶಯ ವ್ಯಕ್ತಪಡಿಸಿದರು. ರೈತ ಸಂಘದ ರಾಜ್ಯ ಅಧ್ಯಕ್ಷ ಕೆ.ಟಿ. ಗಂಗಾಧರ್‌ ಅಧ್ಯಕ್ಷತೆ ವಹಿಸಿದ್ದರು.

ಶಿವನಕೆರೆ ಬಸವಲಿಂಗಪ್ಪ, ಬಲ್ಲೂರು ರವಿಕುಮಾರ್‌, ಮಂಜುನಾಥ್‌ ಕುಕ್ಕುವಾಡ, ಹೆಗ್ಗೆರೆ ರಂಗಪ್ಪ, ಸತೀಶ್‌ ಅರವಿಂದ್‌, ಗುರುಮೂರ್ತಿ, ಜಬೀನಾಖಾನಂ, ಜ್ಯೋತಿ ಕುಕ್ಕುವಾಡ, ಮೌಲಾನಾಯ್ಕ, ವಾಸನದ ಓಂಕಾರಪ್ಪ, ಆದಿಲ್‌ಖಾನ್‌, ಚಂದ್ರಶೇಖರ ಮೇಟಿ ಇತರರು ಇದ್ದರು. ಹುರುಗುಲವಾಡಿ ರಾಮಯ್ಯ ಜಾಗೃತಿ ಗೀತೆ ಹಾಡಿದರು. ವೇದಿಕೆ ಕಾರ್ಯಕ್ರಮದ ಮುನ್ನ ನಗರದ ವಿವಿಧ ಭಾಗದಲ್ಲಿ ಜಾಥಾ ನಡೆಯಿತು. 

Advertisement

Udayavani is now on Telegram. Click here to join our channel and stay updated with the latest news.

Next