ಹೊಸದುರ್ಗ: ತಾಲೂಕಿನ ಕಸಬಾ ಹೋಬಳಿಯ ಮಾವಿನಕಟ್ಟೆ ಹಾಗೂ ಕಬ್ಬಳ ಗ್ರಾಮದಲ್ಲಿ ಅಕ್ಷರ ಪ್ರತಿಷ್ಠಾನ ಹಾಗೂ ಗ್ರಾಮದ ಜನರ ಸಹಭಾಗಿತ್ವದಲ್ಲಿ ಪರ್ಯಾಯ ಗಣಿತ ಕಲಿಕಾ ಕಾರ್ಯಕ್ರಮ ನಡೆಯಿತು. ಅಕ್ಷರ ಪ್ರತಿಷ್ಠಾನದ ಜಿಲ್ಲಾ ಸಂಯೋಜಕ ರವಿಕುಮಾರ್ ಮಾತನಾಡಿ, ಕೋವಿಡ್-19 ಸಂದರ್ಭದಲ್ಲಿ ಗ್ರಾಮೀಣ ಭಾಗದ ಮಕ್ಕಳ ಕಲಿಕೆಗೆ ಅಡ್ಡಿಯಾಗಿರುವುದು ಕಂಡು ಬರುತ್ತಿದೆ.
ಸಮುದಾಯದಲ್ಲಿ ಮುಂದಿನ 100 ದಿನದ ಗಣಿತ ಕಲಿಕಾ ಕಾರ್ಯಕ್ರಮದ ಮೂಲಕ ಮಕ್ಕಳ ಮನೆಯಲ್ಲಿಯೇ ಶೈಕ್ಷಣಿಕ ಗುಣಮಟ್ಟವನ್ನು ಉತ್ತಮಪಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ:
ಕೋಟೆ ನಾಡಿನಲ್ಲಿವೆ 9 ಖಾಸಗಿ ಗೋಶಾಲೆ
ದೇವಿಗೆರೆ ಗ್ರಾಮ ಪಂಚಾಯಿತಿ ಮಟ್ಟದ ಶೈಕ್ಷಣಿಕ ತಂಡದ ನಾಯಕರಾದ ಮಂಜುನಾಥ ಹಾಗೂ ನಾಗರಾಜ್ ಮಾತನಾಡಿ, ಇಲ್ಲಿಯವರೆಗೆ ಮಕ್ಕಳಿಗೆ ಶಾಲೆ ಇಲ್ಲದಿರುವುದು ಅವರ ಎಲ್ಲಾ ವಿಷಯಗಳ ಕಲಿಕೆಗೆ ಕೊರತೆಯಾಗಿದೆ. ನಾವು ಅಕ್ಷರ ಫೌಂಡೇಶನ್ ಸಿದ್ಧಪಡಿಸಿರುವ ಬಿಲ್ಡಿಂಗ್ ಬ್ಲಾಕ್ ಆ್ಯಪ್ ಮತ್ತು ಪ್ರೇರಣಾ ಕಾರ್ಯಕ್ರಮದ ಸುವೇಗ ಪುಸ್ತಕ ಬಳಕೆಯ ಜೊತೆಗೆ ಮಕ್ಕಳ ಕಲಿಕೆಗೆ ಪೂರಕವಾದ ಬೋಧನೋಪಕರಣಗಳನ್ನು ಬಳಕೆ ಮಾಡಿಕೊಂಡು ಮಕ್ಕಳು ಮನೆಯಲ್ಲಿಯೇ ಕಲಿಯುವಂತೆ ಪ್ರೇರಣೆ ನೀಡಿದ್ದೇವೆ. ಇನ್ನೂ ಮುಂದೆಯೂ ಎಲ್ಲಾ ಶೈಕ್ಷಣಿಕ ಭಾಗೀದಾರರು, ಶಿಕ್ಷಣಾಸಕ್ತರು, ಸ್ವಯಂಸೇವಕರು, ಪೋಷಕರು, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರ ನೆರವಿನಿಂದ ಮಕ್ಕಳ ಕಲಿಕೆಯನ್ನು ಉತ್ತಮ ಪಡಿಸುವುದಾಗಿ ತಿಳಿಸಿದರು.