ವಿಜಯಪುರ: ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರದಿಂದ ರಾಜ್ಯದ ಅರಣ್ಯ ಪ್ರದೇಶದಲ್ಲಿ ಹೆದ್ದಾರಿ ಅಭಿವೃದ್ಧಿ ಕೈಗೊಳ್ಳಲಾಗಿದೆ. ಸದರಿ ಹೆದ್ದಾರಿ ನಿರ್ಮಾಣದಿಂದ ಹಾನಿ ಹಾಗೂ ಕೊರತೆಯ ಅರಣ್ಯ ಜಮೀನಿಗೆ ಬದಲಾಗಿ ವಿಜಯಪುರ ಜಿಲ್ಲೆಯಲ್ಲಿ ಅರಣ್ಯ ಇಲಾಖೆಗೆ ಕಂದಾಯ ಇಲಾಖೆ ಜಮೀನು ಹಸ್ತಾಂತರಿಸಲು ಉದ್ದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭೂತನಾಳ ಮತ್ತು ಬಾಬಾನಗರ ಬಳಿ 200 ಹೆಕ್ಚರ್ ಪ್ರದೇಶವನ್ನು ಗುರುತಿಸಲು ಹಾಗೂ ಈ ಪ್ರದೇಶದಲ್ಲಿ ಅರಣ್ಯ ಬೆಳೆಸುವ ಕುರಿತು ಸಮಗ್ರ ಯೋಜನೆ ರೂಪಿಸುವಂತೆ ವಿಜಯಪುರ ಜಿಲ್ಲಾ ಉಸ್ತುವಾರಿ ಹೊಂದಿರುವ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಭಾನುವಾರ ನಗರದ ಭೂತನಾಳ ಕೆರೆಗೆ ನೀರು ತುಂಬುವ ಯೋಜನೆ ಪರಶೀಲನೆ ಬಳಿಕ 1910 ಖ್ಯಾತ ಸರ್ ಎಂ. ವಿಶ್ವೇಶ್ವರಯ್ಯ ಅವರ ತಾಂತ್ರಿಕ ಮಾರ್ಗದರ್ಶನದಲ್ಲಿ ನಿರ್ಮಾಣಗೊಂಡಿರುವ ಭೂತನಾಳ ಕೆರೆ ಪರಿಸರದಲ್ಲಿನ ನವೀಕೃತ ಪ್ರವಾಸಿ ಬಂಗಲೆಯಲ್ಲಿ ಅರಣ್ಯ, ಕಂದಾಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಈ ಸೂಚನೆ ನೀಡಿದರು.
ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರದಿಂದ ಹೆದ್ದಾರಿ ನಿರ್ಮಾಣದಿಂದ ಹಾನಿ ಹಾಗೂ ಕೊರತೆಯಾಗುವ ಅರಣ್ಯಕ್ಕೆ ಬದಲಾಗಿ ಪರಿಹಾರಾತ್ಮಕವಾಗಿ ಅರಣ್ಯೀಕರಣಕ್ಕಾಗಿ ಮೀಸಲಿಟ್ಟಿರುವ ಅರಣ್ಯ ಅಭಿವೃದ್ಧಿ ಕಾರ್ಯಕ್ಕಾಗಿ ಭೂತನಾಳ, ತಿಕೋಟಾ ತಾಲೂಕಿನ ಬಾಬಾನಗರ ಬಳಿ ಜಮೀನಿನಲ್ಲಿ ಅರಣ್ಯ ಅಭಿವೃದ್ಧಿ ಕೈಗೊಳ್ಳುವಂತೆ ಸೂಚಿಸಿದರು.
ಪರಿಹಾರಾತ್ಮಕ ಭೂಮಿಯಲ್ಲಿ ಅರಣ್ಯ ಸೃಷ್ಟಿಸುವುದರಿಂದ ವಿಜಯಪುರ ಜಿಲ್ಲೆಯ ಅರಣ್ಯ ಪ್ರದೇಶ ಹೆಚ್ಚಲಿದೆ. ಜೊತೆಗೆ ಸರಕಾರಿ ಜಮೀನು ಅತಿಕ್ರಮಣ ತಪ್ಪಲಿದೆ ಎಂದರು.
ಕಾರಣ ಅಧಿಕಾರಿಗಳು ಈ ವಿಷಯದಲ್ಲಿ ವಿಳಂಬ ಮಾಡದೇ ಸಮಗ್ರ ಯೋಜನೆಯ ಪ್ರಸ್ತಾವನೆ ಸಲ್ಲಿಸುವಂತೆ ನಿರ್ದೇಶನ ನೀಡಿದರು.
ಇದೇ ವೇಳೆ ಸಿದ್ಧೇಶ್ವರ ಶ್ರೀಗಳ ಹೆಸರಿನಲ್ಲಿ 1000 ಎಕರೆ ಪ್ರದೇಶದಲ್ಲಿ ಅರಣ್ಯ ನಿರ್ಮಿಸಿ, ಮಕ್ಕಳಿಗೆ ಪರಿಸರದ ಬಗ್ಗೆ ಅರಿವು ಮೂಡಿಸಲು ಧ್ಯಾನ-ವಿಜ್ಞಾನ ಕೇಂದ್ರ, ತಾರಾಲಯ ಸ್ಥಾಪಿಸಲು ಸ್ಥಳ ಗುರುತಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ವಿಜಯಪುರ ನಗರದ ಆಶ್ರಮ ರಸ್ತೆಯಲ್ಲಿರುವ ಕಲ್ಲಿನ ಖಣಿ ಅಭಿವೃದ್ಧಿ ಪಡಿಸಿ, ಸಾರ್ವಜನಿಕ ಉದ್ದೇಶಗಳಿಗೆ ಬಳಸುವ ಕುರಿತು ಚರ್ಚೆ ನಡೆಸಿದರು.
ಈ ಸಂದರ್ಭಸಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಎಸಿಎಫ್ ಭಾಗ್ಯವಂತ ಮಸೂದಿ, ಆರ್. ಎಫ್. ಓ ಸಂತೋಷ ಅಜೂರ, ಸಚಿವರ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಹಾಂತೇಶ ಬಿರಾದಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.