Advertisement

ಪರ್ಯಾಯ “ಕಲ್ಯಾಣ ಪರ್ವ’ಕ್ಕೆ ಅವಕಾಶ ಬೇಡ

05:56 PM Sep 17, 2022 | Team Udayavani |

ಬೀದರ: ಬಸವಕಲ್ಯಾಣದ ಬಸವ ಮಹಾಮನೆ ಆವರಣದಲ್ಲಿ ಅ.1 ಮತ್ತು 2ರಂದು ಚೆನ್ನಬಸವಾನಂದ ಸ್ವಾಮೀಜಿ ಹಾಗೂ ಅವರ ಹಿಂಬಾಲಕರಿಗೆ ಪರ್ಯಾಯ ಕಲ್ಯಾಣ ಪರ್ವ ನಡೆಸಲು ಅವಕಾಶ ಕೊಡಬಾರದು ಎಂದು ಬಸವ ಪರ ಸಂಘಟನೆಗಳ ಪದಾಧಿಕಾರಿಗಳು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.

Advertisement

ನಗರದಲ್ಲಿ ನಿಯೋಗದಲ್ಲಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರನ್ನು ಭೇಟಿ ಮಾಡಿ ಈ ಕುರಿತು ಮನವಿ ಸಲ್ಲಿಸಿದರು. ಬಸವ ಧರ್ಮ ಪೀಠಾಧ್ಯಕ್ಷರ ನೇತೃತ್ವದಲ್ಲಿ 20 ವರ್ಷಗಳಿಂದ ಬಸವಕಲ್ಯಾಣದಲ್ಲಿ ಮೂರು ದಿನಗಳ ಕಲ್ಯಾಣ ಪರ್ವ ಸಂಘಟಿಸುತ್ತ ಬರಲಾಗಿದೆ. ವಿವಿಧ ರಾಜ್ಯಗಳ ಸಹಸ್ರಾರು ಬಸವ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಪೀಠವು ಈಗಾಗಲೇ ಅ.8, 9 ಮತ್ತು 10ರಂದು ಈ ವರ್ಷದ ಕಲ್ಯಾಣ ಪರ್ವ ನಡೆಸುವುದಾಗಿ ಘೋಷಿಸಿದೆ. ಆದರೆ, ಚೆನ್ನಬಸವಾನಂದ ಸ್ವಾಮೀಜಿ ಅ.1 ಮತ್ತು 2ರಂದು ಬಸವ ಮಹಾಮನೆಯಲ್ಲೇ ಪರ್ಯಾಯ ಕಲ್ಯಾಣ ಪರ್ವ ಹಮ್ಮಿಕೊಳ್ಳುವುದಾಗಿ ಹೇಳಿಕೆ ಕೊಟ್ಟು, ಬಸವ ಭಕ್ತರಲ್ಲಿ ಗೊಂದಲ ಸೃಷ್ಟಿಸಿದ್ದಾರೆ ಎಂದು ದೂರಿದರು.

ಬಸವ ಧರ್ಮ ಪೀಠದ ಹಿಂದಿನ ಪೀಠಾಧ್ಯಕ್ಷೆ ಜಗದ್ಗುರು ಮಾತೆ ಮಹಾದೇವಿ ಅವರು ಬಸವಣ್ಣನವರ ವಚನಗಳಲ್ಲಿ ಕೂಡಲಸಂಗಮ ದೇವ ವಚನಾಂಕಿತದ ಬದಲು ಲಿಂಗದೇವ ಬಳಸಿ ಬಸವ ವಚನ ದೀಪ್ತಿ ಪುಸ್ತಕ ಪ್ರಕಟಿಸಿದ್ದರು. ಸರ್ಕಾರ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಂಡಾಗ ನ್ಯಾಯಾಲಯದ ಮೊರೆ ಹೋಗಿದ್ದರು. ಸುಪ್ರೀಂಕೋರ್ಟ್‌ ರಾಜ್ಯ ಸರ್ಕಾರದ ಕ್ರಮ ಎತ್ತಿ ಹಿಡಿದಿತ್ತು. ಬಳಿಕ ಮಾತೆ ಮಹಾದೇವಿ ಅವರು ಸ್ವತಃ ಕೋರ್ಟ್‌ ತೀರ್ಪಿಗೆ ಬದ್ಧಳಾಗಿರುತ್ತೇನೆ ಎಂದು ಬಹಿರಂಗ ಸಭೆಯಲ್ಲಿ ಘೋಷಿಸಿದ್ದರು ಎಂದು ಹೇಳಿದರು.

ಯಾವುದೇ ಕಾರಣಕ್ಕೂ ಪರ್ಯಾಯ ಕಲ್ಯಾಣ ಪರ್ವಕ್ಕೆ ಅವಕಾಶ ಕೊಡುವುದಿಲ್ಲ. ಜಿಲ್ಲಾ ಆಡಳಿತ ಪರ್ಯಾಯ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದು. ಬಸವ ಮಹಾಮನೆಯಲ್ಲಿ ಚೆನ್ನಬಸವಾನಂದ ಸ್ವಾಮೀಜಿ ಮತ್ತು ಅವರ ಹಿಂಬಾಲಕರ ಅಕ್ರಮ ಪ್ರವೇಶ ತಡೆಯಬೇಕು. ಈಗಾಗಲೇ ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಡಾ| ಗಂಗಾದೇವಿ ಅವರ ನೇತೃತ್ವದ ಸಭೆಯಲ್ಲಿ ಘೋಷಣೆ ಮಾಡಲಾದ ಅ.8, 9 ಮತ್ತು 10ರಂದೇ ಕಲ್ಯಾಣ ಪರ್ವ ಸುಗಮವಾಗಿ ನಡೆಸಲು ಅನುವು ಮಾಡಿಕೊಡಬೇಕು ಒತ್ತಾಯಿಸಿದರು.

ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ, ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ ಗಂದಗೆ, ಜಿಲ್ಲಾಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ, ಭಾರತೀಯ ಬಸವ ಬಳಗದ ಜಿಲ್ಲಾ ಘಟಕದ ಅಧ್ಯಕ್ಷ ಬಾಬುವಾಲಿ, ಜಿಲ್ಲಾ ಲಿಂಗಾಯತ ಸಮಾಜದ ಅಧ್ಯಕ್ಷ ಕುಶಾಲರಾವ್‌ ಪಾಟೀಲ ಖಾಜಾಪುರ, ಪ್ರಮುಖರಾದ ಸಂಜುಕುಮಾರ ಪಾಟೀಲ, ಶಂಕರೆಪ್ಪ ಹೊನ್ನಾ, ಬಸವರಾಜ ಪಾಟೀಲ ಹಾರೂರಗೇರಿ, ಶರಣಪ್ಪ ನಿಯೋಗದಲ್ಲಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next