Advertisement

“ನಿರಾಶ್ರಿತರ ಕೇಂದ್ರಕ್ಕೆ ಪರ್ಯಾಯ ನಿವೇಶನ’

12:32 AM Jul 21, 2019 | Team Udayavani |

ಮಹಾನಗರ: ನಗರದ ಪಚ್ಚನಾಡಿಯ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ವಿಶಾಲವಾದ ಬೇರೆ ಜಮೀನು ಮಂಜೂರು ಮಾಡಲು ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಅವರು ಸೂಚಿಸಿದ್ದಾರೆ.

Advertisement

ಅವರು ಶನಿವಾರ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಬಳಿಕ ಮಂಗಳೂರು ತಹಶೀಲ್ದಾರ್‌ಗೆ ಈ ಸೂಚನೆ ನೀಡಿದರು.

ಪ್ರಸಕ್ತ ನಿರಾಶ್ರಿತರ ಪರಿಹಾರ ಕೇಂದ್ರವು ಎರಡು ಎಕ್ರೆ ಜಾಗದಲ್ಲಿದ್ದು, ಸುಮಾರು 150ಕ್ಕೂ ಅಧಿಕ ಮಂದಿ ನಿರಾಶ್ರಿತರು ಇಲ್ಲಿ ವಾಸ್ತವ್ಯದಲ್ಲಿದ್ದಾರೆ. ನಿರಾಶ್ರಿತರಿಗೆ ವಾಸ್ತವ್ಯ ತಾಣವಲ್ಲದೇ, ಅವರಿಗೆ ಉಳಿದ ಸಮಯದಲ್ಲಿ ಕೃಷಿ, ತೋಟಗಾರಿಕೆ, ಗುಡಿ ಕೈಗಾರಿಕೆ ಸಹಿತ ವೃತ್ತಿ ಮಾಡಲು ವಿಶಾಲ ಜಮೀನು ಅಗತ್ಯವಿದೆ. ಈ ನಿಟ್ಟಿನಲ್ಲಿ ಮುಂದಿನ 15 ದಿನಗಳೊಳಗೆ 10-15 ಎಕ್ರೆ ಜಮೀನು ಮಂಜೂರು ಮಾಡಲು ಅವರು ತಿಳಿಸಿದರು.

ನಿರಾಶ್ರಿತ ಸೌಲಭ್ಯ ಒದಗಿಸುವುದು ಕರ್ತವ್ಯ
ಯಾವುದೋ ಕಾರಣದಿಂದ ಭಿಕ್ಷಾಟನೆ ಯಲ್ಲಿ ತೊಡಗಿದವರನ್ನು, ಯಾವುದೇ ಆಶ್ರಯವಿಲ್ಲದವರನ್ನು ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿಡಲಾಗಿದ್ದು, ಇವರಿಗೆ ಘನತೆಯಿಂದ ಜೀವಿಸಲು ಎಲ್ಲ ರೀತಿಯ ಸೌಲಭ್ಯ ಒದಗಿಸಿಕೊಡಬೇಕಾದುದು ನಮ್ಮ ಕರ್ತವ್ಯವಾಗಿದೆ ಎಂದರು.

ಲೋಕಾಯುಕ್ತ ನ್ಯಾಯಮೂರ್ತಿಗಳು ಪರಿಹಾರ ಕೇಂದ್ರದ ಎಲ್ಲ ಕಟ್ಟಡಗಳನ್ನು, ಅಡುಗೆ ಕೋಣೆ, ಶೌಚಾಲಯ, ಕೈತೋಟವನ್ನು ವೀಕ್ಷಿಸಿದರು. ಕೇಂದ್ರದ ನಿವಾಸಿಗಳೊಂದಿಗೆ ಸಮಾಲೋಚನೆ ನಡೆಸಿ, ಅವರ ಅಹವಾಲುಗಳನ್ನು ಆಲಿಸಿದರು.

Advertisement

ತಹಶೀಲ್ದಾರ್‌ ಗುರುಪ್ರಸಾದ್‌, ಲೋಕಾ ಯುಕ್ತ ಇನ್‌ಸ್ಪೆಕ್ಟರ್‌ ಭಾರತೀ, ಕಂದಾಯ ನಿರೀಕ್ಷಕ ಆಸೀಫ್‌ ಉಪಸ್ಥಿತರಿದ್ದರು.

ದುಡಿಮೆಗೆ ವೇತನ; ಪ್ರಸ್ತಾವ
ರಾಜ್ಯದಲ್ಲಿ 11 ನಿರಾಶ್ರಿತರ ಕೇಂದ್ರ ಗಳಿದ್ದು, ಈ ಪೈಕಿ ಬೆಂಗಳೂರು ಕೇಂದ್ರ ಉತ್ತಮ ಗುಣಮಟ್ಟದಲ್ಲಿದೆ. ಕೇಂದ್ರ ಕಾರಾಗೃಹಗಳಲ್ಲಿರುವ ಶಿಕ್ಷೆಗೊಳಗಾಗದ ಅಪರಾಧಿಗಳು, ಕಾರಾಗೃಹದಲ್ಲಿ ದುಡಿಮೆ ಮಾಡಿದರೆ ಪ್ರತೀ ದಿನ 175 ರೂ. ಮೊತ್ತ ಸರಕಾರದಿಂದ ವೇತನ ದೊರಕುತ್ತದೆ. ಇದೇ ಮಾದರಿಯಲ್ಲಿ ನಿರಾಶ್ರಿತರ ಕೇಂದ್ರಗಳಲ್ಲಿರುವವರಿಗೂ ಅವರ ದುಡಿಮೆಗೆ ವೇತನ ನೀಡುವ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸುವುದಾಗಿ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಅವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next