Advertisement

ಚನ್ನಮ್ಮ ವಿವಿಗೆ ಆದಷ್ಟು ಬೇಗ ಪರ್ಯಾಯ ಜಾಗ: ಅಶ್ವತ್ಥನಾರಾಯಣ

08:52 PM Jun 08, 2020 | Sriram |

ಬೆಂಗಳೂರು: ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಹಿರೇಬಾಗೇವಾಡಿ ಮತ್ತು ಹಾಲಗಿಮರಡಿ ಗ್ರಾಮಗಳಲ್ಲಿ ಒಟ್ಟು 127 ಎಕರೆ ಸರ್ಕಾರಿ ಜಮೀನನ್ನು ಗುರುತಿಸಿದ್ದು, ಇದರ ಹಸ್ತಾಂತರ ಪ್ರಕ್ರಿಯೆಗೆ ಆದಷ್ಟು ಬೇಗ ಚಾಲನೆ ನೀಡುವಂತೆ ಉನ್ನತ ಶಿಕ್ಷಣ ಇಲಾಖೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಸೋಮವಾರ ಇಲ್ಲಿ ಕಂದಾಯ ಅಧಿಕಾರಿಗಳಿಗೆ ಸೂಚಿಸಿದರು.

Advertisement

ವಿಶ್ವವಿದ್ಯಾಲಯದ ಹಾಲಿ ಕೇಂದ್ರವು ಸಂರಕ್ಷಿತ ಅರಣ್ಯ ಪ್ರದೇಶದಲ್ಲಿದ್ದು, ಅದು ಇನ್ನೂ ವಿಶ್ವವಿದ್ಯಾಲಯದ ಸುಪರ್ದಿಗೆ ವರ್ಗಾವಣೆ ಆಗಿಲ್ಲ. ಹೀಗಾಗಿ ಪರ್ಯಾಯ ಜಾಗದ ಕುರಿತು ಚರ್ಚಿಸಲು ಇಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸಿದರು.

ಅರಣ್ಯ ಭೂಮಿಗೆ ಪರ್ಯಾಯವಾಗಿ ಜಾಗ ಹುಡುಕಾಡಿದಾಗ ಸುವರ್ಣ ವಿಧಾನಸೌಧದ ಸಮೀಪದ ಹಿರೇಬಾಗೇವಾಡಿ ಮತ್ತು ಹಾಲಗಿಮರಡಿ ಗ್ರಾಮಗಳಲ್ಲಿ ಸರ್ಕಾರಿ ಜಮೀನು ಇರುವುದು ಗೊತ್ತಾಗಿದೆ. ಆದರೆ, ಸದರಿ ಜಮೀನಿನ ಪಹಣಿಯಲ್ಲಿ ಮಿಲಿಟರಿಗೆ ಸೇರಿದೆ ಎಂದು ಉಲ್ಲೇಖಿಸಲಾಗಿದೆ. ಅದರ ವಾಸ್ತವ ಸ್ಥಿತಿ ಏನು ಎಂಬುದರ ಬಗ್ಗೆ ವರದಿ ನೀಡುವಂತೆ ಉಪ ಮುಖ್ಯಮಂತ್ರಿಯವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಈ ಸಂಬಂಧ ಸೇನಾಧಿಕಾರಿಗಳಿಗೂ ಪತ್ರ ಬರೆದು, ಭೂಮಿಯ ದಾಖಲೆಗಳನ್ನು ನೀಡುವಂತೆ ಕೇಳಲಾಗಿದ್ದು, ಅವರ ಬಳಿ ಯಾವ ದಾಖಲೆಯೂ ಇಲ್ಲ ಎನ್ನುವ ಉತ್ತರ ಬಂದಿದೆ. ಇದರ ನಡುವೆ ಸೇನಾಧಿಕಾರಿಗಳು ಮರು ಪತ್ರ ಬರೆದು, ಕಂದಾಯ ಇಲಾಖೆಯಲ್ಲಿ ಏನಾದರೆ ದಾಖಲೆ ಇದ್ದರೆ ಕೊಡಿ ಎನ್ನುವ ಮನವಿ ಮಾಡಿದ್ದಾರೆ.

ಆದಷ್ಟು ಬೇಗ ಈ ಗೊಂದಲ ಬಗೆಹರಿಸಿಕೊಂಡು ಜಮೀನಿನ ವಾಸ್ತವ ಸ್ಥಿತಿಗತಿಯನ್ನು ತಿಳಿಸಬೇಕು ಎನ್ನುವ ಸೂಚನೆಯನ್ನು ಜಿಲ್ಲಾಧಿಕಾರಿಗಳಿಗೆ ಉಪ ಮುಖ್ಯಮಂತ್ರಿ ನೀಡಿದರು. ಬಳಿಕ ಜಮೀನನ್ನು ಸಚಿವ ಸಂಪುಟದ ಒಪ್ಪಿಗೆ ಮೇಲೆ ಇಲಾಖೆಗೆ ಪಡೆದು, ವಿಶ್ವವಿದ್ಯಾಲಯವನ್ನು ಉತ್ಕೃಷ್ಟ ಮಟ್ಟದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಅವರು ತಿಳಿಸಿದರು.

Advertisement

ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣರೆಡ್ಡಿ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್‌.ಮಂಜುನಾಥ ಪ್ರಸಾದ್‌, ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ರಾಮಚಂದ್ರೇಗೌಡ, ಬೆಳಗಾವಿ ಜಿಲ್ಲಾಧಿಕಾರಿ ಎಸ್‌.ಬಿ.ಬೊಮ್ಮನಹಳ್ಳಿ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಸಂಗೊಳ್ಳಿ ರಾಯಣ್ಣ ಕಾಲೇಜು ಅಭಿವೃದ್ಧಿಗೆ ಒತ್ತು
ಬೆಳಗಾವಿಯ ಸಂಗೊಳ್ಳಿ ರಾಯಣ್ಣ ಪದವಿ ಕಾಲೇಜನ್ನು ಮಾದರಿ ಕಾಲೇಜಾಗಿ ಅಭಿವೃದ್ಧಿಪಡಿಸಬೇಕು. ಸದ್ಯ 4 ಎಕರೆಯಲ್ಲಿ ಕಾಲೇಜು ಇದ್ದು, ಅದರ ಪಕ್ಕದ ಇನ್ನೂ ಎರಡು ಎಕರೆ ಜಾಗ ಪಡೆದು ಅಭಿವೃದ್ಧಿಪಡಿಸುವಂತೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ಕುಲಪತಿಯವರಿಗೆ ಸೂಚಿಸಿದರು.

ವಿಶ್ವವಿದ್ಯಾಲಯದ ವಿಭಾಗಗಳು ನಗರದಿಂದ ಹೊರಗೆ ಇದ್ದು, ಅದರ ಬದಲು ನಗರದಲ್ಲೂ ಕೆಲವು ವಿಭಾಗಗಳು ಕಾರ್ಯನಿರ್ವಹಿಸುವುದರಿಂದ ವಿದ್ಯಾರ್ಥಿಗಳಿಗೆ ಅನುಕೂಲ ಆಗುತ್ತದೆ. ಇದರಿಂದ ಖಾಸಗಿ ಶಿಕ್ಷಣ ಸಂಸ್ಥೆಗಳ ಜತೆಗೂ ಪೈಪೋಟಿ ನೀಡಿ, ಗುಣಮಟ್ಟದ ಶಿಕ್ಷಣ ನೀಡಬಹುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next