Advertisement

ಗ್ರಾಮೀಣ ಸೊಗಡು ಹರಡುತ್ತಿರುವ ಅದಮಾರು ಪರ್ಯಾಯ ಮಹೋತ್ಸವ

10:48 PM Jan 14, 2020 | mahesh |

ಉಡುಪಿ: ಈ ಬಾರಿಯ ಅದಮಾರು ಪರ್ಯಾಯ ಗ್ರಾಮೀಣ ಸೊಗಡನ್ನು ಪ್ರತಿಯೊಂದರಲ್ಲೂ ಹೊಂದುವ ಮೂಲಕ ವಿಶಿಷ್ಟವಾಗಿದೆ. ಸೌತೆಕಾಯಿಗಳನ್ನು ಸಂರಕ್ಷಿಸಿಡಲೂ ಗ್ರಾಮೀಣರ ಕ್ರಮಗಳನ್ನು ಅನುಸರಿಸಲಾಗುತ್ತಿದೆ.

Advertisement

ವಿದ್ಯಾರ್ಥಿಗಳು ಸ್ವಯಂ ಸೇವಕರು
ಕುಂಜಾರುಗಿರಿಯಿಂದ ಬಂದ ಸಾವಿರಾರು ಸೌತೆಕಾಯಿಗಳು ಹಾಳಾಗದಂತೆ ತೆಂಗಿನ ಮರದ ಸಿರಿ ಒಲಿಯಿಂದ ಸೌತೆಕಾಯಿ ಕಟ್ಟಿ ಮಠದ ಪಕಾಸಿಗೆ ನೇತು ಹಾಕಲಾಗಿದೆ. ಈ ಕೆಲಸದಲ್ಲಿ ಅದಮಾರು ಶಿಕ್ಷಣ ಸಂಸ್ಥೆಯಲ್ಲಿ ಒಂದಾದ ಪಿಪಿಸಿ ಸಂಧ್ಯಾ ಕಾಲೇಜಿನ 15 ಮಂದಿ ಎನ್‌ಎಸ್‌ಎಸ್‌ ವಿದ್ಯಾರ್ಥಿಗಳು ತೊಡಗಿಸಿಕೊಂಡಿದ್ದಾರೆ. ಸೌತೆಕಾಯಿಗಳನ್ನು ಹೀಗಿಟ್ಟರೆ ಹಲವು ಸಮಯವಾದರೂ ಹಾಳಾಗುವುದಿಲ್ಲ. ಈ ಪದ್ಧತಿ ಗ್ರಾಮೀಣರಲ್ಲಿ ಇನ್ನೂ ಜೀವಂತವಾಗಿದ್ದು ಅದನ್ನು ಮಠವೂ ಅನುಸರಿಸಿದೆ.

ಭಕ್ತನಿಂದ ಸೌತೆ ಕಾಯಿ ಸೇವೆ
ರಾಜೇಂದ್ರ ಭಟ್‌ ಅವರು ಈ ಬಾರಿ 1.5 ಎಕ್ರೆ ಪ್ರದೇಶದಲ್ಲಿ ಸೌತೆಕಾಯಿ ಹಾಗೂ 1.5 ಎಕ್ರೆ ಪ್ರದೇಶದಲ್ಲಿ ಕುಂಬಳಕಾಯಿ ಬೆಳೆದಿದ್ದಾರೆ. 60 ದಿನಕ್ಕೆ ಬರುವ ಸೌತೆಕಾಯಿ ಫ‌ಸಲು ಈ ಬಾರಿ 45 ದಿನಕ್ಕೆ ಬಂದಿದ್ದು, ಪರ್ಯಾಯೋತ್ಸವ ಅನ್ನಸಂತರ್ಪಣೆಗಾಗಿ 25 ಕ್ವಿಂಟಾಲ್‌ ಸೌತೆಕಾಯಿ ಶನಿವಾರ ಹೊರೆಕಾಣಿಕೆ ಕೊಟ್ಟಿದ್ದಾರೆ. ಫೆ. 2 ರಂದು ಕುಂಜಾರುಗಿರಿಯಿಂದ ಸಲ್ಲಿಕೆಯಾಗುವ ಹೊರೆಕಾಣಿಕೆಯಲ್ಲಿ ಕುಂಬಳಕಾಯಿ ಜತೆಗೆ ಮತ್ತಷ್ಟು ಸೌತೆಕಾಯಿ ನೀಡಲಿದ್ದಾರೆ.

ಮಾದರಿ ಪರ್ಯಾಯ
ಅದಮಾರು ಪರ್ಯಾಯ ಮಾದರಿ ಪರ್ಯಾಯವಾಗಿ ಗುರುತಿಸಿಕೊಳ್ಳುತ್ತಿದೆ. ಹೊರೆ ಕಾಣಿಕೆಯ ರೂಪದಲ್ಲಿ ಬರುವ ತರಕಾರಿ ವಸ್ತುಗಳು ಹಾಳಾಗುವುದನ್ನು ತಡೆಯುವ ನಿಟ್ಟಿನಲ್ಲಿ ಎರಡು ವರ್ಷಗಳ ನಿರಂತರವಾಗಿ ಪರ್ಯಾಯ ಹೊರೆ ಕಾಣಿಕೆ ಸ್ವೀಕರಿಸುವುದಾಗಿ ಶ್ರೀಪಾದರು ಘೋಷಣೆ ಮಾಡಿದ್ದಾರೆ.

ಸಾವಯವ ಅಕ್ಕಿ ಖರೀದಿ
ಕೃಷ್ಣ ಮಠದಲ್ಲಿ ದೇವರ ನೈವೇದ್ಯಕ್ಕೆ ಅದಮಾರು ಪರ್ಯಾಯದಲ್ಲಿ ಸಾವಯವ ಅಕ್ಕಿ ಬಳಸಲು ನಿರ್ಧರಿಸಲಾಗಿದೆ. ಈಗಾಗಲೇ ಮದ್ರಾಸ್‌ ಸಣ್ಣ, 101, ಸೋನಾ, ಹೇಮಾವತಿ, ತನು, ಪಾಲೂರು ಸಣ್ಣ, ಸಿಂಧು, ಹೊನ್ನೆಕಚ್ಚು, ಬಿಂದುಕಡ್ಡಿ, ಮಂಜುಗುಣೆ ಸಣ್ಣಕ್ಕಿ, ಕೆಂಪಕ್ಕಿ, ಗೌರಿ, ಪದ್ಮರೇಖಾ, ಮಟ್ಟಳಿಗ, ರಾಜ್‌ಕಮಲ, ಮುಳ್ಳರೆ ತಳಿಯ ಭತ್ತಗಳನ್ನು ಗುರುತಿಸಲಾಗಿದ್ದು, ಶಿರಸಿ, ಕಾರ್ಕಳ, ಉಡುಪಿ, ಸಿದ್ದಾಪುರ, ಮಡಿಕೇರಿ ಭಾಗದ ರೈತರಿಂದ ಖರೀದಿಸಲಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next