Advertisement

High Court: ತೃತೀಯ ಲಿಂಗಿಗಳ ಜನನ, ಮರಣ ಪ್ರಮಾಣ ಪತ್ರದಲ್ಲಿ ಮಾರ್ಪಾಡು ಮಾಡಿ; ಹೈಕೋರ್ಟ್‌

09:58 PM Dec 27, 2024 | Team Udayavani |

ಬೆಂಗಳೂರು: ಜನನ ಮತ್ತು ಮರಣ ಕಾಯ್ದೆ ಮತ್ತದರ ಸಂಬಂಧಿತ ನಿಯಮಗಳಿಗೆ ಸೂಕ್ತ ತಿದ್ದುಪಡಿ ಆಗುವವರೆಗೆ ತೃತೀಯ ಲಿಂಗಿಗಳ ಜನನ ಮತ್ತು ಮರಣ ಪ್ರಮಾಣ ಪತ್ರದಲ್ಲಿ ಅಗತ್ಯ ಮಾರ್ಪಾಡು ಮಾಡಿಕೊಡುವುದು ಜನನ ಮತ್ತು ಮರಣ ನೋಂದಣಿ ರಿಜಿಸ್ಟ್ರಾರ್‌ಗಳ ಕರ್ತವ್ಯ ಎಂದು ರಾಜ್ಯ ಹೈಕೋರ್ಟ್‌ ಹೇಳಿದೆ.

Advertisement

ಮಂಗಳೂರಿನ ಬೋಳಾರ ನಿವಾಸಿ ತೃತೀಯ ಲಿಂಗಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ಏಕಸದಸ್ಯ ಪೀಠ ಮಾನ್ಯ ಮಾಡಿದೆ. ಜನನ ಮತ್ತು ಮರಣ ಕಾಯ್ದೆ -1969 ಮತ್ತು ಸಂಬಂಧಿತ ನಿಯಮಗಳಿಗೆ ತಿದ್ದುಪಡಿ ಮಾಡುವವರೆಗೆ ತೃತೀಯ ಲಿಂಗಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ 2019ರ ಸೆಕ್ಷನ್‌ 6 ಅಥವಾ 7ರಡಿ ನೀಡಲಾಗುವ ಪ್ರಮಾಣ ಪತ್ರವನ್ನು ಒಳಗೊಂಡ ತೃತೀಯ ಲಿಂಗಿ ಸಲ್ಲಿಸುವ ಅರ್ಜಿಯನ್ನು ಒಪ್ಪಿಕೊಂಡು, ಜನನ ಮತ್ತು ಮರಣ ನೋಂದಣಿಯಲ್ಲಿ ಅದನ್ನು ನಮೂದಿಸಿ ಪರಿಷ್ಕೃತ ಜನನ ಅಥವಾ ಮರಣ ಸರ್ಟಿಫಿಕೇಟ್‌ ನೀಡುವುದು ಜನನ ಮತ್ತು ಮರಣ ರಿಜಿಸ್ಟ್ರಾರ್‌ ಕರ್ತವ್ಯವಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.

ರಾಜ್ಯ ಕಾನೂನು ಆಯೋಗವು ತೃತೀಯ ಲಿಂಗಿ ಕಾಯಿದೆ ಅಧ್ಯಯನ ಮಾಡಿ ಜನನ ಮತ್ತು ಮರಣ ಕಾಯಿದೆ-1969 ಮತ್ತದರ ಸಂಬಂಧಿತ ನಿಯಮಗಳಿಗೆ ಅಗತ್ಯ ತಿದ್ದುಪಡಿ ಮಾಡಿ ತೃತೀಯ ಲಿಂಗಿ ಕಾಯ್ದೆ ಜಾರಿಗೆ ಸಲಹೆ ನೀಡಬೇಕು. ಹೀಗಾಗಿ ಆದೇಶದ ಪ್ರತಿಯನ್ನು ರಿಜಿಸ್ಟ್ರಾರ್‌ ಜನರಲ್‌ ಅವರು ರಾಜ್ಯ ಕಾನೂನು ಆಯೋಗದ ಅಧ್ಯಕ್ಷರಿಗೆ ಕಳುಹಿಸಿಕೊಡಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ.

ಏನಿದು ಪ್ರಕರಣ? :

1983ರಲ್ಲಿ ಜನಿಸಿದ್ದ ವ್ಯಕ್ತಿ 2004ರಲ್ಲಿ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಬಳಿಕ ಮಂಗಳೂರು ನಗರ ಪಾಲಿಕೆಯ ಜನನ ಮತ್ತು ಮರಣ ಸರ್ಟಿಫಿಕೇಟ್‌ ನೀಡುವ ರಿಜಿಸ್ಟ್ರಾರ್‌/ ಆರೋಗ್ಯಾಧಿಕಾರಿಗೆ ಜನನ ಪ್ರಮಾಣ ಪತ್ರದಲ್ಲಿ ಹೆಸರು ಮತ್ತು ಲಿಂಗ ಬದಲಾವಣೆ ಮಾಡುವಂತೆ ಕೋರಿದ್ದರು. ಆಗ ಆರೋಗ್ಯಾಧಿಕಾರಿಯು ಜನನ ಮತ್ತು ಮರಣ ನೋಂದಣಿ ಕಾಯಿದೆ ಸೆಕ್ಷನ್‌ 15ರ ಅಡಿ ಈಗಾಗಲೇ ನೀಡಿರುವ ಸರ್ಟಿಫಿಕೇಟ್‌ನಲ್ಲಿ ದೋಷಗಳಿದ್ದರೆ ಸರಿಪಡಿಸಬಹುದು ಆದರೆ ಬದಲಾವಣೆ ಮಾಡಲಾಗದು ಎಂದು ಹೇಳಿದ್ದರು. ಹೀಗಾಗಿ, ಅರ್ಜಿದಾರೆ ಹೈಕೋರ್ಟ್‌ ಮೆಟ್ಟಿಲೇರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next