Advertisement

ಉದ್ಯಾನನಗರಿಯಲ್ಲಿ ಅಭಿವೃದ್ಧಿ ಜತೆ ಪರಿಸರವೃದ್ಧಿಯೂ ಬೇಕು

12:36 AM Oct 26, 2022 | Team Udayavani |

ಉದ್ಯಾನನಗರಿ ಎಂಬ ಖ್ಯಾತಿಗೆ ಒಳಗಾಗಿದ್ದ ರಾಜಧಾನಿ ಬೆಂಗಳೂರಿನಲ್ಲಿ ಪರಿಸರದ ಕುರಿತು ಆಡಳಿತ ನಿರ್ಲಕ್ಷ್ಯ ತೋರುತ್ತಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಅಭಿವೃದ್ಧಿ ಕಾಮಗಾರಿಗಳ ಹಿನ್ನೆಲೆಯಲ್ಲಿ 1,671 ಮರ ಕಡಿದು ಹಾಕಿರುವುದು ಆ ಮೂಲಕ ಹಸುರು ಪ್ರಮಾಣ ಕಡಿಮೆಯಾಗಿರುವುದು ಆತಂಕದ ಸಂಗತಿಯೇ.
ಅಭಿವೃದ್ಧಿ ಯೋಜನೆಗಳು ಅಗತ್ಯ ಆದರೆ ಆ ಯೋಜನೆಗಳಿಗೆ ತೆರವುಗೊಳಿಸುವ ಮರಗಳ ಹತ್ತು ಪಟ್ಟು ಸಸಿ ನೆಡುವ ಕಾರ್ಯಕ್ರಮ ಆಗಬೇಕಿದೆ. ಆಗ ಮಾತ್ರ ಹಸುರು ಪ್ರಮಾಣ ಸರಿತೂಗಿಸಲು ಸಾಧ್ಯ.

Advertisement

ಕಳೆದ ಹತ್ತಿಪ್ಪತ್ತು ವರ್ಷಗಳಲ್ಲಿ ಪ್ರತೀವರ್ಷ ಪರಿಸರ ದಿನಾಚರಣೆ ಸಂದರ್ಭದಲ್ಲಿ ಲಕ್ಷ ವೃಕ್ಷ, ಕೋಟಿ ವೃಕ್ಷ ಆಂದೋಲನ, ಅಭಿಯಾನ ನಡೆಯುತ್ತದೆ. ಆದರೆ ಅಂತಿಮವಾಗಿ ನೆಟ್ಟ ಗಿಡಗಳೆಷ್ಟು ಉಳಿದ ಗಿಡಗಳೆಷ್ಟು ಎಂಬುದರ ಲೆಕ್ಕ ಮಾತ್ರ ಸಿಗುವುದಿಲ್ಲ. ಇಪ್ಪತ್ತು ವರ್ಷಗಳಿಂದ ಅರಣ್ಯ ಇಲಾಖೆ, ಬಿಬಿಎಂಪಿ ನೆಟ್ಟ ಕೋಟ್ಯಂತರ ಸಸಿಗಳು ಮರಗಳಾಗಿದ್ದರೆ ಇಂದು ಇಡೀ ಬೆಂಗಳೂರು ಮತ್ತಷ್ಟು ಹಸುರು ಮಯವಾಗಿರುತ್ತಿತ್ತು. ಆದರೆ ಗಿಡ ನೆಡುವುದು ಆ ದಿನಕ್ಕೆ ಮಾತ್ರ ಸೀಮಿತ ಎಂಬಂತಾಗಿದೆ. ಬೆಂಗಳೂರಿನ ಅಂದವೇ ಹಸುರು. ಅದಕ್ಕೆ ಧಕ್ಕೆಯಾಗಲು ರಾಜ್ಯ ಸರಕಾರ ಅಥವಾ ಬೆಂಗಳೂರು ಮಹಾನಗರ ಪಾಲಿಕೆ ಬಿಡಬಾರದು.

ಏಕೆಂದರೆ 2014ರಲ್ಲಿ ಐಐಎಸ್ಸಿ ಸಿದ್ಧಪಡಿಸಿದ ವರದಿಯಂತೆ ಬೆಂಗಳೂರಿನಲ್ಲಿ 14 ಲಕ್ಷ ಮರಗಳಿದ್ದು 16 ಜನರಿಗೆ ಒಂದು ಮರ ಇತ್ತು. ಪ್ರತೀವರ್ಷ ಮರಗಳ ಸಂಖ್ಯೆ ಕಡಿಮೆಯಾಗುತ್ತಲೇ ಇದೆ. ಇದು ಹೀಗೆ ಮುಂದುವರಿದರೆ ಹಸುರೀಕರಣ ಕುಸಿಯುವುದರ ಜತೆಗೆ ಮಾಲಿನ್ಯ ಪ್ರಮಾಣವೂ ಹೆಚ್ಚಲಿದೆ. ಬೆಂಗಳೂರಿನಲ್ಲಿ ಮೇಲ್ಸೇತುವೆ ನಿರ್ಮಾಣ, ರಸ್ತೆ ಅಗಲೀಕರಣ, ನಮ್ಮ ಮೆಟ್ರೋ ಕಾಮಗಾರಿ ಹೀಗೆ ಹಲವು ಯೋಜನೆಗಳ ಕಾಮಗಾರಿಗಾಗಿ ಮರಗಳನ್ನು ಕಡಿಯಲಾಗುತ್ತದೆ. ಒಂದು ಮರ ಕಡಿದರೆ ಅದಕ್ಕೆ ಬದಲಾಗಿ 5 ಸಸಿಗಳನ್ನು ನೆಡಬೇಕು ಎಂಬ ನಿಯಮವಿದೆ. ಸಸಿ ನೆಡುವ ಬಿಬಿಎಂಪಿ ಅದರ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡುತ್ತಿಲ್ಲ. ಇದಕ್ಕೆ ಉದಾಹರಣೆ ಎಂದರೆ ಬಿಬಿಎಂಪಿ ನೆಟ್ಟ 3.94 ಲಕ್ಷ ಸಸಿಗಳ ಪೈಕಿ ಶೇ. 20ಕ್ಕೂ ಹೆಚ್ಚಿನ ಸಸಿಗಳು ನಾಶವಾಗಿರುವುದು. 2018-19, 2021-22ರಲ್ಲಿ ಒಂದೇ ಒಂದು ಸಸಿ ನೆಟ್ಟಿಲ್ಲ ಎನ್ನುವುದು ಖೇದಕರ.

ಈ ಹಿಂದೆ ನಗರದಲ್ಲಿರುವ ಮರಗಳ ಸಂಖ್ಯೆ ಹಾಗೂ ಯಾವ ಜಾತಿ, ತಳಿಯ ಮರಗಳಿವೆೆ ಎಂಬುದನ್ನು ಪತ್ತೆ ಮಾಡಲು ಮರಗಣತಿ ಮಾಡಲು ಬಿಬಿಎಂಪಿ ಯೋಜನೆ ರೂಪಿಸಿತ್ತು. ಆದರೆ ಅದು ಕಾರ್ಯಗತ ಆಗಲಿಲ್ಲ. ಈಗಲೂ ಕಾಲ ಮಿಂಚಿಲ್ಲ, ತತ್‌ಕ್ಷಣ ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಾಗಿದೆ. ಕೆಎಚ್‌ಬಿ, ಬಿಡಿಎ ಅಭಿವೃದ್ಧಿಪಡಿಸುವ ಬಡಾವಣೆಗಳಲ್ಲಿ ಮಿನಿ ಅರಣ್ಯ ನಿರ್ಮಾಣ ಕಡ್ಡಾಯಗೊಳಿಸಬೇಕಾಗಿದೆ. ಹೀಗಾದಾಗ ಮಾತ್ರ ಹಸುರು ಉಳಿಯಲು ಸಾಧ್ಯ.

ರಾಜಧಾನಿ ಬೆಂಗಳೂರಿನಲ್ಲಿ ಹಸುರು ಉಳಿಸುವ ಹಾಗೂ ಹಸುರು ಪ್ರಮಾಣ ಹೆಚ್ಚಿಸುವ ವಿಚಾರದಲ್ಲಿ ಸರಕಾರ ಹಾಗೂ ಬಿಬಿಎಂಪಿಯಷ್ಟೇ ಅಲ್ಲದೆ ನಗರದ ನಾಗರಿಕರ ಹೊಣೆಗಾರಿಯೂ ಇದೆ. ರಸ್ತೆ ಬದಿ ಗಿಡ ನೆಡುವ, ತಮ್ಮ ಸುತ್ತಮುತ್ತಲ ಪರಿಸರದಲ್ಲಿ ಅವಕಾಶ ಇರುವ ಕಡೆ ಹಣ್ಣು, ಹೂವು ಗಿಡ ನೆಡುವ ಕೆಲಸ ಮಾಡಬೇಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next