ಅಳ್ನಾವರ: ಹೊಸ ತಾಲೂಕು ಕಚೇರಿಯನ್ನು ಇಲ್ಲಿನ ಎಪಿಎಂಸಿ ಆವರಣದಲ್ಲಿ ನಿರ್ಮಿಸಬೇಕು. ಈ ಜಾಗೆಯನ್ನು ಹಂಚಿಕೆ ಮಾಡಲು ಹೊರಟಿರುವ ಎಪಿಎಂಸಿ ಕ್ರಮ ತಡೆಯಬೇಕು ಎಂದು ಆಗ್ರಹಿಸಿ ಸ್ಥಳೀಯ ಮುಖಂಡರ ನಿಯೋಗ ಧಾರವಾಡಕ್ಕೆ ತೆರಳಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.
ಜಿಲ್ಲಾಧಿಕಾರಿಗಳು ಈಚೆಗೆ ಪಟ್ಟಣಕ್ಕೆ ಆಗಮಿಸಿ ಎಪಿಎಂಸಿ ಜಾಗೆಯನ್ನು ಪರಿಶೀಲಿಸಿದ ನಂತರ ಈ ಜಾಗೆ ಸೂಕ್ತ ಎಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಸರ್ವೇ ಕೂಡಾ ನಡೆದಿದೆ. ಇದಾದ ನಂತರ ಧಾರವಾಡ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯವರು ಇದೇ ಜಾಗೆಯನ್ನು ವ್ಯಾಪಾರಸ್ಥರಿಗೆ ಹಂಚಿಕೆ ಮಾಡಲು ಹೊರಟಿರುವ ಕ್ರಮ ಖಂಡನೀಯ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಎಪಿಎಂಸಿ ಆವರಣ ಸುಮಾರು 16 ಎಕರೆ ವಿಶಾಲವಾದ ಜಾಗೆ ಹೊಂದಿದೆ. ಇದು ಉಪ ಮಾರುಕಟ್ಟೆ ಪ್ರಾಂಗಣವಾದ್ದರಿಂದ ಹೆಚ್ಚಿನ ವಹಿವಾಟು ಇಲ್ಲದೆ ಸಾಕಷ್ಟು ಜಾಗೆ ನಿರುಪಯುಕ್ತವಾಗಿದೆ. ಅದರಲ್ಲಿ ತಾಲೂಕು ಆಡಳಿತ ಭವನಕ್ಕೆ ಕೇವಲ 3.12 ಏಕರೆ ಜಾಗೆಯನ್ನು ಮಾತ್ರ ಗುರುತಿಸಲಾಗಿದೆ. ಕಚೇರಿ ಕೆಲಸಕ್ಕೆ ಆಗಮಿಸುವ ಜನರಿಗೆ ಈ ಜಾಗೆ ಅನುಕೂಲಕರವಾಗಿದೆ. ಇಲ್ಲಿಯೇ ತಾಲೂಕು ಕಚೇರಿ ನಿರ್ಮಿಸಬೇಕು ಎಂದು ವಿನಂತಿಸಲಾಗಿದೆ.
ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ ಅವರು ನಿಯೋಗದ ಮನವಿ ಸ್ವೀಕರಿಸಿ ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ ಎಂದು ಮುಖಂಡರು ಪತ್ರಿಕೆಗೆ ತಿಳಿಸಿದ್ದಾರೆ.
ಸಭೆ: ಈ ಕುರಿತು ಚರ್ಚಿಸಲು ಬೆಳಗ್ಗೆ ಮುಖಂಡರ ಸಭೆಯನ್ನು ಸ್ಥಳೀಯ ಅಂಜುಮನ್ ಏ ಇಸ್ಲಾಂ ಸಂಸ್ಥೆಯ ಶಾದಿ ಮಹಲ್‌ದಲ್ಲಿ ಕರೆಯಲಾಗಿತ್ತು. ಹಲವು ಮುಖಂಡರು ಮಾತನಾಡಿ, ನಾಲ್ಕು ದಶಕಗಳ ಹೋರಾಟದ ಫಲವಾಗಿ ದೊರೆತ ತಾಲೂಕು ಕೇಂದ್ರ ಜನರಿಗೆ ಅನುಕೂಲವಾದ ಸ್ಥಳದಲ್ಲಿ ಆಗಲಿ ಎಂದರು. ಈ ಕುರಿತು ಪಪಂ ಸಾಮಾನ್ಯ ಸಭೆಯಲ್ಲಿ ಸರ್ವ ಸಮ್ಮತದ ಠರಾವು ಪಾಸ್ ಮಾಡಿ ಜಿಲ್ಲಾಡಳಿತಕ್ಕೆ ಕಳುಹಿಸಲಾಗಿದೆ ಎಂದು ಸಭೆಗೆ ತಿಳಿಸಲಾಯಿತು. ಜಿಲ್ಲಾಧಿಕಾರಿಯನ್ನು ಖುದ್ದಾಗಿ ಭೇಟಿ ಮಾಡಿ ಮನವಿ ಸಲ್ಲಿಸಲು ನಿರ್ಣಯಿಸಲಾಗಿತ್ತು.
ಎಂ.ಸಿ. ಹಿರೇಮಠ, ಫಹೀಮ್ ಕಾಂಟ್ರಾಕ್ಟರ, ಶಿವಾನಂದ ಹೊಸಕೇರಿ, ಎಸ್.ಬಿ. ಪಾಟೀಲ, ನಾರಾಯಣ ಗಡಕರ, ಕೃಷ್ಣ ಅಷ್ಟೇಕರ, ಬಸವರಾಜ ತೇಗೂರ, ಛಗನಲಾಲ ಪಟೇಲ, ಡಾ| ಬಸವರಾಜ ಮೂಡಬಾಗಿಲ್, ನದೀಮ ಕಾಂಟ್ರಾಕ್ಟರ್, ಅಮೂಲ ಗುಂಜೀಕರ, ನಾರಾಯಣ ಮೋರೆ, ಅನ್ವರಖಾನ ಬಾಗೇವಾಡಿ, ಕಿರಣ ಗಡಕರ, ಜೈಲಾನಿ ಸುದರ್ಜಿ, ಮಂಜುಳಾ ಮೇದಾರ, ನಾಗರತ್ನಾ ವಾಘಮೋಡೆ, ರಾಜೇಶ ಬೈಕೇರಿಕರ, ವೀರೇಶ ಲಿಂಗನಮಠ, ನಾಗರತ್ನಾ ಜಮಖಂಡಿ, ಅನ್ನಪೂರ್ಣಾ ಹಿರೇಮಠ, ಸಂತೋಷ ಬಡಿಗೇರ, ಸುವರ್ಣಾ ಕಡಕೋಳ, ಜಾವಿದ್ ತೊಲಗಿ, ಪ್ರವೀಣ ಪವಾರ, ಬಾಳು ಜಾಧವ, ಎಚ್.ಒ ಪಾಲಕರ, ವಿನಾಯಕ ಕುರುಬರ, ಪರಶುರಾಮ ಬೇಕನೆಕರ, ಪರಮೇಶ್ವರ ತೇಗೂರ, ನಬಿಸಾಬ ಮುಜಾವರ, ಮುಬಾರಕ ಅವರಾದಿ, ಹನುಮಂತ ಶಿಂಧೆ, ಇನಾಯಿತುಲ್ಲಾ ತೊಲಗಿ, ಮಹ್ಮದ್‌ಶಫೀಕ್ ಖತೀಬ ಇದ್ದರು.