ಅಳ್ನಾವರ: ಹಳ್ಳ ದಾಟುತ್ತಿದ್ದ ವೇಳೆ ನೀರಿನ ರಭಸಕ್ಕೆ ಜಾನುವಾರುಗಳು ತೇಲಿ ಹೋದ ಘಟನೆ ಅಳ್ನಾವರ ತಾಲೂಕಿನ ಹೊನ್ನಾಪೂರ ಗ್ರಾಮದಲ್ಲಿ ಅ.21ರ ಸೋಮವಾರ ರಾತ್ರಿ ನಡೆದಿದೆ.
ಸಂಜೆ ಸುರಿದ ಅತಿಯಾದ ಮಳೆಗೆ ಹಳ್ಳದಲ್ಲಿ ಒಮ್ಮಿಂದೊಮ್ಮೆಲೆ ನೀರು ಏರಿಕೆಯಾದ ಪರಿಣಾಮ ಮೇಯಲು ಹೋಗಿದ್ದ ಎಮ್ಮೆಗಳು ಮರಳಿ ಮನೆಗೆ ಬರುವಾಗ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ದಾಟುತ್ತಿದ್ದ ವೇಳೆ 7 ಎಮ್ಮೆಗಳು ತೇಲಿ ಹೋಗಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.
ಹೊನ್ನಾಪೂರದಲ್ಲಿ ಕೆರೆ ತುಂಬಿ ಹೆಚ್ಚುವರಿ ನೀರು ಹೊರಗೆ ಹರಿದು ಹಳ್ಳ ಸೇರಿದ್ದರಿಂದ ನೀರು ದಿಢೀರ್ ಏರಿಕೆಯಾಗಿದೆ. ದಿನನಿತ್ಯ ತಮ್ಮ ಪಾಡಿಗೆ ತಾವು ಸಾಮಾನ್ಯವಾಗಿ ಹಳ್ಳ ದಾಟುತ್ತಿದ್ದ ಜಾನುವಾರುಗಳು ಅಂದು ನೀರು ಹೆಚ್ಚಾಗಿದ್ದ ಕಾರಣ ತೇಲಿ ಹೋಗಿದ್ದವು.
ಈ ಪರಿಣಾಮ ಅ.22ರ ಮಂಗಳವಾರ ಬೆಳಿಗ್ಗೆ 7 ಎಮ್ಮೆಗಳ ಪೈಕಿ 5 ಮೃತ ಜಾನುವಾರುಗಳನ್ನು ಪತ್ತೆ ಹಚ್ಚಲಾಗಿದೆ.
ಇವು ಸಿದ್ದು ಯಮಕರ, ಜಾನು ಶಿಂಧೆ, ಬಮ್ಮು ಯಮಕರ ಅವರಿಗೆ ಸೇರಿದ ಜಾನುವಾರುಗಳಾಗಿದ್ದು, ಅಳ್ನಾವರ ಕಂದಾಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ಮೇಲಾಧಿಕಾರಿಗಳಿಗೆ ವರದಿ ನೀಡಿದ್ದಾರೆ.