ಹೀಗೆ ಹೇಳುತ್ತಲೇ ಮಾತಿಗೆ ನಿಂತರು ನಿರ್ದೆಶಕ ಸುನಿ. ಅವರ ಜತೆಗೆ ಬಂದಿದ್ದ ತಂಡದವರ ಮೊಗದಲ್ಲಿ ಮಂದಹಾಸವಿತ್ತು. ಅದಕ್ಕೆ ಕಾರಣ, “ಆಪರೇಷನ್ ಅಲಮೇಲಮ್ಮ’ನಿಗೆ ಸಿಕ್ಕ ಅಪಾರ ಮೆಚ್ಚುಗೆ. ಚಿತ್ರ ಚೆನ್ನಾಗಿ ಪ್ರದರ್ಶನವಾಗುತ್ತಿದೆ, ಎಲ್ಲೆಡೆಯಿಂದ ಉತ್ತಮ ಗಳಿಕೆಯೂ ಸಿಗುತ್ತಿದೆ ಅಂತ ಹೇಳಿಕೊಳ್ಳಲೆಂದೇ ಸುನಿ ತಂಡದ ಜತೆ ಬಂದಿದ್ದರು.
Advertisement
ಮೊದಲು ಮಾತು ಶುರುವಿಟ್ಟುಕೊಂಡ ಸುನಿ, “ಜಯಣ್ಣ ಕಚೇರಿಗೆ ಹೋದಾಗ, ಜಯಣ್ಣ ಐದನೇ ದಿನದ “ಫಿಗರ್’ ಬಗ್ಗೆ ಹೇಳಿ ಖುಷಿಯಾದರು. “ಒಬ್ಬ ವಿತರಕ ಖುಷಿಯಾದರೆ, ನಿರ್ದೇಶಕ, ನಿರ್ಮಾಪಕರಿಗೂ ಅದು ಡಬ್ಬಲ್ ಖುಷಿಯಾಗುತ್ತೆ. ಮಲ್ಟಿಪ್ಲೆಕ್ಸ್‌ನಲ್ಲಿ ಪ್ರದರ್ಶನ ಹೆಚ್ಚಾಗಿದೆ. ವೀರೇಶ್ ಚಿತ್ರಮಂದಿರದಲ್ಲೂ ಈಗ ಎರಡರಿಂದ ಮೂರಕ್ಕೇರಿದೆ. ಉಳಿದಂತೆ ತುಮಕೂರು, ಚಿತ್ರದುರ್ಗ, ದಾವಣಗೆರೆಯಲ್ಲೂ ಒಳ್ಳೇ ಮೆಚ್ಚುಗೆ ಸಿಗುತ್ತಿದೆ. ಉತ್ತರ ಕರ್ನಾಟಕ ಸ್ವಲ್ಪ ಡಲ್ ಇದೆ. ಅದನ್ನು ಹೊರತುಪಡಿಸಿದರೆ, ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಮುಂದಿನ ವಾರ ಎಷ್ಟು ಗಳಿಕೆ ಆಗಿದೆ ಎಂಬ ಲೆಕ್ಕ ಕೊಡ್ತೀನಿ. ಯಾಕೆಂದರೆ, ಥಿಯೇಟರ್ ಬಾಡಿಗೆ ಕಳೆದು ಎಷ್ಟು ಉಳಿಯುತ್ತೆ ಎಂಬುದನ್ನು ಸೇರಿಸಿ, ಲೆಕ್ಕ ಹೇಳುವುದಾಗಿ ಕಾರ್ತಿಕ್ ಹೇಳಿದ್ದಾರೆ. ಇನ್ನು, ಹಾರಿಜನ್ ಸ್ಟುಡಿಯೋದವರು ಬೇರೆ ಭಾಷೆಗೆ ಹಕ್ಕು ಕೇಳಿದ್ದಾರೆ. ಡೂನ್ ಪ್ರೊಡಕ್ಷನ್‌ನಿಂದ ಹಿಂದಿಗೆ ರೈಟ್ಸ್ ಕೇಳುತ್ತಿದ್ದಾರೆ. “ಅಲಮೇಲಮ್ಮ’ ದೊಡ್ಡ ಸಕ್ಸಸ್ ಅಲ್ಲದಿದ್ದರೂ, ಈ ತರಹದ ಸಿನಿಮಾಗೆ ಇಷ್ಟೊಂದು ಮೆಚ್ಚುಗೆ ಸಿಗುತ್ತಿರುವುದು ಸಹಜವಾಗಿಯೇ ಖುಷಿಕೊಟ್ಟಿದೆ. ಮುಂದೆ ಇದರ ಸ್ವೀಕೆಲ್ ಬರಲಿದೆ. ಅಂತ ಹೇಳಿಕೊಂಡರು ಸುನಿ. ನಾಯಕ ರಿಷಿ ಕೂಡಾ ಖುಷಿ ಹಂಚಿಕೊಂಡರು. ಒಳ್ಳೆಯ ಸಿನಿಮಾದಲ್ಲಿ ಕೆಲಸ ಮಾಡಿದ ಖುಷಿ ನನಗಿದೆ ಅಂದವರು ಅರುಣಾ ಬಾಲರಾಜ್. ಮೊದಲ ಚಿತ್ರದಲ್ಲೇ ಒಳ್ಳೆಯ ಮೆಚ್ಚುಗೆ ಸಿಕ್ಕಿದೆ ಎಂದು ಹೇಳಿದವರು ಅಭಿಷೇಕ್ ಕಾಸರಗೋಡು. ಸಂಗೀತ ನಿರ್ದೇಶಕ ಜ್ಯೂಡ ಸ್ಯಾಂಡಿ ಕೂಡಾ ಇದ್ದರು.