Advertisement

20 ದಿನ; 25 ಕೋಟಿ ಕೇಸು; ಚೀನದಲ್ಲಿ ಬಿಗಡಾಯಿಸಿದ ಸ್ಥಿತಿ

09:05 PM Dec 25, 2022 | Team Udayavani |

ನವದೆಹಲಿ/ಬೀಜಿಂಗ್‌: ಜಗತ್ತಿಗೆ ಕೊರೊನಾ ವೈರಸ್‌ ಹಬ್ಬಿಸಿ ತಣ್ಣಗೆ ಕುಳಿತ ಚೀನಾದಲ್ಲಿ ಇಪ್ಪತ್ತು ದಿನಗಳಿಂದ ಈಚೆಗೆ 250 ಮಿಲಿಯ (25 ಕೋಟಿ) ಹೊಸ ಸೋಂಕು ಪ್ರಕರಣಗಳು ದೃಢಪಟ್ಟಿವೆ. ಕ್ಸಿಜಿನ್‌ ಪಿಂಗ್‌ ಸರ್ಕಾರ ಎಷ್ಟು ಮಂದಿಗೆ ಸೋಂಕು ದೃಢಪಟ್ಟಿದೆ ಎನ್ನುವುದರ ಬಗ್ಗೆ ಮಾಹಿತಿ ನೀಡದೇ ಇದ್ದರೂ, “ರೇಡಿಯೋ ಫ್ರೀ ಏಷ್ಯಾ’ ಎಂಬ ಸಂಘಟನೆ ಸಂಗ್ರಹಿಸಿದ ಮಾಹಿತಿ ಪ್ರಕಾರ ಅಲ್ಲಿ ಪರಿಸ್ಥಿತಿ ಕೈಮೀರಿ ಹೋಗಿದೆ.

Advertisement

ಕೊರೊನಾ ವಿರುದ್ಧ ಶೂನ್ಯ ಸಹನೆ ನೀತಿ ಎಂಬುದನ್ನು ಭಾರೀ ಪ್ರತಿಭಟನೆಗಳ ಬಳಿಕ ಕ್ಸಿಜಿನ್‌ಪಿಂಗ್‌ ಸರ್ಕಾರ ವಾಪಸ್‌ ಪಡೆದುಕೊಂಡಿತ್ತು. ಒಟ್ಟು 20 ದಿನಗಳ ಅವಧಿಯಲ್ಲಿ 250 ಮಿಲಿಯ ಸೋಂಕಿನ ಪ್ರಕರಣಗಳು ದೃಢಪಟ್ಟಿವೆ. ಡಿ.1ರಿಂದ 20ರ ವರೆಗಿನ ಮಾಹಿತಿ ಇದಾಗಿದೆ. ಅಂದರೆ ಚೀನಾದ ಒಟ್ಟು ಜನಸಂಖ್ಯೆಯ ಶೇ.17.65 ಆಗಿದೆ. ಸೋರಿಕೆಯಾಗಿರುವ ಮಾಹಿತಿ ಚೀನಾ ಸರ್ಕಾರದ ಅಧಿಕೃತ ದಾಖಲೆಗಳೇ ಆಗಿವೆ ಎಂದು “ರೇಡಿಯೋ ಫ್ರೀ ಏಷ್ಯಾ’ದ ಪತ್ರಕರ್ತರೊಬ್ಬರು ಹೇಳಿಕೊಂಡಿದ್ದಾರೆ.

ಹಳಿತಪ್ಪಿದ ಆಸ್ಪತ್ರೆ ವ್ಯವಸ್ಥೆ:
ರಾಜಧಾನಿ ಬೀಜಿಂಗ್‌ ಸೇರಿದಂತೆ ಆ ದೇಶಾದ್ಯಂತ ಆಸ್ಪತ್ರೆಗಳಲ್ಲಿ ಈಗಾಗಲೇ ಸೋಂಕು ಪೀಡಿತರು ಹೆಚ್ಚಿನ ಸಂಖ್ಯೆಯಲ್ಲಿ ಚಿಕಿತ್ಸೆಗಾಗಿ ಕಾಯುತ್ತಿದ್ದಾರೆ. ಸೋಂಕು ಪೀಡಿತರನ್ನು ಆಸ್ಪತ್ರೆಗೆ ದಾಖಲಿಸಲು ಕಂಟೈನರ್‌ಗಳನ್ನು ಬಳಕೆ ಮಾಡಲಾಗುತ್ತಿದೆ. ಈ ಬಗ್ಗೆ ಟ್ವಿಟರ್‌ಲ್ಲಿ ಫೋಟೋಗಳು ಮತ್ತು ವಿಡಿಯೋಗಳು ಅಪ್‌ಲೋಡ್‌ ಆಗಿವೆ.

ಮಾಹಿತಿ ಸ್ಥಗಿತಕ್ಕೆ ನಿರ್ಧಾರ:
ಜಗತ್ತಿನಾದ್ಯಂತ ಕೊರೊನಾ ಬಿಕ್ಕಟ್ಟಿನ ಬಗ್ಗೆ ಮಾಹಿತಿಗಳು ಮತ್ತು ವಿಡಿಯೋಗಳು ಜಾಲತಾಣಗಳಲ್ಲಿ ಸೋರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡದೇ ಇರಲು ನಿರ್ಧರಿಸಿದೆ. ಆ ದೇಶ ರಾಷ್ಟ್ರೀಯ ಆರೋಗ್ಯ ಆಯೋಗದ ಬದಲಾಗಿ ರೋಗ ನಿಯಂತ್ರಣ ಸಂಸ್ಥೆಯೇ ಈ ಬಗ್ಗೆ ಮಾಹಿತಿ ನೀಡಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಇಂಥ ಕ್ರಮದ ಮೂಲಕ ಮಾಹಿತಿ ಸೆನ್ಸಾರ್‌ಗೂ ಕ್ಸಿಜಿನ್‌ಪಿಂಗ್‌ ಸರ್ಕಾರ ಮುಂದಾಗಿದೆ.

ನಾಳೆ ದೇಶಾದ್ಯಂತ ಮಾಕ್‌ ಡ್ರಿಲ್‌
ದೇಶದ ಆಸ್ಪತ್ರೆಗಳಲ್ಲಿ ಕೊರೊನಾ ಸಿದ್ಧತೆ ಪರಿಶೀಲಿಸುವ ನಿಟ್ಟಿನಲ್ಲಿ ಮಂಗಳವಾರ (ಡಿ.27)ರಂದು ಮಾಕ್‌ ಡ್ರಿಲ್‌ ನಡೆಯಲಿದೆ. ಮೆಡಿಕಲ್‌ ಆಕ್ಸಿಜನ್‌, ನುರಿತ ಸಿಬ್ಬಂದಿ, ಸೂಕ್ತ ರೀತಿಯ ಹಾಸಿಗೆ ವ್ಯವಸ್ಥೆ, ಔಷಧಗಳು, ಶಸ್ತ್ರಚಿಕಿತ್ಸಾ ಪರಿಕರಗಳು, ಕ್ವಾರಂಟೈನ್‌ನಲ್ಲಿ ಸೋಂಕಿತರನ್ನು ಇರಿಸಬೇಕಾದರೆ ಇರುವ ಅಗತ್ಯಗಳ ಬಗ್ಗೆ ಈ ಸಂದರ್ಭದಲ್ಲಿ ಪರಿಶೀಲನೆ ನಡೆಸಲಾಗುತ್ತದೆ.

Advertisement

ಸಕ್ರಿಯ ಕೇಸುಗಳು ಏರಿಕೆ:
ಶನಿವಾರದಿಂದ ಭಾನುವಾರದ ಅವಧಿಯಲ್ಲಿ 227 ಹೊಸ ಸೋಂಕು ಪ್ರಕರಣಗಳು ದೃಢಪಟ್ಟಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 3,424ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಇದುವರೆಗೆ 220.05 ಕೋಟಿ ಡೋಸ್‌ ಲಸಿಕೆ ನೀಡಲಾಗಿದೆ. ಇದೇ ವೇಳೆ, ಚೀನಾದಿಂದ ಆಗ್ರಾಕ್ಕೆ ಆಗಮಿಸಿದ ವ್ಯಕ್ತಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಆತನ ಗಂಟಲ ದ್ರವದ ಮಾದರಿಯನ್ನು ವಂಶವಾಹಿ ಪರೀಕ್ಷೆಗೆ ಕಳುಹಿಸಲಾಗಿದೆ.

ಮುಂಬೈನಲ್ಲಿ:
ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ 32 ಕೊರೊನಾ ಕೇಸುಗಳು ದೃಢಪಟ್ಟಿದ್ದರೆ, ಸಕ್ರಿಯ ಕೇಸುಗಳು 148ಕ್ಕೆ ಏರಿಕೆಯಾಗಿದೆ. ಯಾವುದೇ ಸಾವಿನ ಪ್ರಕರಣಗಳು ದೃಢಪಟ್ಟಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next