ಆಲಮಟ್ಟಿ: ಎತ್ತ ನೋಡಿದರತ್ತ ಹಸಿರಿನಿಂದ ಕಂಗೊಳಿಸುತ್ತಿರುವ ಗುಡ್ಡಗಳು, ಧಾರಾಕಾರ ಹರಿಯುತ್ತಿರುವ ಕೃಷ್ಣೆಯ ಕಲರವ, ಪಕ್ಷಿಗಳ ಚಿಲಿಪಿಲಿ ನಿನಾದ, ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುತ್ತಿರುವ ತಾಣವೇ ಆಲಮಟ್ಟಿ. ಆಲಮಟ್ಟಿ ಕೃಷ್ಣಾ ಮೇಲ್ದಂಡೆ ಯೋಜನೆ ಕೇಂದ್ರ ಸ್ಥಾನವಾಗಿರುವ ಲಾಲ ಬಹದ್ದೂರಶಾಸ್ತ್ರಿ ಜಲಾಶಯ, ರಾಕ್ ಉದ್ಯಾನ, ಮೊಘಲ್ ಉದ್ಯಾನ, ಇಟಾಲಿಯನ್ ಉದ್ಯಾನ, ಗೋಪಾಲಕೃಷ್ಣ ಉದ್ಯಾನ, ಲವ-ಕುಶ ಉದ್ಯಾನ ಸೇರಿದಂತೆ ಸುತ್ತಲೂ ಹಸಿರುಮಯವಾಗಿದೆ.
ಬರದನಾಡು ಎಂದು ಹಣೆಪಟ್ಟಿ ಅಂಟಿಸಿಕೊಂಡಿರುವ ಉತ್ತರ ಕರ್ನಾಟಕದಲ್ಲಿ ಕೃಷ್ಣಾಭಾಗ್ಯ ಜಲ ನಿಗಮದ ವಿಶೇಷ ಕಾಳಜಿಯಿಂದ ಆಲಮಟ್ಟಿ ಈಗ ತಂಪಾಗಿದ್ದು ಪಟ್ಟಣ ಪ್ರವೇಶಿಸಿದರೆ ಸಾಕು ಬಿಸಿಲನಾಡಿನಲ್ಲಿಯೂ ಇಂತಹ ಸುಂದರ ಹಾಗೂ ತಂಪಾದ ಪರಿಸರ ಬಿಟ್ಟು ಹೋಗದಂತೆ ಪ್ರವಾಸಿಗರನ್ನು ಹಿಡಿದಿಟ್ಟುಕೊಳ್ಳುತ್ತಿದೆ. ಆಲಮಟ್ಟಿಗೆ ರೈಲು ಸಂಪರ್ಕ, ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆ ಹೊಂದಿ ಉತ್ತಮ ಸಾರಿಗೆ ಸಂಪರ್ಕ ಹೊಂದಿದೆ. ಇದರಿಂದ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ಪ್ರವಾಸಿಗರ ದಂಡು ಕೋವಿಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಜನರಿಲ್ಲದೇ ಬಿಕೋ ಎನ್ನುತ್ತಿದೆ. ರಾಕ್ ಉದ್ಯಾನ: ರಾಷ್ಟ್ರೀಯ ಹೆದ್ದಾರಿಯಿಂದ ಲಾಲ ಬಹದ್ದೂರಶಾಸ್ತ್ರಿ ಜಲಾಶಯಕ್ಕೆ ಬರುವ ಮಾರ್ಗ ಮಧ್ಯದಲ್ಲಿ ರಾಕ್ ಉದ್ಯಾನವಿದೆ.
ಇಲ್ಲಿ ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಜಾತ್ರೆ ದೃಶ್ಯ, ಕಾಡು ಪ್ರಾಣಿಗಳು-ಪಕ್ಷಿಗಳು, ಕಾಡುಜನರ ಬದುಕು, ಚಿಣ್ಣರ ನೀರಾಟ, ಚಿಟ್ಟೆಗಳ ಜೀವನ ಚರಿತ್ರೆ, ಸರಿಸೃಪಗಳು, ಕಮಲದ ಹೂವು, ಸೂರ್ಯ ಪಾರ್ಕಿನಲ್ಲಿ ಭಾರತ ನಕ್ಷೆ ಅದರ ಸುತ್ತಲೂ ಸರ್ವ ಜನಾಂಗಗಳ ಶಾಂತಿಯ ತೋಟವೆನ್ನುವ ಕವಿ ವಾಣಿ ನೆನಪಿಸುವಂತೆ ವಿವಿಧ ಕಲಾಕೃತಿಗಳು ಹಾಗೂ ದೋಣಿ ವಿಹಾರ, ಚಿಣ್ಣರ ಉದ್ಯಾನ, ಜೋಕಾಲಿ, ರಾಜಸ್ಥಾನ ಮರುಭೂಮಿ ಜನರ ಬದುಕು, ಗುಹಾಂತರ ಕಲೆ ಹೀಗೆ ಹಲವಾರು ವಿಶೇಷತೆ ಹೊಂದಿದೆ. ಅಲುಗಾಡುವ ಗೋಡೆ: ಶಾಸ್ತ್ರಿ ಜಲಾಶಯದ ಬಲ ಭಾಗದಲ್ಲಿರುವ ಲವ-ಕುಶ ಉದ್ಯಾನದಲ್ಲಿ ಹಸಿರಿನಿಂದ ಕಂಗೊಳಿಸುವ ವಿವಿಧ ಸಸ್ಯಗಳಿಂದ ನಿರ್ಮಾಗೊಂಡಿರುವ ಹಸಿರು ಗೋಡೆ ಜನ ಅಲುಗಾಡಿಸಿದರೆ ಸಾಕು ಸಂಪೂರ್ಣ ಬಾಗುತ್ತದೆ.
ಕೈ ಬಿಟ್ಟರೆ ಮೊದಲಿನಂತೆ ಎದ್ದು ನಿಲ್ಲುತ್ತದೆ. ಇಲ್ಲಿ ಲವ-ಕುಶರ ಜೀವನ ಚರಿತ್ರೆ. ಶ್ರೀರಾಮ ಹಾಗೂ ಲವ-ಕುಶರ ಮಧ್ಯೆ ಅಶ್ವಮೇಧ ಯಾಗದ ಕುದುರೆ ಕಟ್ಟಿದ ಪರಿಣಾಮ ಯುದ್ಧ ಸೇರಿದಂತೆ ರಾಮಾಯಣದ ವಿವಿಧ ಪಾತ್ರ ಇಲ್ಲಿ ಕಾಣಬಹುದು. ಕೃಷ್ಣನ ಬಾಲಲೀಲೆ: ಜಲಾಶಯದ ಬಲಭಾಗದಲ್ಲಿ ಹೊಂದಿಕೊಂಡಂತಿರುವ ಗೋಪಾಲಕೃಷ್ಣ ಉದ್ಯಾನದಲ್ಲಿ ಶ್ರೀಕೃಷ್ಣ ಗೋವುಗಳನ್ನು ಮೇಯಿಸುವ ವೇಳೆ ನೀರಿನಲ್ಲಿ ಜಲಕನ್ಯೆಯರು ಚೆಲ್ಲಾಟವಾಡುವಾಗ ಅವರ ಬಟ್ಟೆ ಕದ್ದೊಯ್ದಿರುವ ದೃಶ್ಯ, ತಾಯಿ ಕಣ್ತಪ್ಪಿಸಿ ಬೆಣ್ಣೆ ಕದಿಯುವುದು ಹೀಗೆ ಕೃಷ್ಣನ ಬಾಲ್ಯ ನೆನಪಿಸುವ ದೃಶ್ಯಗಳು ಮುದ ನೀಡುತ್ತವೆ.
ಗಮನ ಸೆಳೆದ ಪುಟಾಣಿ ರೈಲು: ದೂರದ ಊರುಗಳಿಂದ ಆಗಮಿಸಿದ್ದ ಜನರು ಮಕ್ಕಳೊಂದಿಗೆ ತಾವೂ ಕೂಡ ಪುಟಾಣಿ ರೈಲಿನಲ್ಲಿ ಕುಳಿತು ರಾಕ್ ಉದ್ಯಾನ ವೀಕ್ಷಿಸಲು ವ್ಯವಸ್ಥೆಯಿದೆ. ಆಲಮಟ್ಟಿಯ ವಿವಿಧ ಉದ್ಯಾನಗಳಲ್ಲಿ ಎಲ್ಲಿ ನೋಡಿದರೂ ಶ್ರೀಗಂಧದ ಮರಗಳು ಕಾಣ ಸಿಗುತ್ತವೆ. ಇವುಗಳ ರಕ್ಷಣೆಗೆ ಅರಣ್ಯ ಇಲಾಖೆ ಪರದಾಡುವಂತಾಗಿದೆ. ಇಲ್ಲಿ ಎಷ್ಟೇ ಪೊಲೀಸ್-ಅರಣ್ಯ ಇಲಾಖೆ ಸಿಬ್ಬಂದಿ ಹಗಲಿರುಳು ಗಸ್ತು ತಿರುಗಿದರೂ ವರ್ಷದಲ್ಲಿ ಎರಡೂ¾ರು ಬಾರಿಯಾದರೂ ಕಳ್ಳರ ಕೈಚಳಕ ಕಂಡುಬರುತ್ತಿದೆ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಬೇಕು ಅಧಿಕಾರ: ಕೆಬಿಜೆಎನ್ನೆಲ್ ವ್ಯಾಪ್ತಿಯ ಅರಣ್ಯ ವಿಭಾಗಕ್ಕೆ ಕೇವಲ ಅರಣ್ಯ ಬೆಳೆಸಲು ಮಾತ್ರ ಅಧಿ ಕಾರವಿದೆ. ಅವುಗಳನ್ನು ರಕ್ಷಿಸಲು ಮತ್ತೆ ಪ್ರಾದೇಶಿಕ ಅರಣ್ಯ ವಿಭಾಗಕ್ಕೆ ಮೊರೆ ಹೋಗಬೇಕಾಗಿದೆ. ಇದರಿಂದ ಕಳ್ಳರಿಗೆ ಯಾವುದೇ ಅಡೆತಡೆ ಇಲ್ಲದಂತಾಗಿದೆ. ಕಳ್ಳರನ್ನು ಹೆಡೆಮುರಿ ಕಟ್ಟಬೇಕಾದರೆ ಇಲ್ಲಿನ ಅರಣ್ಯ ವಿಭಾಗಕ್ಕೂ ಪ್ರಕರಣ ದಾಖಲು ಹಾಗೂ ತನಿಖೆ ಅ ಕಾರ ನೀಡಬೇಕು ಎನ್ನುತ್ತಾರೆ ಅಧಿ ಕಾರಿಗಳು. ಒಟ್ಟಾರೆ ಬರದ ಬೆಂಗಾಡಾಗಿದ್ದ ಆಲಮಟ್ಟಿ ಪರಿಸರ ಅರಣ್ಯ ಇಲಾಖೆ ದೂರದೃಷ್ಟಿ ಫಲವಾಗಿ ಆಲಮಟ್ಟಿ ಸುತ್ತ ಸೇರಿದಂತೆ 30 ಕಿ.ಮೀವರೆಗೆ ಹಸಿರಿನಿಂದ ಕಂಗೊಳಿಸುವಂತಾಗಿದೆ.