ಬಾಗಲಕೋಟೆ : ಬಹು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಆಲಮಟ್ಟಿ ಜಲಾಶಯವನ್ನು ಈಗಿರುವ 519.6೦ ಮೀಟರ್‌ನಿಂದ 524.256 ಮೀಟರ್‌ಗೆ ಎಚ್ಚರಿಸಲು ಲಕ್ಷಾಂತರ ಕೋಟಿ ಅನುದಾನ ಬೇಕಾಗುತ್ತದೆ. ಹೀಗಾಗಿ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಲು ಪ್ರಧಾನಿ ಹಾಗೂ ಕೇಂದ್ರ ಜಲ ಸಂಪನ್ಮೂಲ ಸಚಿವರಿಗೆ ಮನವಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಜಿಲ್ಲೆಯ ಮೂರು ನದಿಗಳಿಂದ ಪ್ರವಾಹಕ್ಕೆ ಒಳಗಾದ ಗ್ರಾಮಗಳ ವೈಮಾನಿಕ ಸಮೀಕ್ಷೆ ನಡೆಸಿದ ಬಳಿಕ ಮಧ್ಯಾಹ್ನ ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಆಲಮಟ್ಟಿ ಜಲಾಶಯ ಎತ್ತರಿಸಲು 2೦1೦ರಲ್ಲೇ ಕೃಷ್ಣಾ ನ್ಯಾಯಾಧೀಕರಣ ಅನುಮತಿ ನೀಡಿದೆ. ಆದರೆ, ಕಳೆದ ಐದಾರು ವರ್ಷಗಳಿಂದ ಸರ್ಕಾರ ಈ ಯೋಜನೆಯನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದರಿಂದ ಇದು ಕಾರ್ಯಗತವಾಗಿಲ್ಲ. ಜಲಾಶಯ ಎತ್ತರಿಸಿದಾಗ ಇನ್ನೂ 22 ಹಳ್ಳಿಗಳು ಮುಳುಗಡೆಯಾಗಲಿದ್ದು, 1.26 ಲಕ್ಷ ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಾಗುತ್ತದೆ. ಇದಕ್ಕೆ ಲಕ್ಷಾಂತರ ಕೋಟಿ ಅನುದಾನ ಬೇಕು. ಹೀಗಾಗಿ ಈ ಯೋಜನೆ ಪೂರ್ಣಗೊಳಿಸಲು, ರಾಜ್ಯದ ಬಿಜೆಪಿ ಸರ್ಕಾರ ಸಂಕಲ್ಪ ಮಾಡಿದ್ದು, ಅದಕ್ಕಾಗಿ ಕೇಂದ್ರದ ನೆರವು ಕೋರಲಾಗಿದೆ. ಕೇಂದ್ರದಿಂದ ನೆರವು ಕೊಡಲು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಬೇಕು ಎಂದು ಇಚೆಗೆ ದೆಹಲಿಗೆ ತೆರಳಿದ್ದ ವೇಳೆ ಮನವಿ ಮಾಡಿದ್ದಾಗಿ ತಿಳಿಸಿದರು.
ನಾಲ್ಕೈದು ವರ್ಷದಲ್ಲಿ ಪೂರ್ಣ :
ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಎಲ್ಲ ನೀರಾವರಿ ಯೋಜನೆ, 22 ಗ್ರಾಮಗಳ ಸ್ಥಳಾಂತರ ಹಾಗೂ ಭೂಸ್ವಾಧೀನ ಕಾರ್ಯವನ್ನು ನಾಲ್ಕೈದು ವರ್ಷದಲ್ಲಿ ಪೂರ್ಣಗೊಳಿಸಲಾಗುವುದು. ನೀರಾವರಿಗೆ ನಮ್ಮ ಸರ್ಕಾರ ಮೊದಲ ಆದ್ಯತೆ ನೀಡಿದ್ದು, ತ್ವರಿತವಾಗಿ ಕೆಲಸ ಮಾಡಲಾಗುವುದು ಎಂದು ಹೇಳಿದರು.