ಹೈದರಾಬಾದ್: ʼಪುಷ್ಪ-2ʼ (Pushpa 2: The Rule) ಮೂಲಕ ಅಲ್ಲು ಅರ್ಜುನ್ (Allu Arjun) ಮತ್ತೊಮ್ಮೆ ಪ್ಯಾನ್ ಇಂಡಿಯಾದಲ್ಲಿ ಮೋಡಿ ಮಾಡಿದ್ದಾರೆ. ರಿಲೀಸ್ ಆದ ಕೆಲವೇ ದಿನಗಳಲ್ಲಿ ಬಾಕ್ಸ್ ಆಫೀಸ್ ʼಪುಷ್ಪ-2ʼ ದಾಖಲೆ ಬರೆಯುವ ಕಲೆಕ್ಷನ್ ಮಾಡಿದೆ.
ಪುಷ್ಪ-2 ಸಿನಿಮಾದ ಯಶಸ್ಸಿನ ನಡುವೆಯೇ ಅಲ್ಲು ಅರ್ಜುನ್ ಅವರು ಮುಂದೆ ಯಾವ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಬಗ್ಗೆ ಅವರ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.
ಈ ಕುರಿತು ಟಾಲಿವುಡ್‌ನಲ್ಲಿ ಹೊಸ ಸುದ್ದಿಯೊಂದು ಹರಿದಾಡಿದೆ. ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಮಾಲಿವುಡ್ ಹಿಟ್ ಡೈರೆಕ್ಟರ್ ಜತೆ ಕೈ ಜೋಡಿಸಲಿದ್ದಾರೆ ಎನ್ನುವ ಮಾತೊಂದು ಹೊರಬಿದ್ದಿದೆ.
ಮಾಲಿವುಡ್ ನಿರ್ದೇಶಕ ವಿಪಿನ್ ದಾಸ್ (Malayalam film director Vipin Das) ಅವರೊಂದಿಗೆ ಅಲ್ಲು ಅರ್ಜುನ್ ಸಿನಿಮಾ ಮಾಡಲಿದ್ದಾರೆ. ಈ ಬಗ್ಗೆ ಈಗಾಗಲೇ ಆರಂಭಿಕ ಹಂತದ ಮಾತುಕತೆ ನಡೆದಿದೆ ಎಂದು ʼಸಿನಿಮಾ ಎಕ್ಸ್ ಪ್ರೆಸ್ʼ ವರದಿ ಮಾಡಿದೆ.
ಈ ಪ್ರಾಜೆಕ್ಟ್ ತೆಲುಗಿನಲ್ಲಿ ಬರಲಿದೆಯೋ ಅಥವಾ ಮಲಯಾಳಂ ಮೂಲದಲ್ಲಿ ಬರಲಿದೆಯೇ ಎನ್ನುವುದು ಇನ್ನು ಅಧಿಕೃತವಾಗಿಲ್ಲ.
ಸದ್ಯ ಮಾಲಿವುಡ್ ನಿರ್ದೇಶಕರ ಜತೆ ಅಲ್ಲು ಅರ್ಜುನ್ ಸಿನಿಮಾ ಮಾಡಲಿದ್ದಾರೆ ಎನ್ನುವ ಮಾತು ಟಾಲಿವುಡ್‌ನಲ್ಲಿ ಹರಿದಾಡಿದ್ದು ಅಭಿಮಾನಿಗಳ ವಲಯದಲ್ಲಿ ಚರ್ಚಾ ವಿಷಯವಾಗಿದೆ.
ಮುಂದಿನ ದಿನಗಳಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.
ವಿಪಿನ್ ದಾಸ್ ʼಜಯ ಜಯ ಜಯ ಹೇʼ ಹಾಗೂ ʼಗುರುವಾಯೂರ್ ಅಂಬಲನಡಾಯಿಲ್ʼ ಎನ್ನುವ ಸಿನಿಮಾದ ಮೂಲಕ ಖ್ಯಾತಿಗಳಿಸಿದ್ದಾರೆ.
ಇನ್ನು ಅಲ್ಲು ಅರ್ಜುನ್ ಅವರ ಸಿನಿಮಾದ ವಿಚಾರಕ್ಕೆ ಬಂದರೆ ಮುಂದೆ ಈಗಾಗಲೇ ಕೇಳಿ ಬಂದಿರುವ ಮಾಹಿತಿಯ ಪ್ರಕಾರ ಕೊರಟಾಲ ಶಿವ,ತ್ರಿವಿಕ್ರಮ್ ಶ್ರೀನಿವಾಸ್, ಸಂದೀಪ್ ರೆಡ್ಡಿ ವಂಗಾ ಅವರ ಜತೆಗಿನ ಪ್ರಾಜೆಕ್ಟ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.