Advertisement

ಕೃಷಿ ಭೂಮಿ ಮರಳು ತೆಗೆಯಲು ಅವಕಾಶ: ಸಿಂಧೂ

01:12 AM Oct 05, 2019 | Team Udayavani |

ಬೆಳ್ತಂಗಡಿ: ಪ್ರವಾಹದಿಂದ ತತ್ತರಿಸಿರುವ ತಾಲೂಕಿನ ಕೊಲ್ಲಿ ದಡ್ಡು ಪ್ರದೇಶ, ಗಣೇಶ ನಗರ, ದಿಡುಪೆ, ಕಜಕ್ಕೆ, ಕುಕ್ಕಾವು, ಚಾರ್ಮಾಡಿ ಹೊಸಮಠ ಮುಂತಾದ ಪ್ರದೇಶಗಳಿಗೆ ಶುಕ್ರವಾರ ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಜಮೀನುಗಳಲ್ಲಿ ತುಂಬಿರುವ ನದಿಯ ಹೂಳನ್ನು ತೆರವು ಗೊಳಿಸುವಂತೆ ಹಾಗೂ ಕೊಳೆರೋಗಕ್ಕೆ ಪರಿಹಾರ ವಿತರಿಸುವಂತೆ ಈ ಸಂದರ್ಭ ಸಂತ್ರಸ್ತರು ಮನವಿ ಮಾಡಿದರು. ಬಳಿಕ ಬೆಳ್ತಂಗಡಿ ಪ್ರವಾಸಿ ಮಂದಿರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಗಳು, ಪ್ರವಾಹದಿಂದಾಗಿ ಕೃಷಿ ಭೂಮಿಯಲ್ಲಿ ತುಂಬಿರುವ ನದಿಯ ಮರಳನ್ನು ಗ್ರಾ.ಪಂ. ಸುಪರ್ದಿಯಲ್ಲಿ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಕಾನೂನಿನ ತೊಡಕಿ ರುವುದರಿಂದ ನದಿಯಿಂದ ಹೂಳು ತೆರವಿಗೆ ಅವಕಾಶವಿಲ್ಲ. ಜಿಲ್ಲೆಯಲ್ಲಿ ಮರಳು ಶೇಖರಣೆಗೆ 22 ಸ್ಥಳಗಳನ್ನು ಗುರುತಿಸಲಾಗಿದ್ದು 12ರ ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ. ಇದೀಗ ಪ್ರವಾಹದಿಂದಾಗಿ ಸೃಷ್ಟಿಯಾಗಿರುವ ಮರಳು ದಿಣ್ಣೆಗಳ ಪರಿಶೀಲನೆ ಮಾಡಲಾಗುತ್ತಿದೆ ಎಂದರು.

53 ಕುಟುಂಬ ಸ್ಥಳಾಂತರ
ನದಿ ತೀರದ 22 ಕುಟುಂಬಗಳು ಹಾಗೂ ಕುಸಿತದಿಂದ ಹಾನಿಗೊಳಗಾದ 31 ಮನೆಗಳ ಜನರ ಸ್ಥಳಾಂತರಕ್ಕೆ ಆದ್ಯತೆ ನೀಡಲಾಗಿದೆ. ಕೃಷಿ ನಾಶಕ್ಕೆ ಎನ್‌.ಡಿ.ಆರ್‌.ಎಫ್‌ ಮಾದರಿಯಂತೆ ಪರಿಹಾರ ವಿತರಿಸಲಾಗುವುದು. ಬೆಳ್ತಂಗಡಿ ತಾಲೂಕಿನಿಂದ ಸುಮಾರು 1,200 ಅರ್ಜಿಗಳು ಬಂದಿದ್ದು, ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಗರಿಷ್ಠ ಪರಿಹಾರ
ಹಾನಿಗೊಳಗಾದ ಮನೆಗಳಿಗೆ ಗರಿಷ್ಠ ಪರಿಹಾರ ಒದಗಿಸಲಾಗಿದೆ. ನಿವೇಶನ ಹಂಚುವ ಸಲುವಾಗಿ ಕೆಲವು ಪ್ರದೇಶಗಳನ್ನು ಗುರುತಿಸಲಾಗಿದೆ. ಶೀಘ್ರವೇ ನಿವೇಶನ ಹಂಚಿಕೆ ಮಾಡಲಾಗುವುದು. ಈಗಾಗಲೇ ಸ್ಥಳಾವಕಾಶ ಇದ್ದವರು ಅದೇ ಸ್ಥಳದಲ್ಲಿ ಮನೆ ನಿರ್ಮಾಣಕ್ಕೆ ಅವಕಾಶವಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯತ್‌ ಸಿಇಒ ಡಾ| ಆರ್‌. ಸೆಲ್ವಮಣಿ, ತಹಶೀಲ್ದಾರ್‌ ಗಣಪತಿ ಶಾಸ್ತ್ರಿ, ತಾ.ಪಂ. ಇಒ ಕೆ.ಇ. ಜಯರಾಂ, ಸ್ಥಳೀಯ ಪಂಚಾಯತ್‌ ಅಧ್ಯಕ್ಷರು, ಕಂದಾಯ ನಿರೀಕ್ಷಕ ರವಿ., ತಾಲೂಕು ಪಂಚಾಯತ್‌ ಸಿಬಂದಿ ಗಣೇಶ್‌ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next