Advertisement
2023-24ನೇ ಸಾಲಿನ ತಸ್ತೀಕ್ ಭತ್ಯೆ ಅಡಿಯಲ್ಲಿ ಮೊದಲ ಕಂತಿನ ಅನುದಾನ 77.85 ಕೋಟಿ ರೂ.ಬಿಡುಗಡೆ ಮಾಡಿದೆ. ಈ ಬಗ್ಗೆ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ತಸ್ತೀಕ್ ಭತ್ಯೆಯಡಿ ಮೊದಲ ಕಂತಿನಲ್ಲಿ 77 ಕೋಟಿ 85 ಲಕ್ಷದ 54 ಸಾವಿರದ 497 ರೂ.ಗಳನ್ನು ಖಜಾನೆ-2 ಮೂಲಕ ಅಪ್‌ಲೋಡ್ ಮಾಡಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದೆ.ಸರ್ಕಾರದಿಂದ ಮಂಜೂರಾದ ತಸ್ತೀಕ್ ಮೊತ್ತವನ್ನು ಪ್ರಸ್ತುತ ಆರ್ಥಿಕ ವರ್ಷದಲ್ಲಿ ಯಾವುದೇ ನಿಬಂಧನೆಗಳನ್ನು ವಿಧಿಸದೆ ತುರ್ತಾಗಿ ಸಂಬಂಧಪಟ್ಟ ಸಂಸ್ಥೆ ಇಲ್ಲವೇ ದೇವಾಲಯಗಳ ವಿಳಂಬಕ್ಕೆ ಅವಕಾಶ ಕಲ್ಪಿಸದೆ ಸಂಬಂಧಪಟ್ಟ ತಹಶೀಲ್ದಾರ್ ಅವರು ಆಯಾ ಸಂಸ್ಥೆ/ದೇವಾಲಯಗಳ ಖಾತೆಯಿಂದ ಅರ್ಚಕರ ಖಾತೆಗೆ ನೇರವಾಗಿ ಜಮಾ ಮಾಡುವಂತೆ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಸೂಚಿಸಿದ್ದಾರೆ.
ಈ ಕುರಿತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಇಲಾಖೆಯ ಸಿ ದರ್ಜೆ ದೇವಸ್ಥಾನಗಳ ಅರ್ಚಕರ ಸಂಘ ಪತ್ರ ಬರೆದಿತ್ತು. ಸರ್ಕಾರ ಪ್ರತಿ ವರ್ಷ ದೇವಸ್ಥಾನಗಳಲ್ಲಿ ನಿತ್ಯ ಪೂಜಾ ಕಾರ್ಯ ಇತ್ಯಾದಿ ಸಣ್ಣ ಪುಟ್ಟ ಕೆಲಸಗಳಿಗೆ ತಸ್ತೀಕ್ ಹಣ ಬಿಡುಗಡೆ ಮಾಡುತ್ತಿದೆ. ಈ ಹಣ ಬಿಡುಗಡೆಗೆ ಖಜಾನೆ ಅಧಿಕಾರಿಗಳು ಶೇ.20 ಕಮಿಷನ್ ಕೇಳುತ್ತಿದ್ದಾರೆ. ಕಮಿಷನ್ ಕೊಡದಿದ್ದರೆ ಹಣ ಬಿಡುಗಡೆ ಮಾಡುತ್ತಿಲ್ಲ. ಹಣ ಬಿಡುಗಡೆಗೂ ದಲ್ಲಾಳಿಗಳಿಗೆ ಹಣ ಕೊಡಬೇಕಾಗಿದೆ. ಆದ್ದರಿಂದ ಕಮಿಷನ್ ವ್ಯವಹಾರವನ್ನು ಸರ್ಕಾರ ತಡೆಯಬೇಕು ಎಂದು ಆಗ್ರಹಿಸಿತ್ತು. ಅರ್ಚಕರ ಮನವಿಗೆ ಸ್ಪಂದಿಸಿದ್ದ ಸಚಿವ ರಾಮಲಿಂಗಾರೆಡ್ಡಿ, ಇನ್ಮುಂದೆ ಅರ್ಚಕರ ಖಾತೆಗೆ ನೇರವಾಗಿ ತಸ್ತಿಕ್ ಹಣ ಜಮೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.