Advertisement

ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂ ಸಿದ್ದರಾಮಯ್ಯಗೆ ಪತ್ರ

12:10 AM Nov 26, 2024 | Team Udayavani |

ಬೆಂಗಳೂರು: ಶಾಲೆಗಳಲ್ಲಿ ದುರ್ವರ್ತನೆ ತೋರುವ ವಿದ್ಯಾರ್ಥಿಗಳ ಮೇಲೆ ಕ್ರಮ ಕೈಗೊಳ್ಳಲು ಶಿಕ್ಷಕರಿಗೆ ಅವಕಾಶ ಮಾಡಿಕೊಡಬೇಕು ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘಟನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಶಾಲಾ ಶಿಕ್ಷಣ ಇಲಾಖೆಗೆ ಪತ್ರ ಬರೆದು ಮನವಿ ಮಾಡಿದೆ.

Advertisement

ಇತ್ತೀಚೆಗೆ ಶಾಲಾ ಶಿಕ್ಷಣ ಇಲಾಖೆ ಆಯೋಜಿಸಿದ್ದ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಯೊಬ್ಬ “ಶಿಕ್ಷಣ ಸಚಿವರಿಗೆ ಕನ್ನಡ ಬರುವುದಿಲ್ಲ’ ಎಂದು ಹೇಳಿ ಮುಜುಗರಕ್ಕೀಡು ಮಾಡಿದ್ದ. ಈ ಪ್ರಕರಣವನ್ನು ಉಲ್ಲೇಖಿಸಿ ಪತ್ರ ಬರೆದಿರುವ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್‌, ಇಂತಹ ಮುಜುಗರಕ್ಕೀಡಾಗುವ ಪ್ರಸಂಗವನ್ನು ಶಿಕ್ಷಕರು ಪ್ರತೀ ದಿನ ಎದುರಿಸುತ್ತಿದ್ದು, ಈ ರೀತಿ ಕಿರುಕುಳ ನೀಡುವ ಮಕ್ಕಳ ಮೇಲೆ ಕ್ರಮ ಕೈಗೊಳ್ಳುವ ಅಧಿಕಾರ ನೀಡಬೇಕು ಎಂದು ಕೋರಿದ್ದಾರೆ.

ಶಾಲಾ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಅಸಭ್ಯ ವರ್ತನೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಶಿಕ್ಷಣ ಮಂತ್ರಿಗಳಿಗೆ ಆದ ಅನುಭವವೇ ದಿನನಿತ್ಯ ಶಿಕ್ಷಣ ಸಂಸ್ಥೆಯ ಪ್ರಾಧ್ಯಾಪಕ-ಶಿಕ್ಷಕರಿಗೆ ಆಗುತ್ತಿದೆ. ವಿದ್ಯಾರ್ಥಿಗಳು ದುರ್ವರ್ತನೆ, ಕಿರುಕುಳ, ಅಪಮಾನ, ಇತರ ಹೆಸರುಗಳನ್ನು ಇಡುವುದು, ಅವಹೇಳನ ಮಾಡುವುದು, ಅಶ್ಲೀಲವಾಗಿ ನಡೆದುಕೊಳ್ಳುವುದು, ಹಲ್ಲೆ ಮಾಡುವುದು ಮುಂತಾದ ಚಟುವಟಿಕೆ ಮಾಡುತ್ತಿದ್ದು, ಶಿಕ್ಷಕರು ಅಸಹಾಯಕರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಪಾಲಕರ ವರ್ತನೆ ಬಗ್ಗೆ ಆತಂಕ
ಇತ್ತೀಚಿನ ದಿನಗಳಲ್ಲಿ 2 ವರ್ಷದ ಮಗುವಿನ ಬಾಯಲ್ಲಿ ಅವಾಚ್ಯ ಶಬ್ದಗಳನ್ನು ಮಾತನಾಡಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಪ್ರವೃತ್ತಿಯೂ ಹೆಚ್ಚುತ್ತಿದೆ. ಇದು ಇತರ ಮಕ್ಕಳ ಮೇಲೆ ಪರಿಣಾಮ ಬೀರಲಿದೆ. ಇಂತಹ ವರ್ತನೆ ಬಗ್ಗೆಯೂ ಸರಕಾರ, ಶಿಕ್ಷಣ ಇಲಾಖೆ, ಮಕ್ಕಳ ಹಕ್ಕು ಆಯೋಗ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಖಂಡನೀಯ ಎಂದು ಒಕ್ಕೂಟ ಹೇಳಿದೆ.

ಖಂಡನೀಯ
ವಿದ್ಯಾರ್ಥಿಗಳ ಇಂತಹ ವರ್ತನೆ ಸರಿ ಎಂಬ ರೀತಿಯಲ್ಲೇ ಶಿಕ್ಷಣ ಕ್ಷೇತ್ರದ ಪ್ರತಿನಿಧಿಗಳು ಸಮರ್ಥಿಸಿಕೊಳ್ಳುತ್ತಿದ್ದಾರೆ. ರಾಜಕೀಯ ಲಾಭಕ್ಕಾಗಿ ಇವುಗಳನ್ನು ಬಳಕೆ ಮಾಡುತ್ತಿರುವುದು ಖಂಡನೀಯ. ಶಿಕ್ಷಕರ ಕ್ಷೇತ್ರದ ಪ್ರತಿನಿಧಿಗಳು ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಒಕ್ಕೂಟ ಆಗ್ರಹಿಸಿದೆ.

Advertisement

-ಶಾಲೆಗಳಲ್ಲಿ ದುರ್ವರ್ತನೆ ತೋರುವ ಮಕ್ಕಳ ಮೇಲೆ ಕ್ರಮ ಕೈಗೊಳ್ಳಲು ನಿಯಮ ರೂಪಿಸಿ
-ಶಿಕ್ಷಕರ ಅಸಹಾಯಕತೆ ದೂರ ಮಾಡಲು ಕ್ರಮಕ್ಕೆ ಆದೇಶಿಸಲು ಸಿಎಂಗೆ ಮನವಿ
-ಪಾಲಕರು, ಶಿಕ್ಷಣ ಕ್ಷೇತ್ರದ ಪ್ರತಿನಿಧಿಗಳ ವರ್ತನೆ ಬಗ್ಗೆಯೂ ಒಕ್ಕೂಟದ ಆತಂಕ

ಕನಿಷ್ಠ ಕ್ರಮ ಕೈಗೊಳ್ಳಲು ಅವಕಾಶ ಕೊಡಿ
ದುರ್ವರ್ತನೆ ತೋರುವ ವಿದ್ಯಾರ್ಥಿಗಳ ಮೇಲೆ ಶಿಕ್ಷಕರು ಒಳ್ಳೆಯ ಉದ್ದೇಶದಿಂದ ಕನಿಷ್ಠ ತಿಳಿವಳಿಕೆ ಹಾಗೂ ಕ್ರಮ ತೆಗೆದುಕೊಳ್ಳುವುದು ಅಪರಾಧವಲ್ಲ ಎಂಬ ನ್ಯಾಯಾಲಯಗಳ ಅಭಿಪ್ರಾಯವನ್ನು ಪರಿಗಣಿಸಿ ಮಕ್ಕಳ ಮೇಲೆ ಕ್ರಮ ಕನಿಷ್ಠ ಕ್ರಮ ಕೈಗೊಳ್ಳಲು ಅವಕಾಶ ನೀಡಬೇಕು. ತಪ್ಪೆಸಗಿದ ವಿದ್ಯಾರ್ಥಿಗಳಿಂದ ಕನಿಷ್ಠ ಮುಚ್ಚಳಿಕೆ ಪತ್ರ ಬರೆಸಿಕೊಳ್ಳಲು ಶಿಕ್ಷಕರಿಗೆ ಅಧಿಕಾರ ನೀಡಬೇಕು ಎಂದು ಆಗ್ರಹಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next